ಮಹಿಳೆ ಮೇಲಿನ ಅತ್ಯಾಚಾರ ಯತ್ನ-ಕೊಲೆ: 15 ವರ್ಷದಿಂದ ಜೈಲು ಹಕ್ಕಿಯಾಗಿದ್ದ ಆರೋಪಿ ಬಿಡುಗಡೆ! ಕಾನೂನು ಕುಣಿಕೆಯಿಂದ ಬಚಾವಾಗಿದ್ದು ಹೇಗೆ?
Sindagi: ಸಿಂದಗಿ ತಾಲೂಕಿನ ಬಗಲೂರು ಗ್ರಾಮದಲ್ಲಿ ಅಂದು ನಡೆದ ಆ ಘಟನೆಯ ಬಗ್ಗೆ ಮಹಿಳೆಯ ಮನೆಯವರಿಗೆ ತಿಳಿಸದೇ ಇರುವ ಕಾರಣ ನಾನು ಅಪರಾಧಿಯಾಬೇಕಾಯಿತು. 15 ವರ್ಷಗಳ ಬಳಿಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನನಗೆ ನ್ಯಾಯ ಸಿಕ್ಕಿದೆ. ನನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆಂದು ಮಹಾಂತೇಶ ಖೈನೂರು ಖುಷಿಪಟ್ಟಿದ್ದಾನೆ.
ಆ ವ್ಯಕ್ತಿ 15 ವರ್ಷಗಳಿಂದ ಜೈಲು ಹಕ್ಕಿಯಾಗಿದ್ದ. ಮಹಿಳೆ (Woman) ಮೇಲಿನ ಅತ್ಯಾಚಾರ ಯತ್ನ ಹಾಗೂ ಕೊಲೆ (Murder) ಆರೋಪ ಈತನ ಮೇಲಿತ್ತು. ವಿಜಯಪುರ ಜಿಲ್ಲಾ ಎರಡನೇ ಆಧಿಕ ಸತ್ರ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಮಾಡಿತ್ತು. ಆದರೆ ಇದೀಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಹದಿನೈದು ವರ್ಷಗಳಿಂದ ಜೈಲಲ್ಲಿದ್ದವ ಕುಟುಂಬಸ್ಥರನ್ನು ಸೇರಿದ್ದಾನೆ. ಈತ ಜೈಲಿನಿಂದ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿಲ್ಲ. ಆದರೂ ಸರಳುಗಳ ಹಿಂದಿದ್ದವ ಹೊರಗಡೆ ದೋಷಮುಕ್ತವಾಗಿ ಬಂದಿದ್ದಾರೂ ಹೇಗೆ ಎಂಬುದರ ಕುರಿತ ವರದಿ ಇಲ್ಲಿದೆ ನೋಡಿ… ಅದು ಕಳೆದ 18-02-2010 ವಿಜಯಪುರ ಜಿಲ್ಲಾ ಎರಡನೇ ಆಧಿಕ ಸತ್ರ ನ್ಯಾಯಾಲಯದಲ್ಲಿ ಓರ್ವ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಆರೋಪದ ಮೇಲಿನ ವಿಚಾರಣೆಯ ಅಂತೀಮ ತೀರ್ಪು ಪ್ರಕಟವಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಸಾಕ್ಷಾಧಾರಗಳನನ್ನು ಆಧರಿಸಿ ಆರೋಪಿ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆಸಿ ಆಕೆಯನ್ನು ಕೊಲೆ ಮಾಡಿದ್ದು ಸಾಬೀತಾಗಿದೆ ಎಂದು ಆರೋಪಿಗೆ (Accused) ಜೀವಾವಧಿ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದ್ದರು. ಹೀಗೆ ಶಿಕ್ಷೆಗೆ ಒಳಗಾಗಿದ್ದವನೇ ಮಹಾಂತೇಶ ಖೈನೂರು ವಿಜಯಪುರ (Vijayapura) ಜಿಲ್ಲೆ ಸಿಂದಗಿ (Sindagi) ತಾಲೂಕಿನ ಬಗಲೂರು ಗ್ರಾಮದ ವಾಸಿ.
