ಕಲಬುರಗಿ: ಜಿಲ್ಲೆಯಲ್ಲಿ ಹಾಡ ಹಗಲೇ ಭೀಭತ್ಸ್ಯ ಘಟನೆಯೊಂದು ನಡೆದಿದೆ. ನಡು ರಸ್ತೆಯಲ್ಲೇ ಮೈಮೇಲಿನ ಶರ್ಟ್ ಬಿಚ್ಚಿ, ಸಿನಿಮಾ ರೀತಿಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹತ್ಯೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಕೇವಲ ಆರು ಸೆಕೆಂಡ್ ಗಳ ವಿಡಿಯೋ ಕಲಬುರಗಿ ಜನರನ್ನು ಬೆಚ್ಚಿಬೀಳಿಸಿದೆ.
ಕಲಬುರಗಿ ನಗರದ ಭವಾನಿ ನಗರಕ್ಕೆ ಹೊಂದಿಕೊಂಡಿರುವ ರಿಂಗ್ ರೋಡ್ ನಲ್ಲಿ ಹಾಡಹಗಲೇ ವ್ಯಕ್ತಿಯೋರ್ವ, ಜನನಿಬಿಡ ಪ್ರದೇಶದಲ್ಲಿ ಯಾರ ಅಂಜಿಕೆ ಅಳುಕಿಲ್ಲದೇ ವ್ಯಕ್ತಿಯೋರ್ವನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಕಲ್ಲು ಎತ್ತಿ ಹಾಕಿದ ರಭಸಕ್ಕೆ, ತಲೆ ಕಲ್ಲಗಂಡಿ ಹಣ್ಣು ಒಡೆದಂತೆ ಒಡೆದಿದೆ. ಜನವರಿ 4 ರಂದು ನಡೆದ ಬರ್ಬರ ಕೊಲೆಯ ವಿಡಿಯೋ ಇದೀಗ ಎಲ್ಲಡೆ ಹರಿದಾಡುತ್ತಿದ್ದು, ಬರ್ಬರ ಕೊಲೆಯನ್ನು ನೋಡಿ, ಬಿಸಿಲನಾಡಿನ ಜನರು ಶಾಕ್ ಆಗಿದ್ದಾರೆ.
ಜನವರಿ 4 ರಂದು, ಮಧ್ಯಾಹ್ನ 1 ಗಂಟೆ ಮೂವತ್ತರ ಸಮಯದಲ್ಲಿ, ಕಲಬುರಗಿ ನಗರದಲ್ಲಿ ಪ್ರಶಾಂತ್ ಕುಂಬಾರ್ ಅನ್ನೋ ವ್ಯಕ್ತಿಯ ಬರ್ಬರ ಕೊಲೆಯಾಗಿತ್ತು. ಪ್ರತಿನಿತ್ಯ ಸಾವಿರಾರು ಜನರು ಓಡಾಡೋ ರಿಂಗ್ ರೋಡ್ ಪಕ್ಕದಲ್ಲಿಯೇ ಬರ್ಬರ ಕೊಲೆ ನಡೆದಿತ್ತು. ಪ್ರಶಾಂತ್ ಕುಂಬಾರ್ ನಿಗೆ ಪರಿಚಿಯವಿದ್ದ ವ್ಯಕ್ತಿ ಮಂಜುನಾಥ್ ಸ್ವಾಮಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಪ್ರಿಯಕರನ ಜೊತೆಗೂಡಿ ಪತಿಯ ಕೊಲೆ; ಆರು ತಿಂಗಳ ನಂತರ ತಾಯಿಯ ಕ್ರೂರತೆ ಬಗ್ಗೆ ಬಾಯಿಬಿಟ್ಟ ಮಕ್ಕಳು
ಪ್ರಶಾಂತ್ ನನ್ನು ಮಂಜುನಾಥ ಸ್ವಾಮಿ ಬರ್ಬರ ಕೊಲೆ ಮಾಡಲು ಕಾರಣ, ಅನೈತಿಕ ಸಂಬಂಧ. ತನ್ನ ಪತ್ನಿ ಜೊತೆ ಪ್ರಶಾಂತ್ ಸಂಬಂಧ ಹೊಂದಿದ್ದಾನೆ ಅಂತ ಅಂದುಕೊಂಡು, ಪ್ರಶಾಂತ್ ನಿಗೆ ಚೆನ್ನಾಗಿ ಕುಡಿಸಿ, ಆತನನ್ನು ಮಂಜುನಾಥ್ ಸ್ವಾಮಿ ಬರ್ಬರ ಕೊಲೆ ಮಾಡಿದ್ದ. ಇನ್ನು ಕಲಬುರಗಿಯಲ್ಲಿ ಜನನಿಬಿಡ ಪ್ರದೇಶದಲ್ಲಿ ಈ ರೀತಿಯ ಕೊಲೆಗಳು ಆಗುತ್ತಿರುವುದು, ವಿಡಿಯೋ ವೈರಲ್ ಆಗ್ತಿರುವುದು ಇದೇ ಮೊದಲಲ್ಲಾ, ಮೇಲಿಂದ ಮೇಲೆ ಈ ರೀತಿಯ ಕೊಲೆಗಳು ನಡೆಯುತ್ತಲೇ ಇವೆ. ಈ ಹಿಂದೆ ಕೂಡಾ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆ ಜನನಿಬಿಡ ಪ್ರದೇಶದಲ್ಲಿಯೇ ಬರ್ಬರ ಕೊಲೆಗಳಾಗಿದ್ದವು, ಆ ವಿಡಿಯೋಗಳು ಕೂಡಾ ಎಲ್ಲೆಡೆ ವೈರಲ್ ಆಗಿದ್ದವು. ಇನ್ನು ಕಲಬುರಗಿ ಜಿಲ್ಲೆಯಲ್ಲಿ ಬಹುತೇಕ ಕೊಲೆಗಳು ಇದೀಗ ನಡೆಯುತ್ತಿರುವುದು ಸ್ನೇಹಿತರ ನಡುವೆ, ಪರಿಚಯಸ್ಥರಿಂದ ಪರಿಚೆಯಸ್ಥರ ಕೊಲೆಗಳೇ ಆಗಿವೆ.
ಈ ಮೊದಲು ಗ್ಯಾಂಗ್ ವಾರ್ ಗಳು ನಡೆದು, ರೌಡಿಗಳಿಂದ ರೌಡಿಗಳ ಕೊಲೆಗಳಾಗುತ್ತಿದ್ದವು. ಪೊಲೀಸರು ರೌಡಿಗಳ ಮೇಲೆ ಕಠಿಣ ಕ್ರಮ ಕೈಗೊಂಡ ಮೇಲೆ, ರೌಡಿಗಳಿಂದ ನಡೆಯುತ್ತಿರುವ ಕೊಲೆಗಳು ನಿಯಂತ್ರಣಕ್ಕೆ ಬಂದಿವೆ. ಆದ್ರೆ ಇದೀಗ ಆಸ್ತಿ, ಹಣಕಾಸಿನ ವಿಚಾರ, ಅಕ್ರಮ ಸಂಬಂಧಕ್ಕೆ ಪರಿಚಯದವರಿಂದಲೇ ಕೊಲೆಗಳು ಆಗುತ್ತಿವೆ. ಇನ್ನು ಭವಾನಿ ನಗರದಲ್ಲಿ ನಡೆದ ಕೊಲೆಗೂ ಮುನ್ನ ಮಂಜುನಾಥ್ ಸ್ವಾಮಿ ಮತ್ತು ಪ್ರಶಾಂತ್, ಅರ್ಧ ಗಂಟೆ ರಸ್ತೆಯಲ್ಲಿಯೇ ಜಗಳ ಮಾಡಿಕೊಂಡಿದ್ದರಂತೆ. ಆದ್ರೆ ಯಾರು ಕೂಡಾ ಪೊಲೀಸರಿಗೆ ಮಾಹಿತಿ ನೀಡದೇ ಇದ್ದಿದ್ದರಿಂದ, ಜಗಳ ವಿಕೋಪಕ್ಕೆ ಹೋದಾಗ, ಮಂಜುನಾಥ ಸ್ವಾಮಿ, ಪ್ರಶಾಂತ್ ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನಂತೆ.
ಇದನ್ನೂ ಓದಿ: ದೇವನಹಳ್ಳಿ: ಪ್ರೀತ್ಸೆ ಪ್ರೀತ್ಸೆ ಅಂತಿದ್ದ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ
ಕಲಬುರಗಿ ಜಿಲ್ಲೆ ಇದೀಗ ಕ್ರೈಮ್ ಜಿಲ್ಲೆಯಾಗುತ್ತಿದೆ. ಕ್ಷುಲಕ ಕಾರಣಕ್ಕೂ ಕೂಡಾ ಪರಿಚೆಯದವರೇ ನೆತ್ತರು ಹರಿಸುತ್ತಿದ್ದಾರೆ. ಇದು ಜನರ ಆತಂಕವನ್ನು ಕೂಡಾ ಹೆಚ್ಚಿಸುತ್ತಿದೆ. ಹೀಗಾಗಿ ಪೊಲೀಸರು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೊಲೆಗಳಿಗೆ ಬ್ರೇಕ್ ಹಾಕುವ ಕೆಲಸವನ್ನು ಮಾಡಬೇಕಿದೆ.
ವರದಿ: ಸಂಜಯ್, ಟಿವಿ9 ಕಲಬುರಗಿ