ಹೋಗಿ ಮೋದಿ, ಅಮಿತ್ ಶಾನ ಕೇಳು: ತೊಗರಿ ಬೆಳೆ ಹಾಳಾಯ್ತು ಎಂದಿದ್ದಕ್ಕೆ ರೈತ ಯುವಕನ ಮೇಲೆ ಮಲ್ಲಿಕಾರ್ಜುನ ಖರ್ಗೆ ಗರಂ

ಕಲಬುರಗಿಯಲ್ಲಿ ರೈತರೊಬ್ಬರು ಹಾಳಾದ ತೊಗರಿ ಬೆಳೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮಾಹಿತಿ ನೀಡಿ ಸಂಕಷ್ಟ ತೋಡಿಕೊಂಡಾಗ ಅವರು ಘಟನೆ ನಡೆದಿದೆ. ‘‘ಮೋದಿ ಮತ್ತು ಅಮಿತ್ ಶಾ ಅವರ ಬಳಿ ತೊಗರಿ ಕೇಳು’’ ಎಂದು ಅವರು ಹೇಳಿರುವುದಕ್ಕೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಖರ್ಗೆ ಮಾತಿನ ವಿಡಿಯೋ ಹಾಗೂ ವಿವರ ಇಲ್ಲಿದೆ.

ಹೋಗಿ ಮೋದಿ, ಅಮಿತ್ ಶಾನ ಕೇಳು: ತೊಗರಿ ಬೆಳೆ ಹಾಳಾಯ್ತು ಎಂದಿದ್ದಕ್ಕೆ ರೈತ ಯುವಕನ ಮೇಲೆ ಮಲ್ಲಿಕಾರ್ಜುನ ಖರ್ಗೆ ಗರಂ
ಮಲ್ಲಿಕಾರ್ಜುನ ಖರ್ಗೆ

Updated on: Sep 08, 2025 | 2:53 PM

ಕಲಬುರಗಿ, ಸೆಪ್ಟೆಂಬರ್ 8: ‘ಆರು ಹಡೆದವಳಿಗೆ ಮೂರು ಹಡೆದವಳು ಹೇಳಿದಂಗಾಯ್ತು. ಹೋಗಿ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ ಅವರ ಬಳಿ ತೊಗರಿ ಕೇಳು’ ಎಂದು ರೈತ ಯುವಕನ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ರೇಗಿದ ಘಟನೆ ಭಾನುವಾರ ಕಲಬುರಗಿಯಲ್ಲಿ ನಡೆದಿದೆ. ಭಾನುವಾರ ಕಲಬುರಗಿಗೆ ಬಂದಿದ್ದ ಖರ್ಗೆ, ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ, ರೈತ ಯುವಕನೊಬ್ಬ ಹಾಳಾದ ತೊಗರಿ ಬೆಳೆಯನ್ನು ತೋರಿಸಿ, ‘ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ತೊಗರಿ ಹಾಳಾಗಿದೆ ಸರ್’ ಎಂದಿದ್ದಾನೆ.

ಆ ಸಂದರ್ಭದಲ್ಲಿ, ಎಷ್ಟು ಪ್ರದೇಶದಲ್ಲಿ ಬೆಳೆದ ತೊಗರಿ ಹಾಳಾಗಿದ ಎಂದು ಖರ್ಗೆ ಕೇಳಿದ್ದಾರೆ. ಆತ ನಾಲ್ಕು ಎಕರೆ ಎಂದಿದ್ದಾನೆ. ಅಷ್ಟರಲ್ಲಿ ರೇಗಿದ ಖರ್ಗೆ, ‘ನನಗೂ ಗೊತ್ತು. ಇದು ಆರು ಹಡೆದವಳ ಮುಂದೆ 3 ಹಡೆದವಳು ಹೇಳಿದಂಗಾಯ್ತು. ನಿನ್ನದು ನಾಲ್ಕು ಎಕರೆ ಹಾಳಾಗಿದ್ದರೆ ನನ್ನದು ನಲವತ್ತು ಎಕರೆಯ ಬೆಳೆ ಹಾಳಾಗಿದೆ. ತೊಗರಿ ಮಾತ್ರವಲ್ಲ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಬೆಳೆಗಳೂ ಸಹ ಹಾಳಾಗಿವೆ. ಬರೀ ಪ್ರಚಾರಕ್ಕಾಗಿ ಈ ರೀತಿ ಹೇಳಿಕೊಂಡು ಬರಬೇಡ. ಹೋಗಿ ಮೋದಿ, ಅಮಿತ್ ಶಾ ಬಳಿ ತೊಗರಿ ಕೇಳು’ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ರೇಗಿದ ವಿಡಿಯೋ

