ಅಂದು ಆ ಇಡೀ ಪಟ್ಟಣ ಅಕ್ಷರಶಃ ರಣಾಂಗಣವಾಗಿತ್ತು.. ಮುಸಲ್ಮಾನರು ಆರಾಧಿಸುವ ದರ್ಗಾದಲ್ಲಿನ ಶಿವಲಿಂಗವನ್ನ ಹಿಂದೂಪರ ಸಂಘಟನೆಗಳು ಲಿಂಗ ಶುದ್ಧೀಕರಣಕ್ಕೆ ಆಗಮಿಸಿದ್ದರು. ಈ ವೇಳೆ ಏಕಾಏಕಿ ಅನ್ಯಧರ್ಮಿಯರು ಪೂಜೆಗೆ ಆಗಮಿಸಿದ್ದವರ ಮೇಲೆ ಕಲ್ಲುತೂರಾಟ ನಡೆಸಿ ದೊಡ್ಡಮಟ್ಟದ ಘರ್ಷಣೆ ನಡೆದಿತ್ತು. ಇದೀಗ ಶಿವರಾತ್ರಿಗೂ (Maha Shivaratri 2024) ಮುನ್ನ ಹಿಂದೂ ಸಂಘಟನೆಗಳು ಅದೇ ಸ್ಥಳದಲ್ಲಿ ರಾಘವ ಚೈತನ್ಯ ರಥಯಾತ್ರೆ ಹಮ್ಮಿಕೊಂಡಿದ್ದು, ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಹೌದು. ಕಲಬುರಗಿ ಜಿಲ್ಲೆ ಆಳಂದ ಪಟ್ಟಣದ (Aland town Kalaburagi) ಲಾಡ್ಲೇ ಮಶಾಕ್ ದರ್ಗಾದಲ್ಲಿನ (Ladle Mashak Dargah) ಶ್ರೀ ರಾಘವ ಚೈತನ್ಯ ಮಂದಿರ ಜೀರ್ಣೋದ್ಧಾರಕ್ಕಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಹಮ್ಮಿಕೊಂಡಿರೋ ರಾಘವ ಚೈತನ್ಯ ರಥಯಾತ್ರೆಗೆ ಕಲಬುರಗಿ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಈಗಾಗಲೇ ಆಳಂದ ತಾಲೂಕಿನಲ್ಲಿ ರಥಯಾತ್ರೆ ಆರಂಭವಾಗಿದ್ದು, ಮಹಾಶಿವರಾತ್ರಿ ಹಬ್ಬದಂದು ಆಳಂದ ಪಟ್ಟಣದಲ್ಲಿ ರಥಯಾತ್ರೆ ನಡೆಯುವ ಹಿನ್ನೆಲೆಯಲ್ಲಿ ಯಾತ್ರೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಹೈಕೋರ್ಟ್ ಪೀಠದ ಮೊರೆಹೋಗಿದ್ದರು.
ಇದೀಗ ಹೈಕೋರ್ಟ್ ಐದು ಷರತ್ತುಗಳನ್ನ ಹಾಕಿ ಅನುಮತಿ ನೀಡಿದೆ.. ರಥಯಾತ್ರೆಯಂದು ಡಿಜೆ ಹಾಗೂ ಟ್ರಾಫಿಕ್ ನಿಯಮ ಉಲ್ಲಂಘಿಸುವಂತಿಲ್ಲ, ಅನ್ಯ ಸಮುದಾಯದ ವಿರುದ್ಧ ಘೋಷಣೆ ಕೂಗುವಂತಿಲ್ಲ, ವಿವಾದಿತ ಸ್ಥಳದ ಕಡೆ ರಥಯಾತ್ರೆ ಹೋಗುವಂತಿಲ್ಲ, ಸೂರ್ಯಾಸ್ತದ ನಂತರ ರಥಯಾತ್ರೆ ಮಾಡುವಂತಿಲ್ಲ.. ಹೀಗೇ ಐದು ಷರತ್ತುಗಳನ್ನ ವಿಧಿಸಿ ಶ್ರೀ ರಾಘವ ಚೈತನ್ಯ ರಥಯಾತ್ರೆಗೆ ಕಲಬುರಗಿ ಹೈಕೋರ್ಟ್ ಪೀಠ ಅನುಮತಿ ನೀಡಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಅವರು ತಿಳಿಸಿದ್ದಾರೆ.
