ಅದು ಭಾಗದ ಪ್ರತಿಷ್ಠಿತ ಮೆಡಿಕಲ್ ಕಾಲೇಜು. ಆಂಧ್ರ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿಯಂತ ಘಟಾನುಗಟಿಗಳು ವ್ಯಾಸಂಗ ಮಾಡಿದ ಕಾಲೇಜು. ಸದ್ಯ ಅದೇ ಕಾಲೇಜಿನಲ್ಲಿ ಶಿಷ್ಯವೇತನದ ಗೋಲ್ ಮಾಲ್ ಆರೋಪ ಕೇಳಿ ಬಂದಿದೆ. ಕೋಟಿ ಕೋಟಿ ರೂಪಾಯಿಗಳ ದೊಡ್ಡ ಹಗರಣವೇ ನಡೆದು ಹೋಯ್ತಾ ಎನ್ನೋ ಅನುಮಾನ ಮೂಡಿದೆ…ಹಾಗಿದ್ರೆ ಅಲ್ಲಾಗಿದ್ದೇನು…ಅಷ್ಟಕ್ಕೂ ಆ ಕಾಲೇಜು ಯಾವುದು ಅಂತೀರಾ ಈ ಸ್ಟೋರಿ ನೋಡಿ. ಹೌದು. ಕಲಬುರಗಿಯ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜು (Mahadevappa Rampure Medical College Gulbarga) ವಿರುದ್ಧ ವಿದ್ಯಾರ್ಥಿಗಳ (PG students) ಶಿಷ್ಯವೇತನದ ಹಗರಣ ಆರೋಪ (Stipend golmaal) ಕೇಳಿ ಬಂದಿದೆ. ವೈದ್ಯ ಪಿಜಿ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಆಗಲಿ ಅಂತಾ ಪ್ರತಿ ತಿಂಗಳು ಸರ್ಕಾರದ ನಿಯಮಾವಳಿಯಂತೆ ಸ್ಟೈಫಂಡ್ ನೀಡಲಾಗುತ್ತೆ. ಆದ್ರೆ ಕಲಬುರಗಿಯ MRMC ಮೆಡಿಕಲ್ ಕಾಲೇಜು ಮಾತ್ರ ಆ ಶಿಷ್ಯವೇತನದಲ್ಲಿ ಭಾರೀ ಕಳ್ಳಾಟವಾಡಿರೋದು ಬಟಾಬಯಲಾಗಿದೆ.
ಪಿಜಿ ವೈದ್ಯಕೀಯ ವಿದ್ಯಾರ್ಥಿಗಳಿ ನೀಡಬೇಕಾದ ಸ್ಕಾಲರ್ಶಿಪ್ ನುಂಗಿ ನೀರು ಕುಡಿಯುತ್ತಿದೆ. ವಿದ್ಯಾರ್ಥಿಗಳಿಗೆ ಸೀಗಬೇಕಾದ ಸ್ಟೈಫಂಡ್ ನ್ನ MRMC ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯೇ ತಾನೇ ಸ್ವಾಹ ಮಾಡ್ತಿದೆ. ವಿದ್ಯಾರ್ಥಿಗಳ ಖಾತೆಗೆ ಪ್ರತಿ ತಿಂಗಳು ಶಿಷ್ಯವೇತನ ಬರುತ್ತೆ. ಆದ್ರೆ ಇದನ್ನ ರಿಟರ್ನ್ ಕಾಲೇಜು ಆಡಳಿತ ಮಂಡಳಿಯೇ ತೆಗೆದುಕೊಳ್ಳುತ್ತಿದೆ.
