ಕಲಬುರಗಿ: ಒಂದಲ್ಲಾ, ಎರಡಲ್ಲಾ, ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆಯ ಜನರು ಭಯದಲ್ಲಿಯೇ ಬದಕುತ್ತಿದ್ದಾರೆ. ಯಾವಾಗ ಏನಾಗುತ್ತೋ ಎನ್ನುವ ಆತಂಕ ಈ ಗ್ರಾಮಗಳ ಜನರನ್ನು ಕಾಡುತ್ತಿದೆ. ಕೆಲವರು ಮನೆಯೊಳಗೆ ಇರಲು ಭಯ ಪಡುತ್ತಿದ್ದರೆ, ಇನ್ನು ಕೆಲವರು ಗ್ರಾಮಗಳನ್ನು ಬಿಟ್ಟು ಸಂಬಂಧಿಕರ ಮನೆಗಳಿಗೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಮೇಲಿಂದ ಮೇಲೆ ಸಂಭವಿಸುತ್ತಿರುವ ಲಘು ಭೂಕಂಪನ ಮತ್ತು ಭೂಮಿಯಿಂದ ಬರುತ್ತಿರುವ ಭಾರಿ ಸದ್ದು.
ಹೌದು ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಗಡಿಕೇಶ್ವರ, ಹೊಸಳ್ಳಿ ಎಚ್, ತೇಗಲತಿಪ್ಪಿ, ಕೆರೂರು ಸೇರಿದಂತೆ ಹತ್ತಕ್ಕೂ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಲಘು ಭೂಕಂಪನಗಳು ಮೇಲಿಂದ ಮೇಲೆ ಆಗುತ್ತಿವೆ. ಹಗಲು ರಾತ್ರಿಯೆನ್ನದೇ ನಿರಂತರವಾಗಿ ಉಂಟಾಗುತ್ತಿರುವ ಭೂ ಕಂಪನದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಕಳೆದ ರಾತ್ರಿ ಜಿಲ್ಲೆಯ ಕಾಳಗಿ, ಚಿಂಚೋಳಿ, ಸೇಡಂ, ಶಹಬಾದ್ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಹಳ್ಳಿಯಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಗಡಿಕೇಶ್ವರ ಬಳಿ 4.1 ತೀರ್ವತೆಯ ಭೂಕಂಪನವಾಗಿರೋದು ದಾಖಲಾಗಿದೆ.
ಇಂದು (ಅಕ್ಟೋಬರ್ 12) ಬೆಳಿಗ್ಗೆ ಕೂಡಾ ಹೊಡೆಬೀರನಳ್ಳಿ, ಕೆರೂರು, ಹಲಚೇರಾ, ಗಡಿಕೇಶ್ವರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮತ್ತೆ ಎರಡು ಭಾರಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವೃತೆಯ ಭೂಕಂಪನ ಆಗಿದೆ. ಇನ್ನು ಕಳೆದ ಭಾನುವಾರ ಇಪ್ಪತ್ನಾಲ್ಕು ಗಂಟೆಯಲ್ಲಿ ಹದಿನಾರಕ್ಕು ಹೆಚ್ಚು ಬಾರಿ ಲಘು ಭೂಕಂಪನ ಮತ್ತು ಭೂಮಿಯಿಂದ ಸದ್ದು ಬಂದಿದೆ. ಕಳೆದ ಶುಕ್ರವಾರ, ಶನಿವಾರ ಕೂಡಾ ಲಘು ಭೂಕಂಪನಗಳು ಕಾಳಗಿ, ಚಿಂಚೋಳಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಉಂಟಾಗಿವೆ.
ಗ್ರಾಮಗಳನ್ನು ತೊರೆಯುತ್ತಿರುವ ಜನರು
ನಿರಂತರವಾಗಿ ಲಘು ಭೂಕಂಪನ ಮತ್ತು ಭೂಮಿಯಿಂದ ಬರುತ್ತಿರುವ ಸದ್ದಿನಿಂದ ಗ್ರಾಮಗಳ ಜನರು ಕಂಗಾಲಾಗಿದ್ದಾರೆ. ಅನೇಕರು ಮನೆಯ ಹೊರಗಡೆ ಮಲಗುತ್ತಿದ್ದರೆ, ಇನ್ನು ಕೆಲವರು ಗ್ರಾಮವನ್ನೇ ಬಿಟ್ಟು ಸಂಬಂಧಿಕರ ಮನೆಗಳಿಗೆ ಹೋಗುತ್ತಿದ್ದಾರೆ. ಇಂದು ಹೊಸಳ್ಳಿ ಎಚ್ ಗ್ರಾಮದಲ್ಲಿ ಅನೇಕರು ಮನೆಗಳನ್ನು ಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಬಾಣಂತಿಯರಿದ್ದಾರೆ. ವೃದ್ದರು ಇದ್ದಾರೆ. ಅವರಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಆದರೆ ಮನೆಯಲ್ಲಿ ಇರಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೆಲ ದಿನಗಳ ಕಾಲ ತಮ್ಮೂರು ಬಿಟ್ಟು ಸಂಬಂಧಿಕರ ಮನೆಗೆ ಹೋಗುತ್ತಿದ್ದೇವೆ ಎಂದು ಹೊಸಳ್ಳಿ ಗ್ರಾಮದ ಜನರು ಹೇಳಿದ್ದಾರೆ.
