ನಾಪತ್ತೆಯಾಗಿರುವ ಪಿಎಸ್ಐ ಅಭ್ಯರ್ಥಿಗಳಿಗಾಗಿ ಸಿಐಡಿ ಶೋಧ: ಕಳೆದ 1ತಿಂಗಳಿಂದ ಅಭ್ಯರ್ಥಿ ಶಾಂತಿಬಾಯಿ ನಾಪತ್ತೆ
ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮತ್ತೊಂದು ಕಿಲಾಡಿ ಮುಖ ಅನಾವರಣವಾಗಿದ್ದು, ಆರೋಪ ಬಂದ್ರೆ ಅದರಿಂದ ಹೊರಬರಲಿಕ್ಕೆ ಮಾಸ್ಟರ್ ಐಡಿಯಾ ರೂಪಿಸಲಾಗಿದೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ (PSI Recruitment scam) ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ (PSI) ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರಿರುವ ಕೆಲವರು ನಾಪತ್ತೆಯಾಗಿದ್ದು, ಹಲವರು ನಾಪತ್ತೆಯಾದ ಅಭ್ಯರ್ಥಿಗಳಿಗಾಗಿ ಸಿಐಡಿ ಶೋಧ ಕಾರ್ಯ ಮುಂದುವರೆದಿದೆ. ಬಂಧಿತ ಕಿಂಗ್ಪಿನ್ಗಳು ಹಲವು ಅಭ್ಯರ್ಥಿಗಳ ಹೆಸರು ಹೇಳಿದ್ದರು. ಪರೀಕ್ಷಾ ಅಕ್ರಮಕ್ಕೆ ನೆರವು ನೀಡಿದ್ದಾಗಿ ಕಿಂಗ್ಪಿನ್ಗಳು ಹೇಳಿದ್ದರು. ಕಿಂಗ್ಪಿನ್ಗಳು ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ಶೋಧ ಮಾಡಲಾಗುತ್ತಿದೆ. ಕಳೆದ 1 ತಿಂಗಳಿಂದ ಅಭ್ಯರ್ಥಿ ಶಾಂತಿಬಾಯಿ ನಾಪತ್ತೆಯಾಗಿದ್ದು, PSI ಪರೀಕ್ಷೆಯಲ್ಲಿ ಅಕ್ರಮವೆಸಗಿ ಶಾಂತಿಬಾಯಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮತ್ತೊಂದು ಕಿಲಾಡಿ ಮುಖ ಅನಾವರಣ
ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮತ್ತೊಂದು ಕಿಲಾಡಿ ಮುಖ ಅನಾವರಣವಾಗಿದ್ದು, ಆರೋಪ ಬಂದ್ರೆ ಅದರಿಂದ ಹೊರಬರಲಿಕ್ಕೆ ಮಾಸ್ಟರ್ ಐಡಿಯಾ ರೂಪಿಸಲಾಗಿದೆ. ತನ್ನ ಮೂರ್ನಾಲ್ಕು ಸಹಚರರ ಹೆಸರನ್ನು ಪೊಲೀಸರಿಗೆ ನೀಡುತ್ತಿದ್ದ ಕಿಲಾಡಿ ರುದ್ರಗೌಡ, ಆತನ ಮೇಲೆ ಆರೋಪವಿದ್ರು, ಮಾಡಿದವರು ಬೇರೆ ಇದ್ದಾರೆ ಅಂತ ಹೇಳುತ್ತಿದ್ದ. ಅದಕ್ಕಾಗಿಯೇ ಮೂರ್ನಾಲ್ಕು ಜನರನ್ನು ಇಟ್ಟುಕೊಂಡಿದ್ದ. ಇವರು ರುದ್ರಗೌಡ ಪಾಟೀಲ್ಗಾಗಿ ಜೈಲಿಗೆ ಹೋಗಲು ಕೂಡಾ ಸಿದ್ದವಾಗಿರುತ್ತಿದ್ದರು. ಅವರ ಖರ್ಚು ವೆಚ್ಚಗಳನ್ನು ರುದ್ರಗೌಡ ಪಾಟೀಲ್ ತಾನೇ ನೋಡಿಕೊಳ್ಳುತ್ತಿದ್ದ. ಪೊಲೀಸರ ಜೊತೆಯೇ ಡೀಲ್ ಕುದುರಿಸಿ, ಕೇಸ್ನಿಂದ ಹೊರಬರ್ತಿದ್ದ. ಈ ಹಿಂದೆ ನಡೆದ ಅನೇಕ ಪರೀಕ್ಷಾ ಅಕ್ರಮದ ವೇಳೆ ರುದ್ರಗೌಡ ಪಾಟೀಲ್ ಹೆಸರು ಕೇಳಿ ಬಂದಿತ್ತು. ಆದ್ರು ತನ್ನ ಚಾಲಾಕಿ ಐಡಿಯಾ ಬಳಸಿ ಪ್ರಕರಣದಲ್ಲಿ ತನ್ನ ಹೆಸರು ಬರದಂತೆ ರುದ್ರಗೌಡ ಪಾಟೀಲ್ ನೋಡಿಕೊಂಡಿದ್ದ.
ಜಡ್ಜ್ ಮುಂದೆ ಸಿಐಡಿ ಅಧಿಕಾರಿ ವಿರುದ್ಧ ಆರೋಪಗಳ ಸುರಿಮಳೆ
ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿರುವ ಬಂಧಿತ 11 ಅಭ್ಯರ್ಥಿಗಳಿಗೆ 14 ದಿನ ನ್ಯಾಯಾಂಗ ಬಂಧನ ನೀಡಲಾಗಿದೆ. ಪ್ರಕರಣದ ಇಬ್ಬರು ಆರೋಪಿಗಳಿಗೆ 4 ದಿನ ಸಿಐಡಿ ಕಸ್ಟಡಿ ನೀಡಿ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ ಮಾಡಿದೆ. ಈ ಮಧ್ಯೆ, ಬೆಂಗಳೂರಿನ ಈ ಆರೋಪಿಗಳು ಜಡ್ಜ್ ಮುಂದೆ ತನಿಖಾಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ಆರೋಪಿಗಳನ್ನು ಇಂದು 19 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಖಾಲಿ ಪೇಪರ್ ಮೇಲೆ ಸಿಐಡಿ ಸಹಿ ಪಡೆದಿದ್ದಾಗಿ ಆರೋಪ ಮಾಡಿರುವ ಆರೋಪಿಗಳು ವಿಚಾರಣೆಯ ವೇಳೆ ಅವಾಚ್ಯವಾಗಿ ತಮ್ಮನ್ನು ನಿಂದಿಸಿರುವುದಾಗಿ ಜಡ್ಜ್ ಮುಂದೆ ಅಲವತ್ತುಕೊಂಡಿದ್ದಾರೆ. OMR ಮತ್ತು ಕಾರ್ಬನ್ ಕಾಪಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಇವರನ್ನು ಬಂಧಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ.