ಸರ್ಕಾರಕ್ಕೆ ಮಾಹಿತಿ ನೀಡಿ ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆ; ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಆಡಿಯೋ ಸಂಭಾಷಣೆ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ, ಆಡಿಯೋದಲ್ಲಿರುವ ವ್ಯಕ್ತಿ ಈಗಾಗಲೇ ಪಿಎಸ್ಐ ಸಮವಸ್ತ್ರ ಧರಿಸಿ ಭಾಷಣ ಮಾಡಿದ್ದಾನೆ. ಕರೆ ಮಾಡಿದ್ದ ವ್ಯಕ್ತಿಗೆ ಪಿಎಸ್ಐ ಸಾಹೇಬ್ರೆ ಎಂದು ಹೇಳುತ್ತಾನೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ (PSI Recruitment) ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಸುದ್ದಿಗೋಷ್ಠಿ ನಡಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಐಡಿ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದಾರೆ. ಸಣ್ಣ ಮೀನುಗಳನ್ನು ಬಂಧಿಸಿದ್ದಾರೆ, ಆದರೆ ತಿಮಿಂಗಿಲಗಳು ಓಡಾಡುತ್ತಿವೆ. ಅಕ್ರಮದ ಹಣ ಮೇಲ್ಮಟ್ಟದವರೆಗೆ ಹೋಗುತ್ತಿದೆ ಎಂಬ ಮಾಹಿತಿ ಇದೆ. ಪೊಲೀಸರು ಕಲಬುರಗಿಯಲ್ಲಿ ಸಣ್ಣಪುಟ್ಟವರನ್ನು ಹಿಡಿದರೆ ಸಾಲದು. PSI ನೇಮಕಾತಿ ಅಕ್ರಮದಲ್ಲಿ ದೊಡ್ಡ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಹೇಳಿದರು.
ಆಡಿಯೋ ಸಂಭಾಷಣೆ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ, ಆಡಿಯೋದಲ್ಲಿರುವ ವ್ಯಕ್ತಿ ಈಗಾಗಲೇ ಪಿಎಸ್ಐ ಸಮವಸ್ತ್ರ ಧರಿಸಿ ಭಾಷಣ ಮಾಡಿದ್ದಾನೆ. ಕರೆ ಮಾಡಿದ್ದ ವ್ಯಕ್ತಿಗೆ ಪಿಎಸ್ಐ ಸಾಹೇಬ್ರೆ ಎಂದು ಹೇಳುತ್ತಾನೆ. ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದರೂ ಇದೇ ಫೈನಲ್ ಎಂದು ಹೇಳ್ತಾನೆ. ಆರ್ಟಿಕಲ್ 371ಜೆ ಬಗ್ಗೆಯೂ ಉಡಾಫೆಯಾಗಿ ಮಾತಾಡಿದ್ದಾರೆ. ಯಾರಾದ್ರೂ ಕೋರ್ಟ್ಗೆ ಹೋದರೆ ಏನು ಅಂತ ಅಭ್ಯರ್ಥಿ ಪ್ರಶ್ನಿಸಿದ್ದಾನೆ. 402 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದೂ ಅದ್ದಕ್ಕೂ ಫಿಕ್ಸ್ ಆಗಿದೆ ಎಂದು ತಿಳಿಸಿದರು.
ಮತ್ತೊಬ್ಬ ಸರ್ಕಾರಕ್ಕೆ ಮಾಹಿತಿ ನೀಡಿಯೇ ಅಕ್ರಮವೆಸಗಿದ್ದಾನೆ. ಮೇಲಿಂದ ಕೆಳಗಿನವರೆಗೆ ಭ್ರಷ್ಟಾಚಾರ ನಡೆಯುತ್ತಿರುವುದು ತಿಳಿಯುತ್ತೆ ಅಂತ ಪ್ರಿಯಾಂಕ್ ಖರ್ಗೆ ಆಡಿಯೋ ಸಂಭಾಷಣೆ ಬಿಡುಗಡೆ ಮಾಡಿದ್ದಾರೆ.
