11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಶಿಕ್ಷಾಬಂಧಿ ಕೊನೆಗೂ ಅರೆಸ್ಟ್

ಕಲಬುರಗಿಯಲ್ಲಿ 2009ರಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಹತ್ಯೆ ಮಾಡಿದ್ದ ಆರೋಪಿಯನ್ನು 11 ವರ್ಷಗಳ ಬಳಿಕ ಪುಣೆಯಲ್ಲಿ ಬಂಧಿಸಲಾಗಿದೆ. ಜೈಲಿನಿಂದ ಪರಾರಿಯಾಗಿ, ಹೆಸರು ಬದಲಿಸಿಕೊಂಡು ಪೊಲೀಸ್‌ ಇನ್ಫಾರ್ಮರ್​ನಾಗಿ ಕೆಲಸ ಮಾಡುತ್ತಿದ್ದ. ಕಲಬುರಗಿ ಸಬ್ ಅರ್ಬನ್ ಠಾಣೆ ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿಯನ್ನ ಬಂಧಿಸಿ ಮತ್ತೆ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಶಿಕ್ಷಾಬಂಧಿ ಕೊನೆಗೂ ಅರೆಸ್ಟ್
11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಶಿಕ್ಷಾಬಂಧಿ ಕೊನೆಗೂ ಅರೆಸ್ಟ್
Edited By:

Updated on: Feb 28, 2025 | 7:26 PM

ಕಲಬುರಗಿ, ಫೆಬ್ರವರಿ 28: ಆತ ಪೊಲೀಸ್ ಕಾನ್‌ಸ್ಟೆಬಲ್ ನನ್ನ ಕೊಲೆ (kill) ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಜೈಲಿನಲ್ಲೂ ಕಿರಿಕ್ ಮಾಡಿ ಮತ್ತೊಂದು ಜೈಲಿಗೆ ಶಿಫ್ಟ್ ಅಗಿದ್ದ. ಅಲ್ಲೂ ಸುಮ್ಮನಿರದೇ ಅನಾರೋಗ್ಯದ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯಲ್ಲಿ ಜೈಲು ಕಾವಲು ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಅಗಿದ್ದ. ಮಹಾರಾಷ್ಟ್ರ ಪುಣೆಯಲ್ಲಿ ತಲೆಮರೆಸಿಕೊಂಡು, ಹೆಸರು ಬದಲಿಸಿಕೊಂಡು ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಶಿಕ್ಷಾಬಂಧಿ ಕೈದಿ ಬೆನ್ನುಬಿದ್ದಿದ್ದ ಖಾಕಿ ತಂಡ ಬರೋಬ್ಬರಿ 11 ವರ್ಷಗಳ ಬಳಿಕ ಹೆಡೆಮುರಿ ಕಟ್ಟಿ ಮತ್ತೆ ಜೈಲಿಗಟ್ಟಿದ್ದಾರೆ.

11 ವರ್ಷಗಳ ಬಳಿಕ ಕೊನೆಗೂ ಅರೆಸ್ಟ್

ಆರೋಪಿ ಪೊಲೀಸ್ ಕಾನ್‌ಸ್ಟೆಬಲ್ ನನ್ನ ಕೊಲೆಗೈದು ಖಾಕಿಗೆ ಚಳ್ಳೆಹಣ್ಣು ತಿನ್ನಿಸಿ ಮಹಾರಾಷ್ಟ್ರದ ಪುಣೆಯಲ್ಲಿ ಠಿಕಾಣಿ ಹೂಡಿದ್ದ. ಕೈದಿಯ ಹೆಸರು ಅಂಬರಿಷ್ ನಾಟಿಕಾರ್. ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ನಿವಾಸಿ. 2009 ರಲ್ಲಿ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯಲ್ಲಿ ಜಗಳವಾಗಿತ್ತು. ಆಗ ಠಾಣೆಯ ಕಾನ್ಸಟೇಬಲ್‌ ಅಶ್ವಿನಕುಮಾರ್ ಹೋಗಿ ಈತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬರುವಾಗ ಕಾನ್ಸಟೇಬಲ್‌ ಅಶ್ವಿನಕುಮಾರ್ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದ. ಕೊಲೆ ಪ್ರಕರಣದಲ್ಲಿ ಅಂಬರೀಶ್ ನನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದರು.

ಇದನ್ನೂ ಓದಿ: ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿಗಳಿಗೆ ಮಾರಾಟ: ಕಿಂಗ್​​ಪಿನ್ ಬಂಧನ

2011 ರಲ್ಲಿ ಕೋರ್ಟ್ ಅಂಬರೀಶ್​​ಗೆ ಜೀವಾವಧಿ ಶಿಕ್ಷೆ ವಿಧಿಸಿ 50 ಸಾವಿರ ರೂ ದಂಡ ಹಾಕಿತ್ತು. ಕಾನ್ಸಟೇಬಲ್‌ ನನ್ನೇ ಹತ್ಯೆಗೈದಿರುವ ಅಂಬರೀಶ್ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಲಬುರಗಿ ಜೈಲು ಸೇರಿದ್ದ‌. ಮೂರು ವರ್ಷಗಳ ಕಾಲ ಕಲಬುರಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಅಂಬರೀಶ್ ಅಲ್ಲಿಯೂ ಕೂಡ ಕೈದಿಗಳ ಜೊತೆಗೆ ಜಗಳ ಮಾಡಿದ್ದ. ಹೀಗಾಗಿ ಕೈದಿ ಅಂಬರೀಶ್ ನನ್ನ 2014 ರಲ್ಲಿ ವಿಜಯಪುರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಕಿರಾತಕ ನೌಟಂಕಿ ಕೈದಿ ಅಂಬರೀಶ್ ಅಲ್ಲಿಯೂ ಅನಾರೋಗ್ಯ ‌ನೆಪವೊಡ್ಡಿ ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿದ್ದ.

ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ

ಜೈಲು ಕಾವಲು ಸಿಬ್ಬಂದಿ ಕಣ್ಣುತಪ್ಪಿಸಿ ಆಸ್ಪತ್ರೆಯ ಸೇಲ್ ವಾರ್ಡ್​​ನಿಂದ ಎಸ್ಕೇಪ್ ಆಗಿ, ನೇರವಾಗಿ ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡು ಠಿಕಾಣಿ ಹೂಡಿದ್ದ. ಯಾವುದೇ ಸುಳಿವು ಬಿಟ್ಟುಕೊಡದೆ ಹೆಸರು ಬದಲಿಸಿಕೊಂಡು ಸಹಜ ಬದುಕು ನಡೆಸುತ್ತಿದ್ದ. ಎಷ್ಟರ ಮಟ್ಟಿಗೆ ಕಿಲಾಡಿ ಈ ಅಂಬರೀಶ್ ಅಂದ್ರೆ ಪುಣೆಯಲ್ಲಿ ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಕೂಡ ಮಾಡುತ್ತಿದ್ದ. ಆದರೆ ಶಿಕ್ಷಾಬಂಧಿ ಅಂಬರೀಶ್ ನನ್ನ ಕಲಬುರಗಿ ಪೊಲೀಸರು ಬೆನ್ನು ಬಿದ್ದು ತಾಂತ್ರಿಕವಾಗಿ ಮಾಹಿತಿ ಕಲೆಹಾಕಿ ಕೊನೆಗೂ 11 ವರ್ಷಗಳ ಬಳಿಕ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ‌.

ಚಾಲಾಕಿ ಶಿಕ್ಷಾಬಂಧಿ ಅಂಬರೀಶ್, ಆಸ್ಪತ್ರೆಯಿಂದ ಎಸ್ಕೇಪ್ ಆದ ಬಳಿಕ ತನ್ನ ಮನೆಯವರಿಗೆ ಯಾರಿಗೂ ಸಂಪರ್ಕವೇ ಮಾಡಿಲ್ಲ. ಖಾಕಿ ಸುಳಿವು ಸಿಗಬಹುದು ಅಂತಾ ಮನೆಯವರಿಂದಲೂ 11 ವರ್ಷಗಳ ಕಾಲ ಸಂಪರ್ಕ ಮಾಡದೇ ಪುಣೆಯಲ್ಲಿಯೇ ಉಳಿದಿದ್ದ. ಅಂದಹಾಗೆ ಪುಣೆಯಲ್ಲಿಯೇ ಮದುವೆ ಮಾಡಿಕೊಂಡು ಹಾಯಾಗಿ ಜೀವನ ನಡೆಸುತ್ತಿದ್ದ. ಮೃತ ಪಟ್ಟಿದ್ದ ಹೆಂಡತಿಯ ಸಹೋದರನ ಐಡಿ ಕಾರ್ಡ್ ಬಳಸಿ ಭೋಗಸ್ ಐಡಿ ಕಾರ್ಡ್ ಅನ್ನ ಮಾಡಿಕೊಂಡು ಹೆಸರು ಬದಲಿಸಿಕೊಂಡಿದ್ದ. ಪುಣೆ ಪೊಲೀಸರಿಗೂ ಸಣ್ಣ ಸುಳಿವು ಸಿಗದಂತೆ ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದರೂ ಶಿಕ್ಷಾಬಂಧಿ ಅಂಬರೀಶ್ ಬಂಧನಕ್ಕೆ ಬಲೆ ಬೀಸಿದ್ದ ಕಲಬುರಗಿಯ ಸಬ್ ಅರ್ಬನ್ ಠಾಣೆ ಪೊಲೀಸರ ತಂಡ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮಾಹಿತಿ ಕಲೆಹಾಕಿ ಕೊನೆಗೂ ತಲೆಮರೆಸಿಕೊಂಡಿದ್ದ ಶಿಕ್ಷಾಬಂಧಿ ಅಂಬರೀಶ್ ನನ್ನ ಪೊಲೀಸರು ಲಾಕ್ ಮಾಡಿ ಮತ್ತೆ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಕಾಮದ ತೀಟೆಗೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ: ಎರಡು ಮಕ್ಕಳು ಅನಾಥ

ಇನ್ನು ಅಪರಾಧಿಗಳು ಚಾಪೆ ಕೆಳಗೆ ನುಸುಳಿದ್ರೆ, ಪೊಲೀಸರು ರಂಗೋಲಿ ಕೆಳಗೆ ನುಸುಳುತ್ತಾರೆ ಅನ್ನೋ ಮಾತಿನಂತೆ. ಶಿಕ್ಷಾಬಂಧಿ ಅಂಬರೀಶ್ ನನ್ನ 11 ವರ್ಷದ ಬಳಿಕ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆ ಮಾಡಿರುವ ಸಬ್ ಅರ್ಬನ್ ಠಾಣೆ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಕಮಿಷನರ್ ಡಾ, ಶರಣಪ್ಪ ಪ್ರಶಂಸೆ ಪತ್ರ ನೀಡಿ ಪ್ರೋತ್ಸಾಹಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.