ಇದೇ ಮಹಾಂತೇಶ ಕಳೆದ 2007 ರಲ್ಲಿ ತಮ್ಮದೇ ಗ್ರಾಮದ ಮಹಿಳೆ ಮೇಲೆ ಅತ್ಯಾಚಾರ ಯತ್ನ ಮಾಡಿ ಆಕೆಯನ್ನು ಕೊಲೆ ಮಾಡಿದ್ದನಂತೆ. ಸಿಂದಗಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿ ಬಳಿಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸತತ ಮೂರು ವರ್ಷಗಳ ವಿಚಾರಣೆ ಬಳಿಕ ಮಹಾಂತೇಶ ಖೈನೂರುಗೆ ಶಿಕ್ಷೆ ವಿಧಿಸಲಾಗಿತ್ತು. ಬಡತನ, ಕಾನೂನು ಜ್ಞಾನ ಇಲ್ಲದ ಕಾರಣ ಮಾನಸಿಕವಾಗಿ ನೊಂದಿದ್ದ ಮಹಾಂತೇಶ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಿರಲಿಲ್ಲ. ಮೇಲ್ಮನವಿ ಸಲ್ಲಿಕೆ ಮಾಡಲು ಬಡತನ ಅಡ್ಡಿಯಾಗಿತ್ತು. ಮೇಲ್ಮನವಿ ಶುಲ್ಕ ಹಾಗೂ ನ್ಯಾಯವಾದಿಗಳ ಶುಲ್ಕ ಭರಿಸಲು ಹಣವಿರಲಿಲ್ಲ. ಹಾಗಾಗಿ, ಜೀವನ ಪೂರ್ತಿ ಜೈಲಿನಲ್ಲೇ ಕಳೆಯಲು ನಿರ್ಧಾರ ಮಾಡಿದ್ದ.
ಹೀಗೆ ಜೈಲಿನಲ್ಲಿದ್ದ ಮಹಾಂತೇಶ ಹಾಗೂ ಇಂಥ ಇತರೆ ಅಪರಾಧಿಗಳ ಪರಸ್ಥಿತಿ ಅರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಸದಸ್ಯ ವೆಂಕಣ್ಣ ಹೊಸಮನಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯಬೇಕೆಂಬ ಸಲಹೆ ನೀಡಿದರು. ಮೊದ ಮೊದಲು ಒಪ್ಪದ ಮಹಾಂತೇಶ ಬಳಿಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಲಬುರಗಿ ಹೈಕೋರ್ಟಿಗೆ ಮನವಿ ಸಲ್ಲಿಕೆ ಮಾಡಿದರು. ಸಾಮಾನ್ಯವಾಗಿ ಒಂದು ತೀರ್ಪು ಬಂದ ಬಳಿಕ 90 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು. ಆದರೆ ಮಹಾಂತೇಶ 4000 ಕ್ಕೂ ಹೆಚ್ಚು ದಿನಗಳಾದ ಬಳಿಕ ಮೇಲ್ಮನವಿ ಸಲ್ಲಿಕೆ ಮಾಡಿದ್ದ.
ವಿಶೇಷ ಪ್ರಕರಣವೆಂದು ಪರಿಗಣಿಸಿ ಕಲಬುರಗಿ ಹೈಕೋರ್ಟ್ ಮಹಾಂತೇಶ ಖೈನೂರು ಪ್ರಕರಣವನ್ನು ಸ್ವೀಕರಿಸಿ ಸತತ 8 ತಿಂಗಳ ಕಾಲ ವಿಚಾರಣೆ ನಡೆಸಿತ್ತು. ಮಹಾಂತೇಶನ ಮಹಿಳೆ ಮೇಲೆ ಅತ್ಯಾಚಾರ ಯತ್ನ ಹಾಗೂ ಕೊಲೆ ಮಾಡಿದ್ದರ ಕುರಿತ ಸಾಕ್ಷಾಧಾರಗಳ ಕೊರತೆ ಕಾರಣದಿಂದ ಕಲಬುರಗಿ ಕೈಕೋರ್ಟ್ 10-02-2023 ರಂದು ಮಹಾಂತೇಶ ನಿರ್ದೋಷಿ, ಕೂಡಲೇ ಆತನನ್ನು ಕಾರಾಗೃಹದಿಂದ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದೆ. ಜೀವಾಧಿ ಶಿಕ್ಷೆಗೆ ಗುರಿಯಾಗಿದ್ದು 15 ವರ್ಷ ಜೈಲಲ್ಲಿದ್ದವ ಆರೋಪ ಮುಕ್ತನಾಗಿ ಹೊರ ಬರೋದಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರಣವಾಗಿದೆ. ಎಂದು ವೆಂಕಣ್ಣ ಹೊಸಮನಿ, ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಿಗೆ, ಅಪರಾಧಿಗಳಿಗೆ ಕಾನೂನು ಸಹಾಯ ಮಾಡಲಾಗುತ್ತದೆ. ಕಾನೂನು ಪ್ರಕಾರ ಸಹಾಯ ಮಾಡುವ ಅವಕಾಶವಿದೆ. ಬಡವರಿಗೆ ನಿರ್ಗತಿಕರಿಗೆ, ಹಣವಿಲ್ಲದವರಿಗೆ ನ್ಯಾಯಾಲಯ ಹಾಗೂ ನ್ಯಾಯವಾದಿಗಳಿಗೆ ಶುಲ್ಕ ಭರಿಸಲು ಆಗದವರಿಗೆ ಉಚಿತವಾಗಿ ಕಾನೂನು ಸೇವೆ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಾಯ ಮಾಡುತ್ತದೆ. ಸಂಪೂರ್ಣ ಉಚಿತವಾಗಿ ಕಾನೂನು ಸೇವೆ ಸಲ್ಲಿಸಲಾಗುತ್ತದೆ.
ಈ ರೀತಿ ಮಹಾಂತೇಶ ಖೈನೂರು ಪ್ರಕರಣದಲ್ಲೂ ಉಚಿತವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಅವರ ಪ್ರಯತ್ನದಿಂದ ಸಾಧ್ಯವಾಗಿದೆ. ಜೈಲಿನಲ್ಲೇ ಜೀವನ ಕಳೆಯಬೇಕಿದ್ದ ಮಹಾಂತೇಶ ಹೊರ ಜಗತ್ತಿಗೆ ಬರಲು ವೆಂಕಣ್ಣ ಹೊಸಮನಿ ಹಾಗೂ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ ಐ ಜಿ ಮ್ಯಾಗೇರಿ ಕಾರಣಿಕರ್ತರಾಗಿದ್ದಾರೆ.
ಸದ್ಯ ಆರೋಪ ಮುಕ್ತನಾಗಿ ಮಹಾಂತೇಶ ಖೈನೂರ ತನ್ನ ತಂದೆ ತಾಯಿ ಪತ್ನಿ ಮಕ್ಕಳು ಹಾಗೂ ಸಹೋದರರನ್ನು ಸೇರಲು ಸಾಧ್ಯವಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಈ ಸೇವೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಕಾರಣ ಯಾವುದೇ ಕಾನೂನಾತ್ಮಕ ಸಮಸ್ಯೆಗಳಿದ್ದರೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇವೆ ಪಡೆದುಕೊಳ್ಳಬೇಕಿದೆ. ಇನ್ನು ಆರೋಪ ಮುಕ್ತನಾಗಿ ಬಂದಿರೋ ಮಹಾಂತೇಶ ನಾನು ಮಹಿಳೆ ಮೇಲೆ ಅತ್ಯಾಚಾರ ಯತ್ನ ಮಾಡಿ ಕೊಲೆ ಮಾಡಿಲ್ಲ.
ನಮ್ಮೂರಿನಲ್ಲಿ ಟ್ಯ್ರಾಕ್ಟರ್ ತೆಗೆದುಕೊಂಡು ಜಮೀನಿಗೆ ಹೊರಟಿದ್ದೆ ಮಹಿಳೆಯೂ ಜಮೀನಿಗೆ ಹೋಗುತ್ತಿದ್ದಳು. ಆಗ ಆಕೆ ನನ್ನ ಟ್ಟ್ಯಾಕ್ಟರ್ ನಲ್ಲಿ ಜಮೀನಿಗೆ ಹೋಗಲು ಹತ್ತಿದ್ದಳು. ಈ ವೇಳೆ ಅನತಿ ದೂರ ಹೋದಾಗ ಟ್ರ್ಯಾಕ್ಟರ್ ನಲ್ಲಿದ್ದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದಳು. ಸ್ಥಳದಲ್ಲೇ ಮೃತಪಟ್ಟಳು. ಆಗ ನಾನು ಗಾಬರಿಯಿಂದ ಆಕೆಯ ಶವವನ್ನು ರಸ್ತೆ ಬದಿಗೆ ಸರಿಸಿ ಅಲ್ಲಿಂದ ಟ್ರ್ಯಾಕ್ಟರ್ ಸಮೇತ ಹೋಗಿ ಬಿಟ್ಟೆ. ಆದರೆ ಘಟನೆಯ ಬಗ್ಗೆ ಮಹಿಳೆಯ ಮನೆಯವರಿಗೆ ತಿಳಿಸದೇ ಇರುವ ಕಾರಣ ನಾನು ಅಪರಾಧಿಯಾಬೇಕಾಯಿತು. 15 ವರ್ಷಗಳ ಬಳಿಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನನಗೆ ನ್ಯಾಯ ಸಿಕ್ಕಿದೆ. ನನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆಂದು ಖುಷಿಪಟ್ಟಿದ್ದಾನೆ.
ಒಟ್ಟಾರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಓರ್ವ ಅಪರಾಧಿ ತನ್ನ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಲು ಕಾರಣವಾಗಿದೆ. ಅಷ್ಟೇ ಅಲ್ಲ, ಆರೋಪ ಮುಕ್ತವಾಗಿ ಕಾರಾಗೃಹದಿಂದ ಹೊರ ಬಂದು ತನ್ನ ಕುಟುಂಬವನ್ನು ಸೇರಲು ಸಾಧ್ಯವಾಗಿದೆ. ಕಾರಣ ಬಡವರು ಹಣವಿಲ್ಲದವರು ಇಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಾನೂನು ಸೇವೆ ಪಡೆಯಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರಲ್ಲೂ ಜಾಗೃತಿ ಮೂಡಬೇಕಿದೆ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