ಕೋಮುವಾದಿ ಸರ್ಕಾರ ಅಧಿಕಾರದಲ್ಲಿರಬಾರದೆಂದು ಕುಮಾರಸ್ವಾಮಿಗೆ ಸಿಎಂ ಸ್ಥಾನ ಕೊಟ್ಟೆವು: ಸಿದ್ಧರಾಮಯ್ಯ
ಕೋಮುವಾದಿ ಸರ್ಕಾರ ಅಧಿಕಾರದಲ್ಲಿರಬಾರದೆಂದು ನಾವು ಹೆಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟೆವು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಯಾದಗಿರಿ: ಕೋಮುವಾದಿ ಸರ್ಕಾರ (communal government) ಅಧಿಕಾರದಲ್ಲಿರಬಾರದೆಂದು ನಾವು ಹೆಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟೆವು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಹೆಚ್ಡಿಕೆ ಸಾಲಮನ್ನಾ ಮಾಡಿದ್ದಲ್ಲ, ನಾವಿಬ್ಬರೂ ಸೇರಿ ಮನ್ನಾ ಮಾಡಿದ್ದು. ಬಿಜೆಪಿಯವರ ಮನಸ್ಸಿನಲ್ಲಿ ಏನಿದೆ ಅಂತಾ ನೀವು ತಿಳಿದುಕೊಳ್ಳಬೇಕು. ತೇಜಸ್ವಿ ಸೂರ್ಯನನ್ನು ಅಮಾವಾಸ್ಯೆ ಅಂತ ಕರೆಯುತ್ತೇನೆ. ರೈತರ ಸಾಲ ಮನ್ನಾ ಮಾಡಿದ್ರೆ ಆರ್ಥಿಕ ಸ್ಥಿತಿ ಕುಗ್ಗುತ್ತೆ ಅಂತಾ ಅಂದ್ರು. ಬಿಜೆಪಿಯವರು ಉದ್ಯಮಿ ಅದಾನಿ, ಅಂಬಾನಿಯ ಒಟ್ಟು 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದನ್ನೇ ನಮ್ಮ ನಾಯಕ ರಾಹುಲ್ ಲೋಕಸಭೆಯಲ್ಲಿ ಪ್ರಸ್ತಾಪಿಸಿದರು. ಆದರೆ ಮೋದಿ ವಿಚಲಿತರಾಗಿ ಉತ್ತರ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ರಾಜ್ಯಪಾಲರು ಭಾಷಣ ದಿಕ್ಕು ದೆಸೆ ಇಲ್ಲದ ಭಾಷಣ
ಈಗ ಜಂಟಿ ಅಧಿವೇಶನ ನಡೆಯುತ್ತಿದೆ. ರಾಜ್ಯಪಾಲರು ಭಾಷಣ ಮಾಡ್ತಾರೆ. ಆದ್ರೆ ಈಗ ಆಗಿರೋದು ಅವರು ತಯಾರು ಮಾಡಿದ ಭಾಷಣ ಅಲ್ಲ. ಮೊದಲೇ ಕಾರ್ಯಕ್ರಮ ಪ್ಲಾನ್ ಆಗಿದ್ರಿಂದ ನಾನು ಹೋಗಿಲ್ಲ. ನಾನು 14ನೇ ತಾರೀಕು ರಾಜ್ಯಪಾಲರ ಭಾಷಣದ ಬಗ್ಗೆ ಭಾಷಣ ಮಾಡುತ್ತೇನೆ. ನಾನು ಇಂದು ರಾಜ್ಯಪಾಲರ ಭಾಷಣ ನೋಡಿದೆ. ಅದರಲ್ಲಿ ರಾಜ್ಯದ ಚಿತ್ರಣವಿರಬೇಕು. ರಾಜ್ಯದ ಮುಂದಿನ ಮುನ್ನೋಟ ಇರಬೇಕು. ಆದ್ರೆ ಅದರಲ್ಲಿ ಏನೂ ಇಲ್ಲ. ದಿಕ್ಕು ದೆಸೆ ಇಲ್ಲದ ಭಾಷಣ. ಬಿಜೆಪಿ ಅವರು ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದಾರೆ. ಅದು ಸುಳ್ಳಿನ ಕಂತೆ ಎಂದು ಹರಿಗಾಯ್ದರು.
ಇದನ್ನೂ ಓದಿ: ಯಾದಗಿರಿ: ಪ್ರಜಾಧ್ವನಿ ಸಮಾವೇಶದ ವೇದಿಕೆಯಲ್ಲೇ ಎಂ.ಬಿ.ಪಾಟೀಲರು ತಮ್ಮ ಐಫೋನ್ ಕಳೆದುಕೊಂಡ್ರು ಮಾರಾಯ್ರೆ
ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಆಗಿದೆ ಸಾಧನೆ ಏನು
ನಿರುದ್ಯೋಗ, ಬೆಲೆ ಏರಿಕೆ, ರೈತರ ಬಿಕ್ಕಟ್ಟು, ಸಾಮರಸ್ಯ ಹಾಳಾಗಿರೊ ಬಗ್ಗೆ ಸರ್ಕಾರ ಮಾತನಾಡ್ತಿಲ್ಲ. ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಆಗಿದೆ. ಅದರ ಸಾಧನೆ ತೋರಿಸಬೇಕಿತ್ತು. ಬಿಜೆಪಿ 600 ಭರವಸೆಯಲ್ಲಿ 50 ಈಡೇರಿಸಿರಬಹುದು. ಇನ್ನೂ 550 ಈಡೇರಿಸಿಲ್ಲ. ನಾವು ಅಧಿಕಾರಕ್ಕೆ ಬಂದ್ರೆ ಸೊಸೈಟಿ, ಬ್ಯಾಂಕ್ಗಳನ್ನ ಒಂದು ಲಕ್ಷ ಕೂಡಲೇ ಮನ್ನ ಮಾಡುತ್ತೇವೆ. 150 ಲಕ್ಷ ಕೋಟಿ ನೀರಾವರಿಗೆ ಖರ್ಚು ಮಾಡ್ತಿನಿ ಅಂದ್ರು. ಬರೀ 50 ಸಾವಿರ ಕೋಟಿ ಖರ್ಚು ಮಾಡಿಲ್ಲ. ಇದು ಯಡಿಯೂರಪ್ಪನವರು ಅಧ್ಯಕ್ಷರಿದ್ದಾಗ ಹೇಳಿದ್ದರು.
ತಾಕತ್ ಇದ್ರೆ ಚರ್ಚೆಗೆ ಬನ್ನಿ
ಆದ್ರೆ ನಾನು ಮಾತುಕೊಟ್ಟಿದ್ದೆ ಐದು ವರ್ಷದಲ್ಲಿ 58 ಸಾವಿರ ಕೋಟಿ ಖರ್ಚು ಮಾಡಿ ನೀರು ಕೊಟ್ಟಿದಿವಿ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಬಿಜೆಪಿ ಯಾಕೆ ನಡೆದುಕೊಂಡಿಲ್ಲ. ಬೊಮ್ಮಾಯಿಗೆ ಕೇಳುತ್ತೇನೆ. ಒಂದು ವೇದಿಕೆ ಸಿದ್ಧಪಡಿಸಿ, ನಾನು ಅಲ್ಲಿಗೆ ಬರ್ತಿನಿ ಚರ್ಚೆ ಮಾಡೋಣ ಇಬ್ಬರೂ ನಮ್ಮ ಆಶ್ವಾಸನೆಗಳನ್ನ ತರೋಣ. ಸುಳ್ಳು ಹೇಳಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ನೀನು ಸುಳ್ಳಾದ್ರೆ ರಾಜೀನಾಮೆ ಕೊಡ್ತಿರಾ? ದಮ್ ಇದೆಯಾ..ತಾಕತ್ ಇದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಸಿದ್ಧಾಂತ ಇಲ್ಲ: ಎಚ್.ಸಿ.ಮಹಾದೇವಪ್ಪ
ಸಮಾವೇಶ ಉದ್ದೇಶಿಸಿ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿ, ಆಹಾರದ ಸ್ವಾವಲಂಬನೆ ಮಾಡಿದ್ದು ಕಾಂಗ್ರೆಸ್. ದೇಶದ 60ರಷ್ಟು ಸಾಧನೆ ನಾವು ಮಾಡಿದ್ದೇವೆ. ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಬಿಜೆಪಿಗೆ ಸಿದ್ಧಾಂತ ಇಲ್ಲ. ದೇಶದಲ್ಲಿ ಸಂವಿಧಾನ ಅಪಾಯದಲ್ಲಿ ಇದೆ. ಪ್ರಜಾಪ್ರಭುತ್ವ ಬಲವರ್ಧನೆಗೆ ಮತ್ತು ಇಡೀ ರಾಜ್ಯದಲ್ಲಿ ಕೋಮುವಾದ -ಜಾತಿವಾದ ತೊಗಲಿಸಲು ನಮ್ಮ ಯಾತ್ರೆ ನಡೆದಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 pm, Fri, 10 February 23