ಕಲಬುರಗಿ: ಕೆಕೆಆರ್ಡಿಬಿಗೆ (Kalyana Karnataka Region Development Board) ಖಾಯಂ ಕಾರ್ಯದರ್ಶಿ ನೇಮಕ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕ.ಕ.ಪ್ರ.ಅ. ಮಂಡಳಿ) ಪ್ರತ್ಯೇಕ ಸೆಲ್ ಅನ್ನು ಕಲಬುರಗಿಯಲ್ಲಿ ಪ್ರಾರಂಭ ಮಾಡಲಾಗುವುದು. ನಮ್ಮ ಚಿಂತನೆ ಮತ್ತು ಕಾರ್ಯಯೋಜನೆಯಲ್ಲಿ ಬದಲಾವಣೆಯನ್ನು ತರಲಿದ್ದೇವೆ. ಸ್ವಲ್ಪ ಸಮಯ ಕೊಡಿ. ಅಮುಲಾಗ್ರ ಬದಲಾವಣೆ ತರುವ ಕೆಲಸ ನಾನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
74ನೇ ಕಲ್ಯಾಣ ಕರ್ನಾಟಕ ಉತ್ಸವ ದಿನದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರಗಿ ನಗರದ ಡಿ.ಆರ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಸರ್ಧಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದು, ಈ ಸಂದರ್ಭದಲ್ಲಿ ಕೆಕೆಆರ್‌ಡಿಬಿ ಕುರಿತು ಮಾತನಾಡಿದ್ದಾರೆ.
ಕೆಕೆಆರ್ಡಿಬಿಗೆ ನೀಡಿರುವ ಹಣ ಖರ್ಚು ಮಾಡಿ ತೋರಿಸಿ. ಹಣ ಖರ್ಚು ತೋರಿಸಿದರೆ ಮತ್ತೆ 1500 ಕೋಟಿ ಕೊಡಲು ಸಿದ್ಧನಿದ್ದೇನೆ. ಒಟ್ಟು ಮೂರು ಸಾವಿರ ಕೋಟಿ ಹಣವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡುತ್ತೇನೆ. ಜನರ ಸುತ್ತ ಅಭಿವೃದ್ಧಿಯಾಗಬೇಕೇ ವಿನ: ಅಭಿವೃದ್ಧಿ ಸುತ್ತ ಜನ ಓಡಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೆಕೆಆರ್‌ಡಿಬಿ ಮತ್ತು ನಂಜುಂಡಪ್ಪ ವರದಿಯನ್ನು ಹೊಸ ರೂಪದಲ್ಲಿ ವಿಸ್ತರಣೆ ಮಾಡುತ್ತೇವೆ. ಪ್ರತಿ 3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಾನೇ ನಡೆಸುತ್ತೇನೆ. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿರುವ ಸಿಮೆಂಟ್ ಪ್ಯಾಕ್ಟರಿಯವರು ನಿರೀಕ್ಷೆಗೆ ತಕ್ಕಂತೆ ಸಹಾಯ ಮಾಡಿಲ್ಲಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿದ್ದರೆ ಯಡಿಯೂರಪ್ಪನವರು ಕಾರಣ: ಸಿಎಂ ಬೊಮ್ಮಾಯಿ
ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿದ್ದರೆ ಯಡಿಯೂರಪ್ಪನವರು ಕಾರಣ. ಈ ಭಾಗದ ಮೇಲೆ ಯಡಿಯೂರಪ್ಪನವರಿಗೆ ಹೆಚ್ಚಿನ ಪ್ರೀತಿ ಇತ್ತು. ಅಲ್ಲದೇ ಕಲ್ಯಾಣ ಕರ್ನಾಟಕ ಮತ್ತು ಮೋದಿ ಅವರಿಗೆ ಸಂಬಂಧವಿದೆ. ಕಲ್ಯಾಣ ಕರ್ನಾಟಕ ಉತ್ಸವ ದಿನದಂದೇ ಪ್ರಧಾನಿ ಮೋದಿ ಅವರ ಜನ್ಮದಿನ ಕೂಡಾ ಹೌದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಳಿಕ ಕೊರೊನಾ ಲಸಿಕೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂದು ಮೂವತ್ತು ಲಕ್ಷ ವ್ಯಾಕ್ಸಿನ್ ನೀಡಲಾಗುತ್ತಿದೆ. ನವಭಾರತಕ್ಕಾಗಿ ನವ ಕರ್ನಾಟಕ, ನವ ಕರ್ನಾಟಕಕ್ಕೆ ನವ ಕಲ್ಯಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ನಂತರ ಸರ್ದಾರ್ ಪಟೇಲರ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸರ್ದಾರ್ ಪಟೇಲರ ಇಚ್ಛಾಶಕ್ತಿ, ಶ್ರಮದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಕರ್ನಾಟಕ ಏಕೀಕರಣದಲ್ಲಿ ಹಿರಿಯರ ಪಾತ್ರ ದೊಡ್ಡದಿದೆ. ಏಕಿಕರಣವಾದರೂ ಏಕಿಕರಣದ ಲಾಭ ಎಲ್ಲಾ ಭಾಗಕ್ಕೂ ಆಗಿಲ್ಲಾ ಎನ್ನುವ ಕೊರಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ 371(ಜೆ) ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
74ನೇ ಕಲ್ಯಾಣ ಕರ್ನಾಟಕ ಉತ್ಸವ: ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ, ವಿವಿಧ ಜಿಲ್ಲೆಗಳಲ್ಲಿ ಸಂಭ್ರಮಾಚರಣೆ
Published On - 10:30 am, Fri, 17 September 21