
ಕಲಬುರಗಿ, ನವೆಂಬರ್ 08: ಆತ ಮಸೀದಿಯೊಂದರಲ್ಲಿ ಕುರಾನ್ (Quran) ಬೋಧನೆ ಮಾಡುವ ಶಿಕ್ಷಕರಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಮಾಡಿದ ಸಾಲವನ್ನ ತೀರಿಸಲಾಗದಕ್ಕೆ ಹುಡುಕಿಕೊಂಡಿದ್ದು ಕಳ್ಳತನದ (theft) ಮಾರ್ಗ. ಮಸೀದಿಯಲ್ಲಿ ಕುರಾನ್ ಬೋಧನೆ ಮಾಡುತ್ತಾ ಅತ್ತ ಮನೆಗಳಿಗೂ ಕನ್ನ ಹಾಕುತ್ತಿದ್ದ ಖದೀಮನನ್ನು ಕಲಬುರಗಿ ಸಿಟಿ ಪೊಲೀಸರು ಬಲೆಗೆ ಕೆಡವಿದ್ದಾರೆ. ಅಷ್ಟಕ್ಕೂ ಇತನ ಕಳ್ಳತನ ದಂಧೆ ಹೇಗಿತ್ತು ಅಂತಾ ತಿಳಿಯಲು ಮುಂದೆ ಓದಿ.
ಮಹ್ಮದ್ ಆರೀಫ್ ಅಲಿ ಬಂಧಿತ ಶಿಕ್ಷಕ. ವಿಶ್ವವಿದ್ಯಾಲಯ ಠಾಣಾ ಪೊಲೀಸರು ಬಂಧಿತನಿಂದ 100 ಗ್ರಾಂ ಚಿನ್ನಾಭರಣ, 16 ಸಾವಿರ ರೂ ಮೌಲ್ಯದ ಬೆಳ್ಳಿ, ಬೈಕ್ ಸೇರಿದಂತೆ 13.41 ಲಕ್ಷ ರೂ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ.
ಕಲಬುರಗಿ ನಗರದ ಬಿಲಾಲಬಾದ್ ಕಾಲೋನಿಯ ನಿವಾಸಿ ಮಹ್ಮದ್ ಆರೀಫ್ ಅಲಿ ಮಸೀದಿಯೊಂದರಲ್ಲಿ ಕುರಾನ್ ಬೋಧಿಸುವ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ತಾವಾಯಿತು ತಮ್ಮ ಕೆಲಸವಾಯಿತು ಅಂತಾ ಇದ್ದಿದ್ದರೆ ಇಂದು ಕಲಬುರಗಿ ಪೊಲೀಸರ ಅತಿಥಿಯಾಗುತ್ತಿರಲಿಲ್ಲ. ಆದರೆ ತಮ್ಮ ಶಿಕ್ಷಕ ವೃತ್ತಿ ಬಿಟ್ಟು ಕಳೆದ ಏಳೆಂಟು ತಿಂಗಳಿನಿಂದ ಕಳ್ಳತನ ವೃತ್ತಿಗೆ ಇಳಿದಿದ್ದರು.
ಇದನ್ನೂ ಓದಿ: ಕದ್ದ ಮಾಲಲ್ಲಿ ದೇವರಿಗೂ ಪಾಲು ಕೊಡ್ತಿದ್ದ ಖತರ್ನಾಕ್ ಕಳ್ಳ!: 20 ವರ್ಷಗಳಿಂದ ರಾಬರಿಯೇ ಫುಲ್ಟೈಮ್ ಕೆಲಸ
ಅದರಂತೆ ಬೆಳಗ್ಗೆ ಮಸೀದಿಯಲ್ಲಿ ಕುರಾನ್ ಬೋಧಿಸಿ ಮಧ್ಯಾಹ್ನ ಮತ್ತು ಸಂಜೆ ಕೆಲಸದ ಬಿಡುವಿನ ವೇಳೆ ನಗರದ ತಮ್ಮ ಬಡಾವಣೆಗಳಲ್ಲಿ ಬೈಕ್ ಮೇಲೆ ಸುತ್ತಾಡ ಬೀಗ ಹಾಕಿರುವ ಮನೆಗಳನ್ನು ವಾಚ್ ಮಾಡುತ್ತಿದ್ದರು. ನಸುಕಿನ ಜಾವ 3 ಗಂಟೆ ಬಳಿಕ ಜನ ಗಾಡ ನಿದ್ರೆಯಲ್ಲಿದ್ದಾಗ ಕಬ್ಬಿಣದ ರಾಡ್‌ನಿಂದ ಮನೆ ಬೀಗ ಒಡೆದು ಕನ್ನ ಹಾಕುತ್ತಿದ್ದರು.
