ಪ್ರಿಯಕರನ ಜೊತೆಗೂಡಿ ಪತಿಯ ಕೊಲೆ; ಆರು ತಿಂಗಳ ನಂತರ ತಾಯಿಯ ಕ್ರೂರತೆ ಬಗ್ಗೆ ಬಾಯಿಬಿಟ್ಟ ಮಕ್ಕಳು
ಮಲಗಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಘಟನೆ ನಡೆದ ಆರು ತಿಂಗಳ ನಂತರ ತಂದೆಯ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಮಕ್ಕಳು, ತಾಯಿಯ ಕ್ರೂರತೆಯನ್ನು ಬಾಯಿಬಿಟ್ಟಿದ್ದಾರೆ.
ಬೆಂಗಳೂರು: ಮದ್ಯ ಸೇವನೆ ಮಾಡಿ ಬಂದು ಮಲಗಿದ್ದ ವ್ಯಕ್ತಿಯ ಕೊಲೆ (Murder) ಪ್ರಕರಣದ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ತನ್ನ ತಂದೆಯ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಮಕ್ಕಳು, ಘಟನೆ ನಡೆದ ಆರು ತಿಂಗಳ ನಂತರ ತನ್ನ ತಾಯಿಯ ಕ್ರೂರತೆ ಬಗ್ಗೆ ಬಾಯಿಬಿಟ್ಟಿದ್ದಾರೆ. ಕುಡಿದು ಬಂದು ಮಲಗಿದ್ದ ತಂದೆಯನ್ನು ತಾಯಿ ಅನಿತಾ (31) ಹಾಗೂ ವ್ಯಕ್ತಿಯೊಬ್ಬರ ಜೊತೆ ಸೇರಿಸಿಕೊಂಡು ಉಸಿರುಗಟ್ಟಿಸಿ ಕೊಲೆ (Wife Kills Husband) ಮಾಡಿರುವುದಾಗಿ ಮಕ್ಕಳು ಬಾಯಿಬಿಟ್ಟಿದ್ದಾರೆ.
ನಗರದ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜಯ್ ಗಾಂಧಿನಗರದ ಸ್ಲಂನಲ್ಲಿ ಆರು ತಿಂಗಳ ಹಿಂದೆ ಆಂಜನೇಯ (35) ಎಂಬ ವ್ಯಕ್ತಿಯ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದರು. ಮಕ್ಕಳಿಗೆ ತಂದೆ ಸರಿಯಿಲ್ಲ ಯಾರಿಗೂ ಹೇಳಬೇಡಿ ಎಂದು, ಹಾರ್ಟ್ ಅಟ್ಯಾಕ್ ಆಗಿದೆ ಅಂತ ಸಂಬಂಧಿಕರಿಗೆ ಆಂಜನೇಯನ ಪತ್ನಿ ಕಟ್ಟುಕತೆ ಹೇಳಿದ್ದಳು.
ಇದನ್ನೂ ಓದಿ: ದೇವನಹಳ್ಳಿ: ಪ್ರೀತ್ಸೆ ಪ್ರೀತ್ಸೆ ಅಂತಿದ್ದ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ
ಅನಿತಾಳ ಮರಳು ಮಾತುಗಳನ್ನ ನಂಬಿದ ಕುಟುಂಬಸ್ಥರು ಆಂಜನೇಯ ಅವರ ಅಂತ್ಯಕ್ರಿಯೆ ಮಾಡಿದ್ದರು. ಆದರೆ ಇತ್ತೀಚೆಗೆ ಮಕ್ಕಳನ್ನ ಬಿಟ್ಟು ಪ್ರಿಯಕರ ರಾಕೇಶ್ ಜೊತೆ ಅನಿತಾ ಹೋಗಿದ್ದಾಳೆ. ಈ ವೇಳೆ ಮಕ್ಕಳು ತಂದೆಯ ಕೊಲೆ ಹಾಗೂ ತಾಯಿಯ ಕ್ರೂರತೆ ಬಗ್ಗೆ ಅಜ್ಜಿಯ ಬಳಿ ಹೇಳಿಕೊಂಡಿದ್ದಾರೆ. ಕೂಡಲೇ ಮೃತನ ತಾಯಿ (ಮಕ್ಕಳ ಅಜ್ಜಿ) ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಗಳಾದ ಅನಿತಾ ಮತ್ತು ಈಕೆಯ ಪ್ರಿಯಕರ ರಾಕೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