
ಕಲಬುರಗಿ, (ಡಿಸೆಂಬರ್ 04): ತನ್ನ ಲಿವ್ ಇನ್ (Live in Relationship) ಗೆಳತಿ ಆಸೆ ಪೂರೈಸಲು, ಖರ್ಚು ನಿಭಾಯಿಸಲು ಕಳ್ಳತನಕ್ಕಿಳಿದಿದ್ದ ವ್ಯಕ್ತಿ ಹಾಗೂ ಸಹಾಯ ಮಾಡಿದ್ದವ ಸಿಕ್ಕಿಬಿದ್ದಿದ್ದಾರೆ. ಹೌದು.. ಕೂಲಿ ಕೆಲಸ ಮಾಡುತ್ತಿದ್ದ ಬಡಪಾಯಿ ಮಹಿಳೆಯನ್ನ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಚಿನ್ನಾಭರಣಗಳನ್ನ ಸುಲಿಗೆ ಮಾಡಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರನ್ನ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು (Kalaburagi VV Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ (24) ಬಂಧಿತ ಪ್ರಮುಖ ಆರೋಪಿಯಾಗಿದ್ದು, ಇನ್ನು ಕಲ್ಲಪ್ಪನಿಗೆ ಸಹಾಯ ಮಾಡ್ತಿದ್ದ ಸಂತೋಷ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 22 ರಂದು ಓಂ ನಗರ ಗೇಟ್ ಬಳಿ ಕೂಲಿ ಕೆಲಸಕ್ಕೆಂದು ದಾರುನಾಯಕ್ ತಾಂಡಾ ನಿವಾಸಿ ಸುನೀತಾ ರಾಠೋಡ್ ಎನ್ನುವ ಮಹಿಳೆಯನ್ನು ಕಲ್ಲಪ್ಪ ಅಲಿಯಾಸ್ ಸಂಜು ಮತ್ತು ಸಂತೋಷ್, ಕಟ್ಟಡ ನಿರ್ಮಾಣ ಕಾಮಗಾರಿ ಇದೆ ಎಂದು ವಾಜಪೇಯಿ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿ ಬೆದರಿಸಿ ಕೊರಳಲ್ಲಿನ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದರು.
ಈ ಪ್ರಕರಣ ದಾಖಲಸಿಕೊಂಡಿದ್ದ ಕಲಬುರಗಿ ವಿವಿ ಪೊಲೀಸರು, ವಾಜಪೇಯಿ ಬಡಾವಣೆಯಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ್ದು, ಈ ವೇಳೆ ಕೂಲಿ ಮಹಿಳೆ ಸುನೀತಾಳನ್ನ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಇದರ ಆಧಾರದ ಮೇಲೆ ಕಲ್ಲಪ್ಪ ಅಲಿಯಾಸ್ ಸಂಜು ಮತ್ತು ಸಂತೋಷ್ ಎಂಬಾತರನ್ನ ಬಂಧಿಸಿದ್ದಾರೆ. ಬಂಧಿತ ಸುಲಿಗೆಕೋರರಿಂದ 7.62 ಲಕ್ಷ ಮೌಲ್ಯದ 61 ಗ್ರಾಂ ಚಿನ್ನಾಭರಣ, 600 ಗ್ರಾಂ ಬೆಳ್ಳಿ ವಸ್ತುಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
ಇನ್ನೂ ಕೂಲಿ ಕೆಲಸ ಮಾಡುತ್ತಿದ್ದ ಕಲ್ಲಪ್ಪ ಅಲಿಯಾಸ್ ಸಂಜು, ಮಹಿಳೆಯೊಬ್ಬಳ ಜೊತೆ ಲಿವಿಂಗ್ ಟುಗೆದರ್ ರಿಲೆಷನ್‌ಶಿಪ್‌ನಲ್ಲಿದ್ದ. ಹೀಗಾಗಿ ಆಕೆಯೊಂದಿಗೆ ಮೋಜು ಮಸ್ತಿ ಮಾಡಲು ಹಣ ಕಡಿಮೆ ಬಿದ್ದಾಗ ಪಿಕ್ ಪಾಕೇಟ್ ದಂಧೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅದರಂತೆ ಕೂಲಿ ಮಾಡುವ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
ಮೈ ಮುರಿದು ದುಡಿದು ಬದುಕುವುದು ಬಿಟ್ಟು ಮಹಿಳೆಯೊಂದಿಗೆ ಮೋಜು ಮಸ್ತಿಗಾಗಿ ಸುಲಿಗೆ ಮಾಡಿ ಇದೀಗ ಜೈಲುಪಾಲಾಗಿದ್ದರೆ, ಲಿವಿಂಗ್ ಟುಗೆದರ್ನಲ್ಲಿ ಮಹಿಳೆ ಅರಾಮ್ ಆಗಿ ಮನೆಯಲ್ಲಿದ್ದಾಳೆ.