AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಗಾದ ಶಾಸ್ತಿ ಕೆಲವೇ ದಿನಗಳಲ್ಲಿ ಮಗನಿಗೂ ಆಗುತ್ತೆ: ಪ್ರಿಯಾಂಕ್​ ಖರ್ಗೆ ಟಾರ್ಗೆಟ್ ಮಾಡಿದ ಬಿಜೆಪಿ ನಾಯಕ

ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆ ಚುನಾವಣೆಯಲ್ಲಿ ತವರಿನಲ್ಲೇ ಸೋಲಿಸಿದ್ದರು. ಇದೀಗ ವಿಧಾನಸಭೆ ಚುನಾವಣೆಯಲ್ಲಿ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಲು ಬಿಜೆಪಿ ನಾಯಕರು ತಂತ್ರ ರೂಪಿಸುತ್ತಿದ್ದಾರೆ.

ತಂದೆಗಾದ ಶಾಸ್ತಿ ಕೆಲವೇ ದಿನಗಳಲ್ಲಿ ಮಗನಿಗೂ ಆಗುತ್ತೆ: ಪ್ರಿಯಾಂಕ್​ ಖರ್ಗೆ ಟಾರ್ಗೆಟ್ ಮಾಡಿದ ಬಿಜೆಪಿ ನಾಯಕ
ಪ್ರಿಯಾಂಕ್ ಖರ್ಗೆ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Feb 10, 2023 | 8:29 PM

Share

ಕಲಬುರಗಿ: ಸೋಲಿಲ್ಲದ ಸರದಾರ ಎಂದು ಜನಪ್ರಿಯರಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge)  ಅವರನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿತ್ತು. ಕಾಂಗ್ರೆಸ್​ನಲ್ಲಿದ್ದ ಉಮೇಶ್ ಜಾಧವ್ ಅವರನ್ನು ಬಿಜೆಪಿ ಕರೆದುತಂದು ಖರ್ಗೆ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಖರ್ಗೆ ಅವರನ್ನು ಸೋಲಿಸಲು ಬಿಜೆಪಿ ನಾನಾ ರಣತಂತ್ರಗಳೊಂದಿಗೆ ಬಿಜೆಪಿ ನಾಯಕರು ಒಗ್ಗಟ್ಟಾಗಿ ನಿಂತು ಕಟ್ಟಿಹಾಕಿದ್ದರು. ಇದೀಗ ಬಿಜೆಪಿ ಟಾರ್ಗೆಟ್​ ಅವರ ಪುತ್ರ ಪ್ರಿಯಾಂಕ್ ಖರ್ಗೆ. ಹೌದು…ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ(Priyank Kharge) ಅವರನ್ನು ಸೋಲಿಸಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಚಿತ್ತಾಪುರದಲ್ಲಿ ಬಿಜೆಪಿ ಸದ್ದಿಲ್ಲದೆ ಕಾರ್ಯತಂತ್ರಗಳನ್ನು ರೂಪಿಸಿದೆ.

ಇನ್ನು ಈ ಬಗ್ಗೆ ಕಲಬುರಗಿಯಲ್ಲಿ ಇಂದು (ಫೆಬ್ರವರಿ 10) ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಎನ್​.ರವಿ ಕುಮಾರ್, ಶಾಸಕ ಪ್ರಿಯಾಂಕ್​ ಖರ್ಗೆ ಲಂಗು ಲಗಾಮಿಲ್ಲದೇ ಮಾತನಾಡುತ್ತಿದ್ದಾರೆ. ತಂದೆಗಾದ ಶಾಸ್ತಿ ಪ್ರಿಯಾಂಕ್​ ಖರ್ಗೆಗೂ ಕೆಲವೇ ದಿನಗಳಲ್ಲಿ ಆಗುತ್ತದೆ. ಕಲ್ಯಾಣ ಕರ್ನಾಟಕಕ್ಕೆ ಪ್ರಿಯಾಂಕ್​​ ಕೊಡುಗೆ ಶೂನ್ಯ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್​ ಖರ್ಗೆ ಮಹಾನ್​ ಕಳ್ಳರು. ಕಲ್ಯಾಣ ಕರ್ನಾಟಕಕ್ಕೆ ಬಂದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಚಿತ್ತಾಪುರ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಪ್ರಿಯಾಂಕ್ ಸೋಲುತ್ತಾರೆ ಎಂದು ಭವಿಷ್ಯ ನುಡಿದರು.

ಕ್ಷೇತ್ರ ಹುಡುಕುವ ಪರಿಸ್ಥಿತಿಗೆ ಸಿದ್ದರಾಮಯ್ಯಗೆ ಬರಬಾರದಿತ್ತು. ಕೋಲಾರ ಕ್ಷೇತ್ರದಲ್ಲೂ ಸಿದ್ದರಾಮಯ್ಯಗೆ ಸೋಲುವ ಭಯ ಕಾಡುತ್ತಿದೆ. ಇದೀಗ ಸವದತ್ತಿ ಕ್ಷೇತ್ರಕ್ಕೆ ಹೋಗುತ್ತಾರೆ ಅಂತಾ ಹೇಳಲಾಗುತ್ತಿದೆ ಎಂದರು.

ಇನ್ನು ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಿಸುವಲ್ಲಿ ರವಿ ಕುಮಾರ್ ಅವರ ಪಾತ್ರ ಬಹಳ ದೊಡ್ಡದಿದೆ. ಹಿಂದೂ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರನ್ನು ಹಿಡಿದುಕೊಂಡು ಭರ್ಜರಿ ರಣತಂತ್ರಗಳನ್ನು ಹೆಣೆದಿದ್ದರು. ಅಲ್ಲದೇ ದೀರ್ಘ ಸಮಯದವರೆಗೆ ಕಲಬುರಗಿಯಲ್ಲಿ ಬೀಡುಬಿಟ್ಟು ಪ್ರತಿ ಬೂತ್​ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದರು.

ಅಂತಿಮವಾಗಿ ಹೈಕಮಾಂಡ್​ ನೀಡಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಖರ್ಗೆ ಸೋಲಿಸುವಲ್ಲಿ ರವಿ ಕುಮಾರ್ ಯಶಸ್ವಿಯಾಗಿದ್ದರು. ಇದೀಗ ರವಿ ಕುಮಾರ್ ಕಣ್ಣು ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಮೇಲೆ ಬಿದ್ದಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಈಗಿನಂದಲೇ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರವಿ ಕುಮಾರ್ ಅವರು ಪದೇ ಪದೇ ಕಲಬುಗಿಗೆ ಭೇಟಿ ನೀಡಿ ಪಕ್ಷದ ಹಾಗೂ ಹಿಂದೂ ಸಂಘಟನೆಗಳ ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತಾರೆ.