ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ, ಇಲ್ಲಿದೆ ವಿಶೇಷತೆ

ಕಲಬುರಗಿಯಲ್ಲಿ 377 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 371 ಹಾಸಿಗೆಗಳ ಸಾಮರ್ಥ್ಯದ ಜಯದೇವ ಸರ್ಕಾರಿ ಹೃದ್ರೋಗ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ಇದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಕಲ್ಯಾಣ ಕರ್ನಾಟಕಕ್ಕೆ ಇದು ಮೊದಲ ಜಯದೇವ ಆಸ್ಪತ್ರೆ.

ಕಲಬುರಗಿ, ಡಿಸೆಂಬರ್​ 22: ಕಲಬುರಗಿಯ ಅನ್ನಪೂರ್ಣ ಕ್ರಾಸ್ ಬಳಿ 377 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಯದೇವ ಸರ್ಕಾರಿ ಹೃದ್ರೋಗ ಆಸ್ಪತ್ರೆಯನ್ನು (Jayadeva Hospital) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಲೋಕಾರ್ಪಣೆಗೊಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ರಹೀಂ ಖಾನ್​, ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ ಮತ್ತು ಶಾಸಕರು ಸಾಥ್ ನೀಡಿದರು.

ಬೆಂಗಳೂರು, ಮೈಸೂರು ನಂತರ ಕಲ್ಯಾಣ ಕರ್ನಾಟಕದಲ್ಲಿ ಮೊದಲ ಜಯದೇವ ಹೃದ್ರೋಗ ಆಸ್ಪತ್ರೆ ಇದಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB)ಯ 377 ಕೋಟಿ ರೂಪಾಯಿ ವೆಚ್ಚದಲ್ಲಿ ಜಯದೇವ ಸರ್ಕಾರಿ ಹೃದ್ರೋಗ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.

ಕಲಬುರಗಿ ಜಯದೇವ ಆಸ್ಪತ್ರೆಯ ವಿಶೇಷತೆಗಳು

  • 371 ಹಾಸಿಗೆ ಸಾಮರ್ಥ್ಯದ ಕಟ್ಟಡ
  • 3 ಕ್ಯಾಥ್‌ಲ್ಯಾಬ್‌ಗಳು
  • 3 ಆಪರೇಷನ್ ಥಿಯೇಟರ್‌ಗಳು
  • 1 ಹೈಬ್ರಿಡ್ OT
  • 105 ICCU ಹಾಸಿಗೆಗಳು
  • 120 ಸಾಮಾನ್ಯ ವಾರ್ಡ್ ಬೆಡ್‌
  • ಅರೆ-ವಿಶೇಷ, ವಿಶೇಷ ಮತ್ತು ಡೀಲಕ್ಸ್ ವಾರ್ಡ್ ಹಾಸಿಗೆಗಳು, 12 ರಿಕವರಿ ಮತ್ತು 12 ಪೋಸ್ಟ್ ಆಪರೇಟಿವ್ ಹಾಸಿಗೆಗಳು.
  • ಕಾರ್ಡಿಯಾಲಜಿ, ಕಾರ್ಡಿಯೋಥೊರಾಸಿಕ್ ಸರ್ಜರಿ, ವ್ಯಾಸ್ಕುಲಾರ್‌ಶಸ್ತ್ರಚಿಕಿತ್ಸೆ, ಪೀಡಿಯಾಟ್ರಿಕ್ ಕಾರ್ಡಿಯಾಲಜಿ, ರೇಡಿಯಾಲಜಿ, 128 ಸ್ಲೈಸ್ CT ಸ್ಕ್ಯಾನ್, 1.5T MRI, ಅಲ್ಟ್ರಾಸೋನೋಗ್ರಫಿ, ಹೈಟೆಕ್ಪ್ಯಾಥಾಲಜಿ ಮತ್ತು ರಕ್ತ ಬ್ಯಾಂಕ್ ಸೇವೆ ಒದಗಲಿದೆ.
  • ಬಿಪಿಎಲ್​​ ಕಾರ್ಡ್​ದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಸಿಗಲಿದ್ದು, ಎಪಿಎಲ್​ ಕಾರ್ಡ್​ದಾರರಿಗೆ ಅಲ್ಪಮೊತ್ತದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ವಿಶೇಷ ಸ್ಥಾನಮಾನ ನೀಡಲಾಗಿದೆ. 10 ವರ್ಷವಾಗಿದೆ. ಹೀಗಾಗಿ 371(ಜೆ) ಕಲಂ ಸವಿನೆನಪಿಗಾಗಿ 371 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗಿದೆ.

ಇದನ್ನೂ ಓದಿ: ಜಯದೇವ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಣೆ, ಇನ್ಮುಂದೆ ಗೋಲ್ಡನ್ ಟೈಮ್​ನಲ್ಲೂ ಚಿಕಿತ್ಸೆ ಸಿಗುತ್ತೆ

ಜಯದೇವ ಸರ್ಕಾರಿ ಹೃದ್ರೋಗ ಆಸ್ಪತ್ರೆ 2016ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಜಿಮ್ಸ್​ನಲ್ಲಿ ತಾತ್ಕಾಲಿಕವಾಗಿ ಆರಂಭವಾಗಿತ್ತು. ಎಂಟು ವರ್ಷದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದನೇ ಲೋಕಾರ್ಪಣೆಗೊಂಡಿದೆ.

ಈಗಾಗಲೇ 5.78 ಜನಕ್ಕೆ ಚಿಕಿತ್ಸೆ

ಕಲಬುರಗಿಯಲ್ಲಿ ನೂತನ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣದಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಕಲಬುರಗಿಯನ್ನ ಮೆಡಿಕಲ್ ಹಬ್ ಮಾಡಲು ನಮ್ಮ ಸರ್ಕಾರ ಮುಂದಾಗಿದೆ. ನಗರದಲ್ಲಿನ ಹಳೆ ಜಯದೇವ ಆಸ್ಪತ್ರೆಯಲ್ಲಿ ಇದುವರೆಗೆ 5.78 ಲಕ್ಷ ಜನ ಚಿಕಿತ್ಸೆ ಪಡೆದಿದ್ದಾರೆಂದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು.

ಸಿದ್ದರಾಮಯ್ಯ ಟ್ವೀಟ್​

 

ಇದು ಕರ್ನಾಟಕದ ಮೂರನೇ ಸರ್ಕಾರಿ ಹೃದ್ರೋಗ ಆಸ್ಪತ್ರೆಯಾಗಿ ಲೋಕಾರ್ಪಣೆಗೊಳ್ಳುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್​ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:00 pm, Sun, 22 December 24