ಕಲಬುರಗಿ: ಹೆತ್ತವರ ಕಣ್ಣೀರು ಮುಗಿಲು ಮುಟ್ಟಿತ್ತು. ಹೆತ್ತವರನ್ನು ಸಂತೈಸಲು ಅನೇಕರು ಪರದಾಡುತ್ತಿದ್ದರು. ಮತ್ತೊಂದೆಡೆ ಸಂಬಂಧಿಕರ ಆಕ್ರಂಧನ ಕೂಡ ಮುಗಿಲು ಮುಟ್ಟಿತ್ತು. ಹೌದು ಮನೆಗೆ ಆಧಾರವಾಗಿದ್ದ ಮಗ ಬಾರದ ಲೋಕಕ್ಕೆ ಹೋಗಿದ್ದ. ಮಗನನ್ನು ಕಳೆದುಕೊಂಡು ಹೆತ್ತವರು ಗೋಳಾಡುತ್ತಿದ್ದರು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ. ಇಪ್ಪತ್ತೆಂಟು ವರ್ಷದ ಶಿವಶರಣಪ್ಪ ಜಮಾದಾರ್ ಬಾರದ ಲೋಕಕ್ಕೆ ಹೋಗಿದ್ದಾನೆ. ಕ್ರೂಸರ್ ಡ್ರೈವರ್ ಆಗಿದ್ದ ಶಿವಶರಣಪ್ಪ, ಈ ಮೊದಲು ತನ್ನದೇ ಆದ ಕ್ರೂಸರ್ ಹೊಂದಿದ್ದನಂತೆ. ಆದರೆ ಕಳೆದ ಕೆಲ ದಿನಗಳ ಹಿಂದೆ ತನ್ನ ಸ್ವಂತ ವಾಹನವನ್ನು ಮಾರಾಟ ಮಾಡಿದ್ದ. ಅವರಿವರ ಕ್ರೂಸರ್ನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನಂತೆ.
ಇನ್ನು ಕಳೆದ ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದ ಶಿವಶರಣಪ್ಪ. ಅಂದಾಜು ರಾತ್ರಿ ಹತ್ತು ಗಂಟೆ ಸಮಯದಲ್ಲಿ ಮನೆಗೆ ಬಂದಿದ್ದ ಇದೇ ಚಿಂಚೋಳಿ ಗ್ರಾಮದ ತುಳಜಪ್ಪ ಮತ್ತು ಸಾಯಿಬಣ್ಣಾ ಅನ್ನೋರು ಆತನನ್ನ ಕರೆದುಕೊಂಡು ಹೋಗಿದ್ದರು. ಶಿವಶರಣಪ್ಪ ಡ್ರೈವರ್ ಆಗಿದ್ದರಿಂದ ಬಾಡಿಗೆಗೆ ಕರೆದುಕೊಂಡು ಹೋಗಿರಬೇಕು ಎಂದು ತಾಯಿ ಸುಮ್ಮನಾಗಿದ್ದಳು. ಆದರೆ ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಶಿವಶರಣಪ್ಪನ ಮನೆಗೆ ಬಂದಿದ್ದ ಪಕ್ಕದ ಮನೆಯ ನಿವಾಸಿಯಾಗಿದ್ದ ಶ್ರೀಮಂತ ಎನ್ನುವ ವ್ಯಕ್ತಿ ನಿಮ್ಮ ಮಗ ನಮ್ಮ ಮನೆಯಲ್ಲಿ ಕುಡಿದು ಬಂದು ಬಿದ್ದಿದ್ದಾನೆ. ಆತನನ್ನ ಕರೆದುಕೊಂಡು ಹೋಗಿ ಎಂದಿದ್ದಾನೆ.
