ಕಲಬುರಗಿ, ಅ.10: ಜಿಲ್ಲೆಯ ಆಳಂದ (Aland) ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ, ರಾಜ್ಯದಲ್ಲಿರುವ ಏಕೈಕ ಕೇಂದ್ರೀಯ ವಿಶ್ವವಿದ್ಯಾಲ(Central University of Karnataka)ಯ ಎನ್ನುವ ಗರಿಮೆಯನ್ನು ಹೊಂದಿದೆ. 2009 ರಲ್ಲಿ ಆರಂಭವಾಗಿರುವ ಈ ವಿಶ್ವವಿದ್ಯಾಲಯದಲ್ಲಿ ರಾಜ್ಯವನ್ನ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿ ಅಧ್ಯಯನ ನಡೆಸುತ್ತಿದ್ದಾರೆ. ಆದ್ರೆ, ಈ ವಿಶ್ವವಿದ್ಯಾಲಯ ಗುಣಮಟ್ಟದ ಶಿಕ್ಷಣ, ಸಂಶೋಧನಾ ಕೆಲಸಗಳಿಂದ ಸುದ್ದಿಯಾಗುವ ಬದಲು ಬೇರೆ ಕಾರಣಗಳಿಂದಲೇ ಸುದ್ದಿಯಾಗಿದ್ದೆ ಹೆಚ್ಚು. ಹೌದು, ವಿಶ್ವವಿದ್ಯಾಲಯದಲ್ಲಿ ವೈಚಾರಿಕ, ಸೈಂದ್ಯಾಂತಿಕ ಸಂಘರ್ಷಗಳು ತೀರ್ವ ಸ್ವರೂಪ ಪಡೆದುಕೊಳ್ಳುತ್ತಿವೆ. ಇದೀಗ ಕೇಂದ್ರೀಯ ವಿವಿಯನ್ನು ಉಳಸಿ ಕೋಮುವಾದವನ್ನು ಅಳಸಿ ಎನ್ನುವ ಹೋರಾಟ ಆರಂಭವಾಗಿದೆ.
ಕೇಂದ್ರೀಯ ವಿವಿಯಲ್ಲಿ ಕಳೆದ ಅನೇಕ ವರ್ಷಗಳಿಂದ ವೈಚಾರಿಕ ಮತ್ತು ಸೈದ್ಯಾಂತಿಕ ಸಂಘರ್ಷಗಳು ಹೆಚ್ಚಾಗಿವೆ. ಇಷ್ಟು ದಿನ ಕ್ಯಾಂಪಸ್ನೊಳಗೆ ವಿದ್ಯಾರ್ಥಿಗಳ ನಡುವೆ ಪರ ವಿರೋಧದ ಹೋರಾಟ ನಡೆಯುತ್ತಿದ್ದವು. ಎರಡೂ ಹೋರಾಟಗಳ ಹಿಂದೆ ವಿವಿಯ ಕೆಲ ಸಿಬ್ಬಂದಿಗಳು ಇರುವುದು ಎಲ್ಲರಿಗೂ ಗೊತ್ತಾಗಿತ್ತು. ಆದರೆ, ಇದೀಗ ಕ್ಯಾಂಪಸ್ನೊಳಗೆ ಇದ್ದ ಹೋರಾಟಗಳು, ವಿವಿಯ ಹೊರಗೂ ಕಾಲಿಟ್ಟಿವೆ. ವಿವಿಧ ದಲಿತಪರ, ಪ್ರಗತಿಪರ ಹೋರಾಟಗಾರರು ಕೋಮುವಾದ ಅಳಿಸಿ, ಕೇಂದ್ರೀಯ ವಿವಿ ಉಳಿಸಿ ಅನ್ನೋ ಹೋರಾಟವನ್ನು ಆರಂಭಿಸಿದ್ದಾರೆ. ನಾಳೆ(ಅ.11) ಕೇಂದ್ರೀಯ ವಿವಿಗೆ ಮುತ್ತಿಗೆ ಹಾಕಲು ವಿವಿಧ ಸಂಘಟನೆಗಳು ಮುಂದಾಗಿವೆ.
ಇದನ್ನೂ ಓದಿ:ಉತ್ತರ ಪ್ರದೇಶ: ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಮಕ್ಕಳಿಗೆ ಸೂಚಿಸಿದ ಶಿಕ್ಷಕಿ, ಇದು ಕೋಮುವಾದ ಎಂದ ನೆಟ್ಟಿಗರು
ಇನ್ನು ದಲಿತಪರ ಹೋರಾಟಗಾರ ಡಿ. ಜೆ ಸಾಗರ್ ಅವರ ನೇತೃತ್ವದಲ್ಲಿ ಕೋಮುವಾದ ಅಳಿಸಿ ಕೇಂದ್ರೀಯ ವಿವಿ ಉಳಿಸಿ ಹೋರಾಟ ಸಮಿತಿ ರಚನೆಯಾಗಿದ್ದು, ಜಿಲ್ಲೆಯ ವಿವಿಧ ಪ್ರಗತಿಪರ, ರೈತಪರ, ಎಡಪಂಥೀಯ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ. ನಾಳೆ ಮುಂಜಾನೆ ಹನ್ನೊಂದು ಮೂವತ್ತಕ್ಕೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಸೇರುವ ಹೋರಾಟಗಾರರು, ಕಡಗಂಚಿಯಿಂದ ಕೇಂದ್ರೀಯ ವಿವಿವರಗೆ ಪಾದಯಾತ್ರೆ ನಡೆಸಲಿದ್ದಾರೆ. ನಂತರ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಿದ್ದಾರೆ.
ಕೇಂದ್ರೀಯ ವಿವಿಯಲ್ಲಿ ಕೋಮುವಾದ ಹೆಚ್ಚಾಗುತ್ತಿದೆ, ದಲಿತರು, ಅಲ್ಪಸಂಖ್ಯಾತರ ಮತ್ತು ಅವರ ವಿಚಾರಧಾರೆಗಳನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಕೇಂದ್ರೀಯ ವಿಶ್ವವಿದ್ಯಾಲಯವನ್ನು ಕುಲಪತಿ ಬಟ್ಟು ಸತ್ಯನಾರಾಯಣ್ ಅವರು ಆರ್ಎಸ್ಎಸ್ ಕೇಂದ್ರವನ್ನಾಗಿ ಮಾಡುತ್ತಿದ್ದಾರೆ. ವಿವಿಯಲ್ಲಿ ರಾಮನವಮಿ, ಗಣೇಶನ ಹಬ್ಬ ಅದ್ದೂರಿ ಆಚರಣೆಗೆ ಅವಕಾಶ ನೀಡಿದ್ದಾರೆ. ಆರ್ಎಸ್ಎಸ್ ಪಥಸಂಚಲನ ಕೂಡ ಈ ಹಿಂದೆ ನಡೆಯಲು ಅವಕಾಶ ನೀಡಿದ್ದಾರೆ. ಆ ಮೂಲಕ ಕೋಮುವಾದ ಹೆಚ್ಚಳಕ್ಕೆ ಪರೋಕ್ಷವಾಗಿ ಕುಲಪತಿಯೇ ಕುಮ್ಮಕ್ಕು ನೀಡ್ತಿದ್ದಾರೆ ಎಂದು ಹೋರಟಗಾರರು ಆರೋಪಿಸಿದ್ದಾರೆ.
ಹೋರಾಟ ಸಮಿತಿ ಅಧ್ಯಕ್ಷ ಡಿ.ಜೆ ಸಾಗರ್ ಮಾತನಾಡಿ ‘ಕೇಂದ್ರೀಯ ವಿವಿಯಲ್ಲಿ ಯಾವುದೇ ಸಿದ್ದಾಂತಕ್ಕೂ ಅವಕಾಶ ನೀಡದೆ, ಅಲ್ಲಿ ವೈಚಾರಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು ಮಾತ್ರ ನಡೆಯಲಿ. ಆದರೆ, ಸ್ವತ ಕುಲಪತಿ ಸೇರಿದಂತೆ ಕೆಲವರು ವಿವಿಯನ್ನು ಕೋಮುವಾದದ ಕೇಂದ್ರ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕುಲಪತಿ ವಿರುದ್ದ ಕ್ರಮವಾಗಬೇಕು. ವಿವಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಲ್ಲಬೇಕು ಅಂತಿದ್ದಾರೆ. ಆದರೆ, ತಮ್ಮ ಮೇಲೆ ಮಾಡ್ತಿರುವ ಎಲ್ಲಾ ಆರೋಪಗಳನ್ನು ಕುಲಪತಿ ಬಟ್ಟೂ ಸತ್ಯನಾರಾಯಣ್ ಅವರು ಅಲ್ಲಗಳೆದಿದ್ದು, ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡಿದ್ದೇನೆ. ತನ್ನ ವಿರುದ್ದ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಹೇಳಿದ್ದಾರೆ.
ಶೈಕ್ಷಣಿಕ ಕೆಲಸಗಳಿಂದ ಸುದ್ದಿಯಾಗಬೇಕಿದ್ದ ರಾಜ್ಯದ ಕೇಂದ್ರಿಯ ವಿಶ್ವವಿಧ್ಯಾಲಯ, ಬೇಡದೆ ಇರುವ ಕಾರಣಕ್ಕೆ ಸುದ್ದಿಯಾಗುತ್ತಿದೆ. ಕೆಲವೇ ಕೆಲವು ಜನರು, ವಿದ್ಯಾರ್ಥಿಗಳು, ಸಿಬ್ಬಂಧಿ ವರ್ಗ ತಮ್ಮ ವೈಚಾರಿಕ ವಿಚಾರಧಾರೆಗಳನ್ನು ಬೆಳೆಸಲು ವಿವಿಯಲ್ಲಿ ಬಳಸಿಕೊಳ್ಳುತ್ತಿರುವ ಪರಿಣಾಮ, ವಿವಿಯ ಶೈಕ್ಷಣಿಕ ಪರಿಸರ ಹಾಳಾಗುತ್ತಿದೆ. ಇದು ಅನೇಕ ವಿದ್ಯಾರ್ಥಿಗಳ ವಿದ್ಯಾರ್ಜನೆ ಮೇಲೆ ಕೂಡ ಪರಿಣಾಮ ಬೀರುತ್ತಿದೆ. ಹೀಗಾಗಿ ವಿಶ್ವವಿದ್ಯಾಲಯ ವಿದ್ಯೆಗೆ ಮಾತ್ರ ಸೀಮಿತವಾಗುವಂತೆ ನೋಡಿಕೊಳ್ಳುವ ಕೆಲಸವಾಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