ಕಲಬುರಗಿ, ನವೆಂಬರ್ 7: ರಾಜ್ಯದಾದ್ಯಂತ ಭಾರೀ ಸದ್ದು ಮಾಡಿರುವ ಕಲಬುರಗಿ ಕೆಇಎ ಪರೀಕ್ಷೆ ಅಕ್ರಮದ (KEA Exam Scam) ಕಿಂಗ್‌ಪಿನ್ ಆರ್‌ಡಿ ಪಾಟೀಲ್ (RD Patil) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಲಬುರಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಮೂರು ಪ್ರಕರಣಗಳಲ್ಲಿಯೂ ಆರ್‌ಡಿ ಪಾಟೀಲ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿ ವಿರುದ್ಧ 3 ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಅಫಜಲಪುರ, ವಿವಿ ಠಾಣೆ, ಅಶೋಕ ನಗರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ಸಂಬಂಧ ಆರೋಪಿ ಜಾಮೀನು ಅರ್ಜಿ ಸಲ್ಲಿಸಿದ್ದ. ಅದನ್ನು ತಿರಸ್ಕರಿಸಿ ಜಡ್ಜ್ ಮೋಹನ್ ಬಾಡಗಂಡಿ ಆದೇಶ ನೀಡಿದ್ದಾರೆ. ಆರ್‌ಡಿ ಪಾಟೀಲ್ ಪರ ಹಿರಿಯ ವಕೀಲ ಶ್ಯಾಮಸುಂದರ್ ವಾದ ಮಂಡನೆ ಮಾಡಿದ್ದರೆ, ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಪಿ. ನರಸಿಂಹಲು ವಾದ ಮಂಡನೆ ಮಾಡಿದ್ದರು.
ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 16 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ 9 ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಹೊರಗಿದ್ದು ಪರೀಕ್ಷೆ ಬರೆಯಲು ಸಹಾಯ ಮಾಡಿದ 7 ಜನರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ: ಆರ್‌ಡಿ ಪಾಟೀಲ್ ಬಂಧನವಾದರೆ ಪ್ರಿಯಾಂಕ್ ಖರ್ಗೆ ಹೆಸರು ಹೊರಬರುವ ಆತಂಕ ಎಟಿಎಂ ಸರ್ಕಾರಕ್ಕೆ: ಬಿಜೆಪಿ ವಾಗ್ದಾಳಿ
ಈ ಮಧ್ಯೆ, ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಬಂಧಿಸಲು ಬರುತ್ತಿದ್ದಂತೆಯೇ ಆತ ಕಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಈ ವಿಚಾರ ರಾಜ್ಯ ರಾಜಕೀಯದಲ್ಲಿಯೂ ಬಹಳ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