ಇನ್ನು ಬಂಧಿತ ಕುಖ್ಯಾತ ಮನೆಗಳ್ಳ ಮಹ್ಮದ್ ಆರೀಫ್ ಅಲಿ ಕಳೆದ ಅನೇಕ ವರ್ಷಗಳಿಂದ ಮಸೀದಿಯೊಂದರಲ್ಲಿ ಕುರಾನ್ ಬೋಧನೆ ವೃತ್ತಿಯಲ್ಲಿ ಇದ್ದರು. ಆದರೆ ಇತ್ತೀಚಿಗೆ ಮಹ್ಮದ್ ಆರೀಫ್ ಅಲಿಗೆ ಸಾಲಬಾಧೆ ಮತ್ತು ಕೌಟುಂಬಿಕ ಹಣಕಾಸು ತೊಂದರೆಯಿಂದ ಸಿಕ್ಕಾಪಟೆ ಬಳಲುತ್ತಿದ್ದರು. ಹಾಗಾಗಿ ಬರುತ್ತಿದ್ದ 10ರಿಂದ 12 ಸಾವಿರ ರೂ. ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದ ಹಿನ್ನೆಲೆ ಮನೆಗಳಿಗೆ ಕನ್ನ ಹಾಕುವ ಕೆಲಸಕ್ಕೆ ಕೈಹಾಕಿದ್ದರು.
ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಮುಸ್ಲಿಮರು ವಾಸಿಸುವ ಬಡಾವಣೆಗಳಿರೋ ಕಾರಣ, ತಾಜ್ ನಗರ, ರಾಜಪುರ ರೋಡ್ ಸೇರಿದಂತೆ ಅನೇಕ ಕಡೆಗಳಲ್ಲಿ ಮಧ್ಯಾಹ್ನ ಮತ್ತು ಸಂಜೆ ವೇಳೆ ಯಾವ ಮನೆಗಳಿಗೆ ಬೀಗ ಹಾಕಲಾಗಿದೆ ಎಂದು ಗಮನಿಸುತ್ತಿದ್ದರು. ಬಳಿಕ ನಸುಕಿನ ಜಾವ ಬಂದು ಕನ್ನ ಹಾಕುತ್ತಿದ್ದರು.
ಇದನ್ನೂ ಓದಿ: ಆನೇಕಲ್: ಆಹ್ವಾನ ಪತ್ರಿಕೆ ನೀಡುವ ನೆಪದದಲ್ಲಿ ಬಂದು ಚಿನ್ನ ಕದ್ದ ಖತರ್ನಾಕ್ ಜೋಡಿ
ವಿವಿ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಮನೆಗಳ ಕಳ್ಳತನ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಪ್ರಕರಣದ ತನಿಖೆಗಿಳಿದ ಖಾಕಿ ಪಡೆ ಬಡಾವಣೆಗಳಲ್ಲಿನ ಸಿಸಿ ಟಿವಿ ದೃಶ್ಯಗಳನ್ನ ಸಂಗ್ರಹಿಸಿದಾಗ ಸಿಕ್ಕಿದ್ದೆ ಈ ಅನುಮಾನಸ್ಪದ ವ್ಯಕ್ತಿ. ಅದರಂತೆ ಮಸೀದಿಯಲ್ಲಿ ಕುರಾನ್ ಪಠಣ ಮಾಡುತ್ತಿದ್ದ ಮಹ್ಮದ್ ಆರೀಫ್ ಅಲಿಯನ್ನ ವಶಕ್ಕೆ ಪಡೆದು ವಿಚಾರಣೆ ವೇಳೆ ಶಿಕ್ಷಕನ ಅಸಲಿ ಬಣ್ಣ ಬಯಲಾಗಿದೆ.
ಸದ್ಯ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀಮನನ್ನು ಕೊನೆಗೂ ಲಾಕ್ ಮಾಡಲಾಗಿದ್ದು, ವಿವಿ ಠಾಣೆ ಪೊಲೀಸರ ಕಾರ್ಯಾಚರಣೆಗೆ ಕಲಬುರಗಿ ನಗರ ಪೊಲೀಸ್ ಇಲಾಖೆ ಪ್ರಶಂಸನೀಯ ಪತ್ರ ನೀಡಿ ಸತ್ಕರಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:14 pm, Sat, 8 November 25