ಅಫಜಲಪುರ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಮತ್ತೆ ಕಳ್ಳತನ, ಹತ್ತಾರು ಅನುಮಾನಗಳ ಹುತ್ತ, ಹೆಚ್ಚಿಸಬೇಕಿದೆ ಇನ್ನಷ್ಟು ಭದ್ರತೆ
Temple Theft: ದೇವಸ್ಥಾನದಲ್ಲಿ ಓರ್ವ ಹೋಮ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದ್ರು ಕೂಡಾ ಖತರ್ನಾಕ್ ಕಳ್ಳರು ರಾತ್ರಿ ಸಮಯದಲ್ಲಿ ದೇವಸ್ಥಾನಕ್ಕೆ ಕಳ್ಳ ಬೆಕ್ಕುಗಳಂತೆ ಬಂದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಅದು ಲಕ್ಷಾಂತರ ಭಕ್ತರ ಆರಾಧ್ಯ ಸ್ಥಾನ. ಪ್ರತಿನಿತ್ಯ ಆ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರ್ತಾರೆ. ದೇವಿಯ ದರ್ಶನ ಪಡೆಯುತ್ತಾರೆ. ಆದ್ರೆ ಇದೇ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದ ಕಳ್ಳರು, ದೇವಿಯ ಬಂಗಾರದ ಆಭರಣಗಳು, ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ. ಕೆಲ ವರ್ಷಗಳ ಹಿಂದೆ ದೇವಸ್ಥಾನದ ಪೂಜಾರಿಗಳು ಮತ್ತು ಸಿಬ್ಬಂದಿಯೇ ಇದೇ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ್ದರು (Temple Theft) ಎಂಬುದು ಗಮನಾರ್ಹ. ಆದ್ರೆ ಇದೀಗ ಮತ್ತೆ ಅದೇ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು, ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ದೇವಸ್ಥಾನದಲ್ಲಿ ಒಂದಡೆ ಪೊಲೀಸರಿಂದ ಪರಿಶೀಲನೆ. ಮತ್ತೊಂದಡೆ ಚಿಲ್ಲರೆ ದುಡ್ಡನ್ನು ಖಾಲಿ ಜಾಗದಲ್ಲಿ ಬಿಸಾಕಿ ಹೋಗಿರುವ ದುಷ್ಕರ್ಮಿಗಳು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ (Afzalpur Ghattaragi Bhagyavanti Temple).
ದೇವಿಯ ಒಡವೆಯನ್ನೂ ಬಿಡದೆ ಕದ್ದೊಯ್ದ ಕಳ್ಳರು:
ಹೌದು ಘತ್ತರಗಾ ಭಾಗ್ಯವಂತಿ ದೇವಸ್ಥಾನ, ಈ ಭಾಗದಲ್ಲಿ ಸುಪ್ರಸಿದ್ದ ದೇವಸ್ಥಾನ. ಪ್ರತಿನಿತ್ಯ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರ್ತಾರೆ. ಈ ಭಾಗದ ಶ್ರದ್ದಾ ಕೇಂದ್ರವಾಗಿರುವ ದೇವಸ್ಥಾನಕ್ಕೆ ರಾಜ್ಯದ ಅನೇಕ ಕಡೆ ಭಕ್ತರು ಇದ್ದಾರೆ. ಆದ್ರೆ ರಾತ್ರಿ ಕಳೆದು ಬೆಳಗಾಗೋದರಲ್ಲಿ ದೇವಸ್ಥಾನದ ಸಿಬ್ಬಂದಿ ಮತ್ತು ಭಕ್ತರು ಶಾಕ್ ಆಗಿದ್ದಾರೆ. ಯಾಕಂದ್ರೆ ಬುಧವಾರ ರಾತ್ರಿ ಒಂದು ಗಂಟೆ ಸಮಯದಲ್ಲಿ ದೇವಸ್ಥಾನದ ಹಿಂದಿನ ಬಾಗಿಲು ಮುರಿದು ಒಳ ನುಗ್ಗಿರೋ ಮೂವರು ಕಳ್ಳರು, ದೇವಿಯ ಚಿನ್ನದ ಒಡವೆ, ದೇವಿಯ ಬಟ್ಟೆಗಳು ಸೇರಿದಂತೆ ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ.