Also Read: ಮಹಾಶಿವರಾತ್ರಿ ವೇಳೆ ಭಕ್ತರು ನಿದ್ದೆ ಮಾಡುವುದಿಲ್ಲ! ಕಾರಣ ತಿಳಿದರೆ ನೀವೂ ಅಂದು ನಿದ್ದೆ ಮಾಡುವುದಿಲ್ಲ
ಇನ್ನು 2022 ರಲ್ಲಿ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗದ ಮೇಲೆ ಕಿಡಿಗೇಡಿಗಳು ಮಲಮೂತ್ರ ಮಾಡಿ ಅಪಮಾನ ಮಾಡಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಶಿವಲಿಂಗ ಶುದ್ಧೀಕರಣಕ್ಕೆ ತೆರಳಿದ್ದರು. ಈ ವೇಳೆ ಅನ್ಯ ಸಮುದಾಯದ ಜನ ಶಿವಲಿಂಗ ಶುದ್ಧೀಕರಣ ಮಾಡಿ ಹೊರಬರುತ್ತಿದ್ದರ ಮೇಲೆ ಏಕಾಏಕಿ ಮಾರಕಾಸ್ತ್ರಗಳು, ಬಡಿಗೆ ಹಿಡಿದು ಕಲ್ಲು ತೂರಾಟ ನಡೆಸಿದ್ದರು.
ಘಟನೆಯಲ್ಲಿ ಕೇಂದ್ರ ಸಚಿವ ಭಗವಂತ್ ಖೂಬಾ, ಸಂಸದ ಡಾ ಉಮೇಶ್ ಜಾಧವ್, ಕಲಬುರಗಿ ಡಿಸಿ, ಎಸ್ಪಿ ಸೇರಿದಂತೆ ಹಲವರ ಕಾರುಗಳು ಜಖಂಗೊಂಡಿದ್ದವು. ನಂತರ 2023 ರಲ್ಲಿ ಅತ್ಯಂತ ಬಿಗಿಭದ್ರತೆಯಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದರು.
ಹೀಗಾಗಿ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗದ ಸ್ಥಳದ ಜೀರ್ಣೋದ್ಧಾರಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳು ಶ್ರೀ ರಾಘವ ಚೈತನ್ಯ ರಥಯಾತ್ರೆ ಹಮ್ಮಿಕೊಂಡಿದ್ದು, ಈ ಒಂದು ರಥಯಾತ್ರೆಯಲ್ಲಿ ಹಲವು ಮಠಾಧೀಶರು ಮತ್ತು ಬಿಜೆಪಿ ಪಕ್ಷದ ಹಲವು ಮುಖಂಡರುಗಳು ಭಾಗಿಯಾಗಲಿದ್ದಾರೆಂದು ಬಿಜೆಪಿ ಮುಖಂಡ ಹರ್ಷ ಗುತ್ತೆದಾರ್ ಹೇಳಿದ್ದಾರೆ.
ಅದೆನೇ ಇರಲಿ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶ್ರೀ ರಾಘವ ಚೈತನ್ಯ ದೇಗುಲ ನಿರ್ಮಿಸಲು ಒಂದು ಕಡೆ ರಥಯಾತ್ರೆ ಹಮ್ಮಿಕೊಂಡರೆ, ಇತ್ತ ಶಿವರಾತ್ರಿಯಂದು ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂ ಸಂಘಟನೆಗಳು ವಕ್ಫ್ ಬೋರ್ಡ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಕಳೆದ ಬಾರಿ ಘರ್ಷಣೆ ನಡೆದಂತೆ ಈ ಬಾರಿ ಅಹಿತಕರ ಘಟನೆಗಳು ಜರುಗದಂತೆ ಕಲಬುರಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