ಕಲಬುರಗಿ ಜೈಲಿನಲ್ಲಿ ಶಂಕಿತ ಉಗ್ರ ಜುಲ್ಫಿಕರ್ ಸೇರಿ ಕೈದಿಗಳ ಹೈಫೈ ಜೀವನಕ್ಕೆ ಬ್ರೇಕ್: 6 ಮಂದಿ ಬೇರೆ ಜೈಲುಗಳಿಗೆ ಸ್ಥಳಾಂತರ

| Updated By: Ganapathi Sharma

Updated on: Dec 06, 2024 | 9:15 AM

ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರಿಗೆ ಸ್ಫೋಟದ ಬೆದರಿಕೆ ಬಂದ ನಂತರ ಕೆಲವೇ ದಿನಗಳಲ್ಲಿ ಇದೀಗ, ಜೈಲಿನಲ್ಲಿ ಹೈಫೈ ಜೀವನ ನಡೆಸುತ್ತಿದ್ದ ಆರೋಪದಲ್ಲಿ ಶಂಕಿತ ಉಗ್ರ ಜುಲ್ಫಿಕರ್ ಸೇರಿದಂತೆ ಆರು ಪ್ರಮುಖ ಕೈದಿಗಳನ್ನು ಇತರ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ಕೈದಿಗಳು ಜೈಲು ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂಬುದು ಬಹಿರಂಗಗೊಂಡಿದೆ.

ಕಲಬುರಗಿ ಜೈಲಿನಲ್ಲಿ ಶಂಕಿತ ಉಗ್ರ ಜುಲ್ಫಿಕರ್ ಸೇರಿ ಕೈದಿಗಳ ಹೈಫೈ ಜೀವನಕ್ಕೆ ಬ್ರೇಕ್: 6 ಮಂದಿ ಬೇರೆ ಜೈಲುಗಳಿಗೆ ಸ್ಥಳಾಂತರ
ಕಲಬುರಗಿ ಕೇಂದ್ರ ಕಾರಾಗೃಹ
Follow us on

ಕಲಬುರಗಿ, ಡಿಸೆಂಬರ್ 6: ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರನ್ನು ಸ್ಫೋಟಿಸುವ ಬೆದರಿಕೆ ಸಂದೇಶ ಬಂದ ಕೆಲವೇ ದಿನಗಳಲ್ಲಿ ಜೈಲಿನಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. 2013ರ ಬೆಂಗಳೂರಿನ ಮಲ್ಲೇಶ್ವರಂ ಬಾಂಬ್​ ಸ್ಫೋಟ ಪ್ರಕರಣದ ಆರೋಪಿ, ಶಂಕಿತ ಉಗ್ರ ಜುಲ್ಫಿಕರ್ ಸೇರಿದಂತೆ 6 ಮಂದಿ ಕೈದಿಗಳನ್ನು ಕರ್ನಾಟಕದ ಇತರ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಶಿವಮೊಗ್ಗ ಮತ್ತು ಬಳ್ಳಾರಿ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ.

ಕಲಬುರಗಿ ಜೈಲಿನಲ್ಲಿದ್ದ ಈ ನಟೋರಿಯಸ್ ಕೈದಿಗಳು, ಜೈಲು ಅಧಿಕಾರಿಗಳನ್ನೇ ಬ್ಲ್ಯಾಕ್​ಮೇಲ್ ಮಾಡಿ ಹೈಫೈ ಜೀವನ ನಡೆಸುತ್ತಿದ್ದರು. ಇದರ ಬೆನ್ನಲ್ಲೇ ಕಠಿಣ ಕ್ರಮ ಕೈಗೊಂಡಿರುವ ಮುಖ್ಯ ಅಧೀಕ್ಷಕಿ ಅನಿತಾ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದಲ್ಲದೆ, ಶಂಕಿತ ಉಗ್ರ ಜುಲ್ಫಿಕರ್, ಶಿವಮೊಗ್ಗದ ರೌಡಿಶೀಟರ್ ಬಚ್ಚನ್, ಅಬ್ದುಲ್ ಖಾದರ್ ಜಿಲಾನಿ, ಶೇಖ್ ಸದಾಂ ಹುಸೇನ್, ಜಾಕೀರ್ ಮತ್ತು ವಿಶಾಲ್​ನನ್ನು ನ್ಯಾಯಾಲಯದ ಅನುಮತಿ ಪಡೆದು ಬೇರೆ ಜೈಲಿಗೆ ಸ್ಥಳಾಂತರಗೊಳಿಸಿದ್ದಾರೆ.

