ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ; ಕಿಂಗ್ಪಿನ್ ರುದ್ರಗೌಡ ಪಾಟೀಲ್ಗಾಗಿ ಸಿಐಡಿ ಹುಡುಕಾಟ, ಬಿಜೆಪಿ ನಾಯಕಿಯೂ ಪತ್ತೆಯಿಲ್ಲ
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರುದ್ರಗೌಡ ಪಾಟೀಲ್ ಸೋದರ, ಅಫಜಲ್ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್ ಪಾಟೀಲ್ನನ್ನು ಸಿಐಡಿ ಈಗಾಗಲೇ ಬಂಧಿಸಿದೆ.
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣವನ್ನು ಸಿಐಡಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಇದರಲ್ಲಿ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ಗಾಗಿ ಶೋಧ ಕಾರ್ಯ ನಡೆಸುತ್ತಿದೆ. ಈ ರುದ್ರ ಗೌಡ ಪಾಟೀಲ ಕಲಬುರಗಿ ಜಿಲ್ಲೆಯಲ್ಲಿ ನೂರಾರು ಜನರಿಗೆ ಅಕ್ರಮವಾಗಿ ಪರೀಕ್ಷೆ ಬರೆಸಿದ್ದಾನೆ ಎನ್ನಲಾಗಿದೆ. 40-80 ಲಕ್ಷ ರೂಪಾಯಿ ಹಣ ಪಡೆದು, ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ನೀಡಿ ಪರೀಕ್ಷೆ ಬರೆಸುತ್ತಿದ್ದ. ಅಕ್ರಮ ಬಯಲಿಗೆ ಬಂದು ಸಿಐಡಿ ತನಿಖೆ ನಡೆಸುತ್ತಿದೆ. ಮಹಾರಾಷ್ಟ್ರ-ಕರ್ನಾಟಕ ಸೇರಿ ಹಲವು ಕಡೆಗಳಲ್ಲಿ ರುದ್ರಗೌಡನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರುದ್ರಗೌಡ ಪಾಟೀಲ್ ಸೋದರ, ಅಫಜಲ್ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್ ಪಾಟೀಲ್ನನ್ನು ಸಿಐಡಿ ಈಗಾಗಲೇ ಬಂಧಿಸಿದೆ. ಇನ್ನ ಸೋದರನ ಬಂಧನವಾಗುತ್ತಿದ್ದಂತೆ ಅತ್ತ ರುದ್ರಗೌಡ ಪಾಟೀಲ್ ನಾಪತ್ತೆಯಾಗಿದ್ದಾನೆ. ಪಾಟೀಲ್ ಸೋದರರು ರಾಜಕೀಯವಾಗಿ ಪ್ರಬಲರಾಗಲು ಪ್ರಯತ್ನಿಸುತ್ತಿದ್ದರು. ಅದರಲ್ಲೂ ರುದ್ರಗೌಡ ಪಾಟೀಲ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದರು. ಅದಕ್ಕಾಗಿ ಹಲವು ರೀತಿಯ ಸಮಾಜಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇಂದು ಪಾಟೀಲ್ ಸಹೋದರರು ಅಫಜಲಪುರದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಕೂಡ ಹಮ್ಮಿಕೊಂಡಿದ್ದರು. ಆದರೆ ಸಮಾರಂಭಕ್ಕೂ ಮೊದಲೇ ಮಹಾಂತೇಶ್ ಪಾಟೀಲ್ ಬಂಧನವಾಗಿದೆ. ರುದ್ರಗೌಡ ಪಾಟೀಲ್ ಕೂಡ ಇಲ್ಲ. ಹೀಗಿರುವಾಗ ಅವರ ಬೆಂಬಲಿಗರೇ ವಿವಾಹ ಕಾರ್ಯ ನಡೆಸಲು ಮುಂದಾಗಿದ್ದಾರೆ.
ಬಿಜೆಪಿ ನಾಯಕಿಗಾಗಿ ಹುಡುಕಾಟ
ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗಾಗಿ ಕೂಡ ಶೋಧ ಕಾರ್ಯ ನಡೆಯುತ್ತಿದೆ. ದಿವ್ಯಾ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬಿಜೆಪಿ ನಾಯಕಿ ದಿವ್ಯಾ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. 11ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮವಾಗಿ ಪರೀಕ್ಷೆ ಬರೆದಿದ್ದರು. ದಿವ್ಯಾ ಬಿಜೆಪಿಯ ಕೆಲವು ಪ್ರಭಾವಿ ಮುಖಂಡರೊಂದಿಗೆ ಒಡನಾಟ ಹೊಂದಿದ್ದಾರೆ. ಹಾಗಾಗಿ ಯಾರಾದರೂ ರಕ್ಷಣೆ ನೀಡಿರಬಹುದಾ ಎಂಬ ಮಾತೂ ಕೇಳಿಬರುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಕಾರ್ ಸೈಲೆನ್ಸರ್ ಕಳ್ಳತನ: ರಸ್ತೆಯಲ್ಲಿ ಕಾರ್ ನಿಂತಿದ್ರೆ ಸೈಲೆನ್ಸರ್ ನಾಪತ್ತೆ