ಹೀಗಾಗಿ ಶಿವಶರಣಪ್ಪನ ತಾಯಿ ಮಲ್ಲಮ್ಮ ಶಿವಶರಣಪ್ಪ ಬಿದ್ದಿದ್ದ ಮನೆಗೆ ಹೋಗಿದ್ದಳು. ಹೋಗಿ ನೋಡಿದಾಗ ಶಿವಶರಣಪ್ಪ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಹೀಗಾಗಿ ಹೆತ್ತವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಶಿವಶರಣಪ್ಪ ಬದುಕಿಲ್ಲ ಎಂದು ಗೊತ್ತಾಗಿದೆ. ಆದರೆ ತಮ್ಮ ಮಗನದ್ದು ಸಹಜ ಸಾವಲ್ಲ, ಬದಲಾಗಿ ಕೊಲೆ ಎಂದು ಶಿವಶರಣಪ್ಪನ ತಾಯಿ ಆರೋಪಿಸುತ್ತಿದ್ದಾಳೆ. ಹೌದು ಶಿವಶರಣಪ್ಪನನ್ನು ಕರೆದುಕೊಂಡು ಹೋಗಿದ್ದ ತುಳಜಪ್ಪ ಮತ್ತು ಸಾಯಿಬಣ್ಣಾ ಜೊತೆಗೆ ಅವರ ಕುಟುಂಬದವರು ಸೇರಿಕೊಂಡು ಶಿವಶರಣಪ್ಪನನ್ನು ಕೊಲೆ ಮಾಡಿ, ನಂತರ ಅವರೇ ಮನೆಗೆ ಬಂದು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಶಿವಶರಣಪ್ಪನ ಕೊಲೆಗೆ ಅಕ್ರಮ ಸಂಬಂಧ ಆರೋಪವೇ ಕಾರಣವಂತೆ
ಇನ್ನು ಶಿವಶರಣಪ್ಪನ ಕೊಲೆಗೆ ಅಕ್ರಮ ಸಂಬಂಧ ಆರೋಪವೇ ಕಾರಣವಂತೆ. ಹೌದು ತುಳುಜಪ್ಪಾ, ಸಾಯಿಬಣ್ಣನನಿಗೆ, ತಮ್ಮ ಕುಟುಂಬದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಅನುಮಾನವಿತ್ತಂತೆ. ತಮ್ಮ ಕುಟುಂಬದ ಮಹಿಳೆಯ ಜೊತೆ ಶಿವಶರಣಪ್ಪ ಪೋನ್ನಲ್ಲಿ ಮಾತನಾಡುತ್ತಾನೆ. ಅವಳ ಜೊತೆ ಅಕ್ರಮ ಸಂಬಂಧ ಇದೆ ಎನ್ನುವ ಅನುಮಾನವನ್ನು ಕಳೆದ ಕೆಲ ದಿನಗಳಿಂದ ಇಟ್ಟುಕೊಂಡಿದ್ದರಂತೆ. ಇದೇ ಕಾರಣಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ಶಿವಶರಣಪ್ಪನನ್ನು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಆಗ ಕೂಡ ಹೆತ್ತವರು ಹೋಗಿ ಮಗನಿಗೆ ಬುದ್ದಿ ಹೇಳಿದ್ದರಂತೆ. ಆದರೆ ಕಳೆದ ರಾತ್ರಿ ಮತ್ತೆ ದ್ವೇಷ ಇಟ್ಟುಕೊಂಡು ದುಷ್ಕರ್ಮಿಗಳು, ತಮ್ಮದೇ ಮನೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಸ್ನೇಹ, ಸಲುಗೆಯಿಂದ ಇರಲು ನಿರಾಕರಿಸಿದಕ್ಕೆ ಇಂದಿರಾನಗರದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಕ್ಯಾಬ್ ಡ್ರೈವರ್ ಅರೆಸ್ಟ್
ಸದ್ಯ ಶಿವಶರಣಪ್ಪ ಸಾವಿನ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆೆ. ಶಿವಶರಣಪ್ಪ ಹೆತ್ತವರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇದೀಗ ಪೊಲೀಸರು ಮರಣೋತ್ತರ ವರದಿಗಾಗಿ ಕಾಯುತ್ತಿದ್ದು, ಮರಣೋತ್ತರ ವರದಿಯಲ್ಲಿ ಸಹಜ ಸಾವಾ ಅಥವಾ ಕೊಲೆ ಮಾಡಲಾಗಿದೆಯಾ ಎನ್ನುವುದು ಗೊತ್ತಾಗಲಿದ್ದು, ಅದಕ್ಕಾಗಿ ಕಾಯುತ್ತಿದ್ದಾರೆ. ಆದರೆ ಬಾಳಿ ಬದುಕಬೇಕಿದ್ದ ಯುವಕ ಪಕ್ಕದ ಮನೆಯಲ್ಲಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Mon, 13 March 23