ಜೈಲು ಅಧಿಕಾರಿಗಳ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್

ಕೈದಿಗಳು ಜೈಲಿನಲ್ಲಿ ಹೈಫೈ ಜೀವನವನ್ನು ನಡೆಸಲು ಕೆಲ ಜೈಲು ಸಿಬ್ಬಂದಿಯ ಸಹಕಾರವನ್ನು ಪಡೆಯುತ್ತಿದ್ದರು. ಅಷ್ಟೇ ಅಲ್ಲದೆ, ಜೈಲಿನ ಕೆಲವು ಅಧಿಕಾರಿಗಳ ವಿಡಿಯೋಗಳನ್ನು ಮಾಡಿಟ್ಟುಕೊಂಡು ಬ್ಲ್ಯಾಕ್ ಮಾಡುತ್ತಿದ್ದರು. ಕಳ್ಳಮಾರ್ಗಗಳನ್ನು ಅನುಸರಿಸಿ ಹೈಫೈ ಜೀವನ ನಡೆಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಗೊತ್ತಾದ ಕೂಡಲೇ ಕಾರ್ಯಪ್ರವೃತ್ತರಾದ ಮುಖ್ಯ ಅಧೀಕ್ಷಕಿ ಅನಿತಾ, ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು. ಇದೀಗ, ಶಂಕಿತ ಉಗ್ರ ಜುಲ್ಫಿಕರ್​​ನನ್ನು ಎನ್​ಐಎ ಕೋರ್ಟ್​ನಿಂದ ಅನುಮತಿ ಪಡೆದು ಬೇರೆ ಜೈಲಿಗೆ ಸ್ಥಳಾಂತರಿಸಿದ್ದಾರೆ.

ಅನಿತಾ ಕಾರು ಸ್ಫೋಟಿಸುವ ಬೆದರಿಕೆ

ಕೆಲವೇ ದಿನಗಳ ಹಿಂದಷ್ಟೇ ಮುಖ್ಯ ಅಧೀಕ್ಷಕಿ ಅನಿತಾರ ಕಾರು ಸ್ಫೋಟಿಸುತ್ತೇವೆ ಎಂದು ಕಲಬುರಗಿ ನಗರದ ಪೊಲೀಸ್ ಇನ್ಸ್​ಪೆಕ್ಟರ್ ಮೊಬೈಲ್​ಗೆ ಆಡಿಯೋ ಸಂದೇಶ ಬಂದಿತ್ತು. ಒಂದೂವರೆ ತಿಂಗಳ ಹಿಂದಷ್ಟೇ ಅನಿತಾ ಕಲಬುರಗಿ ಜೈಲಿಗೆ ವರ್ಗಾವಣೆಯಾಗಿ ಬಂದಿದ್ದರು.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲ್ ಮುಖ್ಯ ಅಧೀಕ್ಷಕಿ ಕಾರು ಸ್ಫೋಟಿಸುವ ಬೆದರಿಕೆ

ಕೈದಿಗಳು ಹೈಫೈ ಜೀವನ ನಡೆಸುತ್ತಿರುವ ಬಗ್ಗೆ ಅಧಿಕಾರ ಸ್ವೀಕರಿಸಿದ ಕೂಡಲೇ ಅವರ ಅರಿವಿಗೆ ಬಂದಿತ್ತು. ಇದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದರು. ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದ್ದರು. ಇದೇ ಕಾರಣಕ್ಕೆ ಅವರಿಗೆ ಕೈದಿಗಳೇ ಬೆದರಿಕೆ ಸಂದೇಶ ಕಳುಹಿಸಿರಬಹುದೇ ಎಂಬ ಅನುಮಾನವೂ ಮೂಡಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