ಮುಂದುವರಿದು ಮಾತನಾಡಿದ ಪ್ರಿಯಾಂಕ್ ಖರ್ಗೆ, ನಮ್ಮ ಸಂಬಂಧಿಯೊಬ್ಬ ಪಿಎಸ್ಐ ಹುದ್ದೆಗೆ ಅರ್ಜಿ ಹಾಕಿದ್ದಾನೆ. ಮನೆ ಕಡೆ ಅನುಕೂಲವಾಗಿದ್ದಾರೆ, ಅಪ್ಲಿಕೇಷನ್ ನಂಬರ್ ಕಳಿಸುವೆ. 545, 402 ಪಿಎಸ್ಐ ಹುದ್ದೆಗಳಿಗೆ ಮ್ಯಾಚ್ ಫಿಕ್ಸ್ ಮಾಡಿದ್ದಾರೆ. ಈ ಮಾಹಿತಿ ಸಾರ್ವಜನಿಕ ವಲಯದಲ್ಲಿದೆ, ಅಭ್ಯರ್ಥಿಗಳ ಬಳಿಯಿದೆ. ಸರ್ಕಾರ, ತನಿಖೆ ನಡೆಸುತ್ತಿರುವವರ ಬಳಿ ಮಾಹಿತಿ ಸಿಕ್ಕಿಲ್ಲವೇ? ಎಂದು ಪ್ರಶ್ನಿಸಿದರು.
ಬಂಧನವಾಗಿರುವ ಎಲ್ಲರೂ ಬಿಜೆಪಿ ಕಾರ್ಯಕರ್ತರು: ಆಯ್ಕೆಯಾದ ಅಭ್ಯರ್ಥಿಗಳು ಬಿಜೆಪಿ ಶಾಸಕರಿಗೆ ಅಭಿನಂದಿಸಿದ್ದಾರೆ. ಅವರ ಜೊತೆ ಇರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನ ಹಾಕಿಕೊಂಡಿದ್ದಾರೆ. ಇದುವರೆಗೆ ಬಂಧನವಾಗಿರುವ ಎಲ್ಲರೂ ಬಿಜೆಪಿ ಕಾರ್ಯಕರ್ತರು. 545 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆಲಸ ನೀಡಿದ್ದಾರೆ. 402 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕುವಂತೆ ಸೂಚಿಸಿದ್ದಾರೆ. ನಿಮಗೆ ಕೆಲಸ ಮಾಡಿಕೊಟ್ಟಿದ್ದೇವೆ ಬೇರೆಯವರನ್ನು ಹುಡುಕಿಕೊಡಿ. ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಪ್ರತಿಯೊಂದು ಸ್ಪಷ್ಟವಾಗಿದೆ ಅಂತ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕಲಬುರಗಿ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರ ಬ್ಲಾಕ್ಲಿಸ್ಟ್ನಲ್ಲಿತ್ತು. ಆದರೆ ಮತ್ತೆ ಹೇಗೆ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಶಾಲೆ ಮುಖ್ಯಸ್ಥೆ ದಿವ್ಯಾ ಹಾಗರಗಿ ಜಾಮೀನು ಅರ್ಜಿ ತಿರಸ್ಕೃವಾಗಿದೆ. ವಕೀಲರ ಸಂಪರ್ಕದಲ್ಲಿರುವ ದಿವ್ಯಾ ಹಾಗರಗಿ ಬಗ್ಗೆ ಮಾಹಿತಿಯಿಲ್ಲ. ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಯಾಕೆ ಮಾಹಿತಿ ಸಿಗುತ್ತಿಲ್ಲ. ಸರ್ಕಾರ ಬೇಕಂತಲೇ ದಿವ್ಯಾ ಹಾಗರಗಿ ರಕ್ಷಿಸುವಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.
ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವುದು ಸೂಕ್ತ: ರಾಜ್ಯ ಸರ್ಕಾರ ಯಾವುದೇ ಅಕ್ರಮ ನಡೆದಿಲ್ಲವೆಂದು ಹೇಳುತ್ತಿದೆ. ಸಿಎಂ ಬೊಮ್ಮಾಯಿ, ಗೃಹಸಚಿವರು ಅಕ್ರಮ ನಡೆದಿಲ್ಲ ಅಂತಾರೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಎಡಿಜಿಪಿ ವರ್ಗಾಯಿಸಿಲ್ಲ. ಅದೇ ಹುದ್ದೆಯಲ್ಲಿ ಮುಂದುವರಿದರೆ ನ್ಯಾಯಸಮ್ಮತ ತನಿಖೆ ಸಾಧ್ಯ. ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವುದು ಸೂಕ್ತ ಎಂದು ಶಾಸಕರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜ್ಞಾನಜೋತಿ ಪರೀಕ್ಷಾ ಕೇಂದ್ರಕ್ಕೆ ಅನೇಕ ಪರೀಕ್ಷೆಗೆ ಯೋಗ್ಯವಲ್ಲಾ ಅಂತ ಡಿಡಿಪಿಐ ಹೇಳಿದ್ದರು. ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಿರಲಿಲ್ಲ. ಯಾಕೆ ಅಧಿಕಾರಿಗಳು ಆ ಪರೀಕ್ಷಾ ಕೇಂದ್ರ ಮಂಜೂರಾಗುವಂತೆ ನೋಡಿಕೊಂಡರು. ಯಾವ ಸಂಸದರು ಶಿಫಾರಸ್ಸು ಪತ್ರ ನೀಡಿದ್ದಾರೆ? 545 ಹುದ್ದೆಗಳಲ್ಲಿ ನೇಮಕವಾಗಿರೋರು ಮತ್ತೊಂದು ಡ್ಯೂಟಿ ಮಾಡ್ತಿದ್ದಾರೆ. 402 ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ಹುಡುಕಾಟ ಮಾಡೋದು, ಅವರನ್ನು ಕಿಂಗ್ಪಿನ್ಗಳಿಗೆ ಹುಡುಕಿ ತರುವ ಕೆಲಸ ಮಾಡಿದ್ದಾರೆ ಎಂದರು.
ಟಿವಿ9 ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೇವಲ ಕಲಬುರಗಿಯಲ್ಲಿ ಮಾತ್ರ ತನಿಖೆ ಆಗುತ್ತಿದೆ. ರಾಜ್ಯದ ಎಲ್ಲ ಕಡೆಗೂ ತನಿಖೆ ಆಗಲಿ. ಬೆಂಗಳೂರಿನಲ್ಲೂ ತನಿಖೆ ನಡೆಯಬೇಕು. ಎಡಿಜಿಪಿ ರಿಕ್ಯೂಟ್ ಮೆಂಟ್ ಹುದ್ದೆಯಲ್ಲಿಯೇ ಇದ್ದಾರೆ. ತನಿಖೆ ಆಗುವ ಸಂದರ್ಭದಲ್ಲಿ ಅವರು ಎಡಿಜಿಪಿ ಹುದ್ದೆಯಲ್ಲಿದ್ದರೆ, ಎಷ್ಟರ ಮಟ್ಟಿಗೆ ತನಿಖೆಗೆ ನ್ಯಾಯ ಸಿಗುತ್ತದೆ ಅಂತ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ
Gold Price Today: ಚಿನ್ನ ದರ ಸ್ಥಿರ, ಒಂದು ಕೆಜಿ ಬೆಳ್ಳಿಗೆ ಮತ್ತೆ 900 ರೂಪಾಯಿ ಕುಸಿತ
Crime News: ಪ್ರೇಮಿಗಳ ಆತ್ಮಹತ್ಯೆ, ಮರಳು ಅಡ್ಡೆ ಮೇಲೆ ದಾಳಿ, ಪಿಯು ವಿದ್ಯಾರ್ಥಿ ನಿಗೂಢ ಸಾವು
Published On - 9:46 am, Sat, 23 April 22