ಕಲಬುರಗಿ, ಜೂನ್.17: ಸಿಮೆಂಟ್ ಕಂಪನಿಯಲ್ಲಿ ಹೈಡ್ರಾ ಬಡಿದು ಕಾರ್ಮಿಕ ಮೃತಪಟ್ಟ (Death) ಘಟನೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿ ನಡೆದಿದೆ. ಕಾರ್ಮಿಕ ರವಿ ಪುರು ರಾಠೋಡ್(45) ಮೃತ ದುರ್ದೈವಿ. ಮೃತ ರವಿ ಕಂಪನಿಯಲ್ಲಿ ಹೈಡ್ರಾ ಚಾಲಕನಾಗಿ ಕೆಲಸ ಮಾಡ್ತಿದ್ದ. ದೇಹಕ್ಕೆ ಹೈಡ್ರಾ ಬಡಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಕಂಪನಿಯಲ್ಲಿ ರಕ್ಷಣೆ ಇಲ್ಲ ಎಂದು ಕಾರ್ಮಿಕರು ಆಕ್ರೋಶ ಹೊರ ಹಾಕಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ತಿಬೆಲೆ ಸಮೀಪದ ಬಳ್ಳೂರು ಕೆರೆಯಲ್ಲಿ ಸ್ನೇಹಿತರ ಜೊತೆ ಈಜಲು ಹೋಗಿ ಬಾಲಕ ನೀರು ಪಾಲಾಗಿದ್ದು ಕೆರೆಯಲ್ಲಿ ಬಾಲಕನ ಮೃತದೇಹ ತೇಲಿಬಂದಿದೆ. ಅತ್ತಿಬೆಲೆ ನಿವಾಸಿ ಧನುಷ್(14) ಮೃತ ಬಾಲಕ. ನಿನ್ನೆ ಮೃತದೇಹವನ್ನ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ದಿನ ಪೂರ್ತಿ ಕಾರ್ಯಾಚರಣೆ ನಡೆಸಿದ್ದರು. ಸಂಜೆ ಕತ್ತಲಾಗುತ್ತಿದ್ದಂತೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಬೆಳಿಗ್ಗೆ ಆಗುವಷ್ಟರಲ್ಲಿ ಕೆರೆಯಲ್ಲಿ ಮೃತದೇಹ ತೇಲಿಬಂದಿದೆ. ಸದ್ಯ ಬಾಲಕನ ಮೃತದೇಹ ಹೊರತೆಗೆಯಲಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಭಗಿರತಿ ಪಟ್ರಾ ಎಂಬುವವನನ್ನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 3 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆಯಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. ಕೋಲಾರದಲ್ಲಿ ಗಾಂಜಾ ಮಾರಾಟ ಮಾಡಲು ಆರೋಪಿ ಬಂದಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿ ಮತ್ತು ಮಾಲು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಜೂನ್ 20ರಿಂದ ಫ್ರೀಡಂಪಾರ್ಕ್ ಪಾರ್ಕಿಂಗ್ ಕಟ್ಟಡ ಆರಂಭ!
ಆಕ್ಟಿವಾ- ಬೊಲೆರೋ-ಆಲ್ಟೋ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಆಲ್ಟೋ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಂಬ್ರ ಸಮೀಪದ ಶೇಖಮಲೆಯಲ್ಲಿ ಘಟನೆ ನಡೆದಿದ್ದು, ಸೋಮವಾರಪೇಟೆಯ ಲೋಕೇಶ್, ರವೀಂದ್ರ ಮೃತಪಟ್ಟಿದ್ದಾರೆ. ಇನ್ನು ಗಾಯಗೊಂಡವರನ್ನ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ಮೈಸೂರು ತಾಲ್ಲೂಕು ಸಾಹುಕಾರಹುಂಡಿ ಕೆರೆಯಲ್ಲಿ ಘಟನೆ ನಡೆದಿದ್ದು, ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸಿ ವರುಣ್ ಮತ್ತು ಬಸವನಪುರ ನಿವಾಸಿ ಜಸ್ವಂತ್ ಮೃತ ದುರ್ದೈವಿಗಳಾಗಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