ದೇವಸ್ಥಾನದಿಂದ ಹುಂಡಿಯಲ್ಲಿನ ಎಲ್ಲಾ ಹಣವನ್ನು ಬಟ್ಟೆಯಲ್ಲಿ ಹಾಕಿಕೊಂಡು ಹೋಗಿದ್ದ ದುಷ್ಕರ್ಮಿಗಳು, ದೇವಸ್ಥಾನದ ಸಮೀಪ ಹೋಗಿ, ಚಿಲ್ಲರೆ ಹಣವನ್ನು ತಗೆದುಕೊಂಡು ಹೋಗುವದು ಕಷ್ಟವಾದಾಗ, ಚಿಲ್ಲರೆ ಹಣವನ್ನು ರಸ್ತೆ ಸಮೀಪವೇ ಬಿಸಾಡಿ, ನೋಟುಗಳನ್ನು ಮಾತ್ರ ತಗೆದುಕೊಂಡು ಹೋಗಿದ್ದಾರೆ. ದೇವಿಯ ಮೂರ್ತಿಗೆ ಇರಿಸಲಾಗಿದ್ದು 35 ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಮುಖಕ್ಕೆ ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಎಂಟ್ರಿ ನೀಡಿದ್ದ ಕಳ್ಳರು ಹಣ ಮತ್ತು ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಖುದ್ದು ಕಲಬುರಗಿ ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.
ಇನ್ನು ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಇದೇ ಮೊದಲೇನಲ್ಲ. ಮೇಲಿಂದ ಮೇಲೆ ದೇವಸ್ಥಾನದಲ್ಲಿ ಕಳ್ಳತನ ಘಟನೆಗಳು ನಡೆಯುತ್ತಲೇ ಇವೆ. ಈ ಹಿಂದೆ ಕೂಡಾ ಕಳ್ಳರು ಕಳ್ಳತನ ಮಾಡಿದ್ರು. ಇನ್ನು ಕೆಲ ವರ್ಷಗಳ ಹಿಂದೆ ದೇವಸ್ಥಾನದ ಸಿಬ್ಬಂದಿಯೇ, ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ್ದರು. ಅದು ಸಿಸಿಟಿವಿಯಲ್ಲಿ ಸೆರೆಯಾದ ನಂತರ, ಅನೇಕ ಸಿಬ್ಬಂದಿ ಮತ್ತು ಪೂಜಾರಿಗಳನ್ನು ಕೆಲಸದಿಂದ ತಗೆದು ಹಾಕಲಾಗಿತ್ತು.
ಇನ್ನು ದೇವಸ್ಥಾನದಲ್ಲಿ ಓರ್ವ ಹೋಮ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದ್ರು ಕೂಡಾ ಖತರ್ನಾಕ್ ಕಳ್ಳರು ರಾತ್ರಿ ಸಮಯದಲ್ಲಿ ದೇವಸ್ಥಾನಕ್ಕೆ ಕಳ್ಳ ಬೆಕ್ಕುಗಳಂತೆ ಬಂದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಸದ್ಯ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಭಾಗ್ಯವಂತಿ ದೇವಸ್ಥಾನದಲ್ಲಿ ಮೇಲಿಂದ ಮೇಲೆ ಕಳ್ಳತನವಾಗುತ್ತಿರುವದು ಭಕ್ತರ ನೋವಿಗೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಮತ್ತು ಮುಜರಾಯಿ ಇಲಾಖೆ, ದೇವಸ್ಥಾನದಲ್ಲಿ ಇನ್ನಷ್ಟು ಭದ್ರತೆಯನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಬೇಕಿದೆ.
ವರದಿ: ಸಂಜಯ್, ಟಿವಿ 9, ಕಲಬುರಗಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ಮಾಡಿ