ಅದು ಹೇಗಪ್ಪಾ ಅಂದ್ರೆ ವಿದ್ಯಾರ್ಥಿಗಳಿಂದ ಮೊದಲೆ ಬ್ಲ್ಯಾಂಕ್ ಚೆಕ್ ಪಡೆದು ಶಿಷ್ಯವೇತನವನ್ನ ವಿದ್ಯಾರ್ಥಿಗಳ ಖಾತೆಗೆ ಜಮಾ ಆದ ತಕ್ಷಣ, ಕಾಲೇಜು ಆಡಳಿತ ಮಂಡಳಿ ಡ್ರಾ ಮಾಡಿಕೊಂಡು ಪಿಜಿ ವಿದ್ಯಾರ್ಥಿಗಳಿಗೆ ಮೋಸ ಮಾಡ್ತಿದೆ. ಪಿಜಿ ವೈದ್ಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಧೋಕಾ ಬಗ್ಗೆ ದಾಖಲೆಗಳೇ ಹೇಳುತ್ತಿವೆ.ತಮ್ಮ ಶಿಕ್ಷಣಕ್ಕೆ ತೊಂದರೆ ಮಾಡಬಹುದು ಅಂತಾ ಬಹಿರಂಗವಾಗಿ ಅನ್ಯಾಯ ಬಗ್ಗೆ ವಿದ್ಯಾರ್ಥಿಗಳು ಹೇಳುತ್ತಿಲ್ಲ. ಆದ್ರೆ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ವಿದ್ಯಾರ್ಥಿಗಳೇ ಸಾಮಾಜಿಕ ಕಾರ್ಯಕರ್ತರ ಬಳಿ ಮಾತನಾಡಿರೋ ಆಡಿಯೋ ವೈರಲ್ ಆಗಿದ್ದು, ಗೋಲ್ ಮಾಲ್ ಬಟಾಬಯಲಾಗಿದೆ. MRMC ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಮೋಸ ಮಾಡಿರೋ ಗಂಭೀರ ಆರೋಪ ಕೇಳಿ ಬಂದಿದೆ.
ಇನ್ನು ಕಲಬುರಗಿಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 300 ಕ್ಕೂ ಹೆಚ್ಚು ಪಿಜಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಪ್ರತಿಯೋಬ್ಬ ಪಿಜಿ ವಿದ್ಯಾರ್ಥಿಗೆ ಪ್ರತಿ ತಿಂಗಳು 40-45 ಸಾವಿರ ರೂಪಾಯಿ ಶಿಷ್ಯ ವೇತನ ಬರುತ್ತಿದೆ. ಆದ್ರೆ ಸ್ಟೂಡೆಂಟ್ ಗಳಿಂದ ಖಾಲಿ ಚೆಕ್ ಪಡೆದು ಕಾಲೇಜು ಆಡಳಿತ ಮಂಡಳಿ ಶಿಷ್ಯವೇತನಕ್ಕೆ ಕನ್ನ ಹಾಕ್ತಿದೆ.
ಪ್ರತಿ ತಿಂಗಳು ವಿದ್ಯಾರ್ಥಿಗಳ ಕೋಟ್ಯಾಂತರ ರೂಪಾಯಿ ಹಣ ಆಡಳಿತ ಮಂಡಳಿ ಸ್ವಾಹ ಮಾಡ್ತಿದೆ. ಸ್ಕಾಲರ್ಶಿಪ್ ಅನ್ಯಾಯದ ಬಗ್ಗೆ ಈ ಹಿಂದೆಯೂ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರು ಮೋಸಕ್ಕೆ ಕಡಿವಾಣ ಬಿದ್ದಿಲ್ಲ. ಇನ್ನು ಪಿಜಿ ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನದ ವಸೂಲಿ ಬಗ್ಗೆ HKE ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಅಲ್ಲಗಳೆಯುತ್ತಿದ್ದಾರೆ. ನನ್ನ ಅವಧಿಯಲ್ಲಿ ಆ ರೀತಿ ಯಾವುದು ಆಗಿಲ್ಲ, ಈ ಹಿಂದೆ ಆಗಿರಬಹುದು ಅಂತಾ ಜಾರಿಕೊಳ್ತಿದ್ದಾರೆ.
ಒಟ್ಟಾರೆ ಕಲಬುರಗಿಯ ಪ್ರತಿಷ್ಠಿತ MRMC ಮೆಡಿಕಲ್ ಕಾಲೇಜ್ ವಿರುದ್ದ ಪಿಜಿ ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ವಂಚನೆಯ ಗಂಭೀರ ಆರೋಪ ಭಾರೀ ಸದ್ದು ಮಾಡ್ತಿದೆ. ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೋ ಹಾಗಾಗಿದೆ ಪಿಜಿ ವಿದ್ಯಾರ್ಥಿಗಳ ಪರಿಸ್ಥಿತಿ. ಅದೇನೇ ಇದ್ರು ಸೂಕ್ತ ತನಿಖೆ ನಡೆದ್ರೆ ಮಾತ್ರ ಸ್ಟೂಡೆಂಟ್ಸ್ ಶಿಷ್ಯವೇತನ ದೋಖಾ ಆರೋಪದ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.