ಮುಂದುವರಿದು, ದೇಶದೆಲ್ಲಡೆ ಅತಿವೃಷ್ಟಿ ಹಾಗೂ ಹಾನಿ ಸಂಭವಿಸಿದೆ. ಪ್ರಧಾನಿ ಮೋದಿ ಈಗ ಸಮೀಕ್ಷೆ ಮಾಡುತ್ತಿದ್ದಾರೆ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರ ಈ ವರ್ತನೆಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಖರ್ಗೆ ನಡೆಯನ್ನು ಖಂಡಿಸಿದ್ದಾರೆ.

ರೈತರ ಬಗ್ಗೆ ಅಸಹನೆ ಹಾಗೂ ಉಡಾಫೆ: ವಿಜಯೇಂದ್ರ ಟೀಕೆ

ಬೆಳೆ ಹಾನಿಯಿಂದ ಕಂಗೆಟ್ಟು ಹೋದ ಯುವ ರೈತನೊಬ್ಬ ತಮ್ಮ ಬಳಿ ನೋವು ತೋಡಿಕೊಳ್ಳಲು ಬಂದಾಗ ‘ತೊಗರಿ ಬೇಳೆ ಹಾನಿಯಾಗಿದ್ದನ್ನು ನನ್ನಬಳಿ ತೋರಿಸಲು ಬಂದಿದ್ದೀಯಾ?’ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏರು ಧ್ವನಿಯಲ್ಲಿ ಗದರಿಸಿದ್ದಾರೆ. ‘‘ಆರು ಹಡೆದವಳ ಮುಂದೆ ಹೇಳ್ತೀಯಾ…..’’ ಎಂಬ ಗಾದೆ ಮಾತು ಹೇಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಂದ ಕೇಳಿ ಪರಿಹಾರ ತೆಗೆದುಕೊಳ್ಳಿ ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿದ್ದಾರೆ. ಯುವ ರೈತನನ್ನು ಅಪಮಾನಿಸಿರುವ ನಿನ್ನೆಯ ಘಟನೆ ಖರ್ಗೆ ಅವರಿಗೆ ಸಕಷ್ಠಿತ ರೈತರ ಬಗ್ಗೆ ಇರುವ ಅಸಹನೆ ಹಾಗೂ ಉಡಾಫೆ ಧೋರಣೆಯನ್ನು ಪ್ರತಿಬಿಂಬಿಸಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಖರ್ಗೆ ಅವರ ಈ ನಡೆ ಅವರ ಹಿರಿತನ ಹಾಗೂ ಸುದೀರ್ಘ ರಾಜಕೀಯ ಅನುಭವದ ಘನತೆ ತಗ್ಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಅಹಂಕಾರವೇ ಮುಳ್ಳು ಎಂದು ಹೇಳುವ ಖರ್ಗೆಯವರು ನಿನ್ನೆ ಕಲಬುರ್ಗಿಯಲ್ಲಿ ಯುವ ರೈತನ ಮುಂದೆ ನಡೆದುಕೊಂಡಿರುವ ರೀತಿಯನ್ನು ಏನೆಂದು ವ್ಯಾಖ್ಯಾನಿಸಬೇಕು? ಯಾವ ಮುಳ್ಳು ಎಂದು ಹೇಳಬೇಕು ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ಡಿಸ್ಕೌಂಟ್ ಆಫರ್ ಬಳಸಿಕೊಂಡ ಸಿಎಂ! ಸಿದ್ದರಾಮಯ್ಯ ಪಾವತಿಸಿದ ದಂಡ ಎಷ್ಟು ಗೊತ್ತೇ?

ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷವುವು ರೈತನನ್ನು ಸಂಕಷ್ಟ ಪರಿಸ್ಥಿತಿಯಿಂದ ಮೇಲೆತ್ತುವ ಕೆಲಸವನ್ನು ಎಂದೂ ಮಾಡಲಿಲ್ಲ. ಬಡ ರೈತನ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸಿದ್ದೇ ಹೆಚ್ಚು. ಅದು ಹೌದು ಎನ್ನುವುದಕ್ಕೆ ನಿನ್ನೆ ಅವರು ನಡೆದುಕೊಂಡಿರುವ ರೀತಿ ಸಾಕ್ಷಿ ಒದಗಿಸಿದೆ. ಮಾನ್ಯ ಖರ್ಗೆ ಅವರ ರೈತ ವಿರೋಧಿ ನಡೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:20 am, Mon, 8 September 25