ಕಲಬುರಗಿ: ಟೈರ್ ಬ್ಲಾಸ್ಟ್ ಆಗಿ ಮದ್ಯ ಸರಬರಾಜು ಮಾಡುತ್ತಿದ್ದ ವಾಹನ ಪಲ್ಟಿ ಹೊಡೆದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಸನಾಪುರ ಗ್ರಾಮದ ಬಳಿ ನಡೆದಿದೆ. ಟೈರ್ ಬ್ಲಾಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಘಟನೆಯಿಂದ ಅಪಾರ ಪ್ರಮಾಣದ ಮದ್ಯದ ಬಾಟಲಿಗಳು ನಾಶವಾಗಿವೆ. ಚಾಲಕ, ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಲಬುರಗಿ ನಗರದಿಂದ ಜೇವರ್ಗಿ ಪಟ್ಟಣಕ್ಕೆ ತೆರಳುತ್ತಿದ್ದ ನಗರದ ಗೋದಮಿನಿಂದ ವೈನ್‌ಶಾಪ್‌ಗಳಿಗೆ ಸರಬರಾಜು ಆಗುತ್ತಿದ್ದ ಮದ್ಯ ರಸ್ತೆ ಪಾಲಾಗಿದೆ. ಕಲಬುರಗಿ ನಗರ ಸಂಚಾರಿ 1 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಪೂಜಾ ಸಾಮಗ್ರಿ ಗೋಡೌನ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ 11.30ಕ್ಕೆ ಕಟ್ಟಡದ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗೋಡೌನ್ನಲ್ಲಿದ್ದ ಪೂಜಾ ಸಾಮಗ್ರಿಗಳು ಅಗ್ನಿಗಾಹುತಿಯಾಗಿವೆ. 35 ಅಗ್ನಿಶಾಮಕ ಸಿಬ್ಬಂದಿ ಸತತ 3 ಗಂಟೆಗಳ ನಿರಂತರ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಗೋಡೌನ್ ಒಳಭಾಗದಲ್ಲಿದ್ದ ಕರ್ಪೂರ, ಊದಿನ ಕಡ್ಡಿ, ದೀಪದ ಎಣ್ಣೆ ಮತ್ತು ಇತರೆ ಪೂಜಾ ಸಾಮಾಗ್ರಿಗಳಿಗೆ ಬೆಂಕಿ ಹೊತ್ತಿದ್ದರಿಂದ ಬೆಂಕಿ ಹಾರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುವಂತಾಯಿತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:11 am, Mon, 9 January 23