ಕಲಬುರಗಿ, (ಫೆಬ್ರವರಿ 23): ಮಹಿಳೆಯೊಬ್ಬರಿಗೆ ಸಿಸೇರಿಯನ್ ಮಾಡುವ ವೇಳೆ ಹೊಟ್ಟೆಯಲ್ಲಿ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿರುವ ಘಟನೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಇದೇ ಫೆ.05ರಂದು ಭಾಗ್ಯಶ್ರೀ ಎಂಬ ಮಹಿಳೆಗೆ ಸಿಸೇರಿಯನ್ ಆಗಿತ್ತು. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟೆಯಲ್ಲೇ ಬಟ್ಟೆ ಹುಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ. ತಕ್ಷಣಕ್ಕೆ ಇದು ಮಹಿಳೆಯ ಅರಿವಿಗೆ ಬಂದಿಲ್ಲ. ಒಂದು ವಾರದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಸ್ಕ್ಯಾನಿಂಗ್‌ಗೆ ಬಂದಾಗ ಜಿಮ್ಸ್ ಆಸ್ಪತ್ರೆ (GIMS Hospital) ವೈದ್ಯರ ಎಡವಟ್ಟು ಬಟಾಬಯಲಾಗಿದೆ.
ಅಫಜಲಪುರ ಕರಜಗಿ ಗ್ರಾಮದ ಪ್ರಾಥಮಿಕ ಕೇಂದ್ರಕ್ಕೆ ತೆರಳಿ ವೈದ್ಯರಿಂದ ಮರು ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಹೊಟ್ಟೆಯಲ್ಲಿದ್ದ ಬಟ್ಟೆ ಉಂಡೆ ಹಾಗು ಹತ್ತಿ ತೆಗೆದಿದ್ದಾರೆ. ಆದರೆ ಕುಟುಂಬಸ್ಥರ ಆರೋಪವನ್ನು ಜಿಮ್ಸ್ ವೈದ್ಯರು ತಳ್ಳಿಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸರ್ಜನ್ ಡಾ. ಅಸ್ನಾ ಬೇಗ್, ಹೆರಿಗೆಯ ನಂತರ ರಕ್ತ ಸ್ರಾವ ಸಲುವಾಗಿ ಪ್ಯಾಡ್ ಇಡಲಾಗಿದೆ. 2 ದಿನದ ನಂತರ ಮಹಿಳೆ ಬಂದು ಅದನ್ನ ತೆಗೆಸಿಕೊಳ್ಳಬೇಕಾಗಿತ್ತು. ಆದ್ರೆ ಅವರು ಬಂದಿರಲಿಲ್ಲ. ಸದ್ಯ ಈಗ ಮಹಿಳೆಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಈ ಬಗ್ಗೆ ಕಲಬುರಗಿ ಡಿಹೆಚ್ಓ ಡಾ. ಶರಣಬಸಪ್ಪ ಕ್ಯಾತನಾಳ್ ಪ್ರತಿಕ್ರಿಯಿಸಿ, ಇದರಲ್ಲಿ ಯಾರದ್ದು ತಪ್ಪಿಲ್ಲ, ಬಾಣಂತಿ ಹಾಗೂ ವೈದ್ಯರ ಮಧ್ಯಯ ಕಮಿನ್ಯುಕೇಶನ್ ಗ್ಯಾಪ್ ನಿಂದ ಹೀಗಾಗಿದೆ. ಸಾಮಾನ್ಯವಾಗಿ ಹೆರಿಗೆ ಆದ ಮೇಲೆ ನಾವು ರಕ್ತ ಸ್ರಾವ ಆದ ಜಾಗಕ್ಕೆ ಹತ್ತಿ ಇಡುತ್ತೇವೆ. ಅದೇ ರೀತಿ ಹತ್ತಿ ಮಾತ್ರ ಇಡಲಾಗಿದೆ. ಭಾಗ್ಯಶ್ರೀ ಎಂಬುವರಿಗೆ ನಾರ್ಮಲ್ ಡೆಲೆವರಿ ಆಗಿತ್ತು. ಡೆಲೆವರಿ ಸಮಯದಲ್ಲಿ ರಕ್ತಸ್ರಾವ ಆಗುತ್ತಿತ್ತು. ರಕ್ತಸ್ರಾವ ನಿಯಂತ್ರಣ ಮಾಡೋಕೆ ಆ ರೀತಿ ಮಾಡಲಾಗಿತ್ತು. ನಂತರ ಎರಡು ದಿನ ಬಿಟ್ಟು ಬಂದು ಅದನ್ನ ತಗೆಯಲು ವೈದ್ಯರು ಸೂಚಿಸಿದ್ದರು. ಆದ್ರೆ ಅದನ್ನ ಬಾಣಂತಿಯವರ ಕಡೆಯವರು ಮಾಡಿಲ್ಲ/ ಅದ್ದರಿಂದ ಅದು ಸ್ವಲ್ಪ ಇನ್ಫೆಕ್ಷನ್ ಆಗಿದೆ. ಸದ್ಯ ಬಾಣಂತಿ ಭಾಗ್ಯಶ್ರೀ ಹಾಗೂ ಮಗು ಆರೋಗ್ಯವಾಗಿದ್ದಾರೆ ಯಾವುದೆ ತೊಂದರೆ ಇಲ್ಲ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಅಗಿಲ್ಲ. ಇದೊಂದು ಸಹಜ ಮೆಡಿಕಲ್ ಪ್ರಕ್ರಿಯೇ. ಅವರಿಗೆ ಮಾಹಿತಿ ಕೊರತೆಯಿಂದ ಈ ರೀತಿ ಆತಂಕಗೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Published On - 2:32 pm, Sun, 23 February 25