ಬಿರಕು ಬಿಟ್ಟಿರುವ ಮನೆಗಳು, ನೆಲಕ್ಕುರುಳಿದ ಗೋಡೆಗಳು
ಗಡಿಕೇಶ್ವರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಲಘು ಭೂಕಂಪನದಿಂದ ಅನೇಕ ಮನೆಗಳು ಬಿರಕು ಬಿಟ್ಟಿದ್ದರೆ, ಇನ್ನು ಅನೇಕರ ಮನೆಗಳ ಗೋಡೆಗಳು ನೆಲಕ್ಕುರುಳಿವೆ. ಗಡಿಕೇಶ್ವರ ಗ್ರಾಮದಲ್ಲಿಯೇ ಹತ್ತಕ್ಕೂ ಹೆಚ್ಚು ಜನರ ಮನೆಗಳು ಗೋಡೆಗಳು ಬಿದ್ದಿವೆ. ನೂರಾರು ಜನರ ಮನೆಗಳು ಬಿರಕು ಬಿಡುತ್ತಿವೆ. ಇನ್ನು ಗಡಿಕೇಶ್ವರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ತಮ್ಮ ಮನೆಗಳ ಮೇಲ್ಛಾವಣಿಗೆ ಕಲ್ಲಿನ ಹೊದಿಕೆ ಹಾಕಿದ್ದಾರೆ. ಅನೇಕರು ಮನೆಗಳು ತುಂಬಾ ಹಳೆಯ ಮನೆಗಳಾಗಿವೆ. ಹೀಗಾಗಿ ಮನೆಯೊಳಗೆ ಮಲಗಿದ್ದಾಗ, ಭೂಕಂಪನವಾದರೆ ನಮ್ಮ ಗತಿಯೇನು ಎನ್ನುವ ಚಿಂತೆಯಲ್ಲಿ ಗ್ರಾಮಗಳ ಜನರು ಇದ್ದಾರೆ.
ಜಿಲ್ಲಾಡಳಿತದಿಂದ ನಿರ್ಲಕ್ಷ್ಯ
ಗಡಿಕೇಶ್ವರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಭೂಮಿಯಿಂದ ಬಾರಿ ಸದ್ದು ಬರುತ್ತಿದೆ. ಇದೀಗ ವಾರದಿಂದ ಮೇಲಿಂದ ಮೇಲೆ ಹತ್ತಕ್ಕೂ ಹೆಚ್ಚು ಹಳ್ಳಿಯಲ್ಲಿ ಲಘು ಭೂಕಂಪನವಾಗುತ್ತಿವೆ. ಇಷ್ಟಾದರು ಕೂಡಾ ಕಲಬುರಗಿ ಜಿಲ್ಲಾಡಳಿತ ಮಾತ್ರ ನಿದ್ದೆಯಲ್ಲಿರುವುದು ಜನರ ಆಕ್ರೋಶವನ್ನು ಹೆಚ್ಚಿಸಿದೆ. ಹೀಗಾಗಿ ನಿನ್ನೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನರು, ಚಿಂಚೋಳಿ ತಾಲೂಕಿನ ಹೊಡೆಬೀರನಹಳ್ಳಿ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಭೂಕಂಪ ಪೀಡಿತ ಹಳ್ಳಿಗಳಿಗೆ ಜಿಲ್ಲಾಧಿಕಾರಿ, ಸಚಿವರು, ಸಂಸದರು, ಶಾಸಕರು ಭೇಟಿ ನೀಡಿ ಜನರ ಗೋಳು ಕೇಳುವ ಕೆಲಸ ಮಾಡುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಚ್ಚು ಮಳೆಯೇ ಭೂ ಕಂಪನಕ್ಕೆ ಕಾರಣವಾಯ್ತಾ?
ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ ವರಗೆ ವಾಡಿಕೆ ಮಳೆ 552 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಆದರೆ ಈ ಬಾರಿ 742 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲೂ ಭೂಕಂಪ ಪೀಡಿತ ಕಾಳಗಿ, ಚಿಂಚೋಳಿ ತಾಲೂಕಿನಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಹೆಚ್ಚು ಮಳೆಯಾಗುತ್ತಿರುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಭೂಮಿಯೊಳಗೆ ಅನೇಕ ಪ್ರಕ್ರಿಯೇಗಳು ನಡೆಯುತ್ತವೆ. ಹೀಗಾಗಿ ಲಘು ಭೂಕಂಪನಗಳಾಗುತ್ತಿವೆ. ಈ ಭಾಗದಲ್ಲಿ ಸುಣ್ಣದ ಕಲ್ಲು ಹೆಚ್ಚಾಗಿದೆ. ಸುಣ್ಣದ ಕಲ್ಲಿನ ಜೊತೆ ನೀರು ಮಿಶ್ರಣಗೊಂಡಾಗ, ಕೆಮಿಕಲ್ ರಿಯಾಕ್ಷನ್ ಆಗಿ ಭೂಮಿಯಿಂದ ಸದ್ದು ಬರುತ್ತದೆ. ಹೆಚ್ಚಿನ ಮಳೆಯಿಂದ ಭೂಕಂಪನ ಸಂಭವಿಸುತ್ತಿವೆ ಎಂದು ಭೂ ವಿಜ್ಞಾನಿಗಳು ಹೇಳಿದ್ದಾರೆ.
ವರದಿ: ಸಂಜಯ್ ಚಿಕ್ಕಮಠ
ಇದನ್ನೂ ಓದಿ:
ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಲಘು ಭೂಕಂಪ, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.4ರಷ್ಟು ದಾಖಲು
ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು
Published On - 12:49 pm, Tue, 12 October 21