ಕಲಬುರಗಿ: ಜಿಲ್ಲೆಯ ಜನರಿಗೆ ಇದೀಗ ಕೊರೊನಾ(Coronavirus) ಕಾಟದ ಭಯವಿಲ್ಲ. ಆದರೆ ಚಿಕನ್ ಫಾಕ್ಸ್ ಕಾಟದ ಭಯ ಕಾಡಲು ಪ್ರಾರಂಭವಾಗಿದೆ. ಅದಕ್ಕೆ ಕಾರಣ, ಚಿಕನ್ ಫಾಕ್ಸ್(Chickenpox) ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದೇ ಆಗಿದೆದ. ಹೌದು ಮೊದಲು ಒಂದೇ ಕುಟುಂಬಕ್ಕೆ ಸೀಮಿತವಾಗಿದ್ದು ಚಿಕನ್ ಫಾಕ್ಸ್ ಇದೀಗ ಸುತ್ತಮುತ್ತಲಿನ ಹಳ್ಳಿಗಳಿಗೆ ಕೂಡಾ ಪಸರಿಸುತ್ತಿದೆ. ಮತ್ತೊಂದಡೆ ಈ ಹಿಂದೆ ಮೃತ ಪಟ್ಟಿದ್ದ ಬಾಲಕರ ಸಾವಿಗೆ ಕೂಡ ಚಿಕನ್ ಫಾಕ್ಸ್ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆ ಮೂಲಕ ಕಳೆದ ಮೂರು ವರ್ಷಗಳಿಂದ ಕೇವಲ ಕೊರೊನಾದ ಬೆನ್ನು ಬಿದ್ದಿದ್ದ ಕಲಬುರಗಿ ಜಿಲ್ಲೆಯ ಆರೋಗ್ಯ ಇಲಾಖೆಯ(Health department) ಅಧಿಕಾರಿಗಳಿಗೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗದ ಚಿಂತೆ ಹೆಚ್ಚಿಸುತ್ತಿದೆ.
ಕೊರೊನಾ ಪಾಜಿಟಿವ್, ನೆಗಟಿವ್, ಟೆಸ್ಟ್, ಟ್ರೇಸಿಂಗ್, ಚಿಕಿತ್ಸೆ ಅಂತ ತಲೆ ಕೆಡಿಸಿಕೊಂಡಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದೀಗ ಕೊರೊನಾ ಕಡಿಮೆಯಾಗಿದ್ದರಿಂದ ನಿಟ್ಟುಸಿರು ಬಿಟ್ಟಿದ್ದರು. ಆದರೆ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಚಿಕನ್ ಫಾಕ್ಸ್, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತಲೆ ಬಿಸಿ ಹೆಚ್ಚಿಸಿದೆ.
ಈ ಮೊದಲು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಸ್ಟೇಷನ್ ತಾಂಡಾದಲ್ಲಿ ಒಂದೇ ಕುಟುಂಬದ ಐವರಲ್ಲಿ ಕಾಣಿಸಿಕೊಂಡಿದ್ದ ಚಿಕನ್ ಫಾಕ್ಸ್ ಇದೀಗ ಸ್ಟೇಷನ್ ನಾಲವಾರ, ಕೊಲ್ಲುರು, ಲಾಡ್ಲಾಪುರ ಗ್ರಾಮಗಳಿಗೆ ಕೂಡಾ ಹಬ್ಬಿದೆ. ಸದ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಅಧಿಕೃತವಾಗಿ ಹತ್ತು ಜನರಿಗೆ ಚಿಕನ್ ಫಾಕ್ಸ್ ಇರುವುದು ದೃಢವಾಗಿದೆ. ಆದರೆ ಲಾಡ್ಲಾಪುರ ಗ್ರಾಮದಲ್ಲಿಯೇ ಇಪ್ಪತ್ತಕ್ಕೂ ಹೆಚ್ಚು ಮಕ್ಕಳಲ್ಲಿ ಚಿಕನ್ ಫಾಕ್ಸ್ ಲಕ್ಷಣಗಳು ಕಾಣಿಸಿವೆ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಲಾಡ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ.
ಯಾವೆಲ್ಲಾ ಮಕ್ಕಳಲ್ಲಿ ಚಿಕನ್ ಫಾಕ್ಸ್ ಲಕ್ಷಣಗಳು ಕಾಣಿಸಿಕೊಂಡಿವೆ ಎನ್ನುವುದರ ಮಾಹಿತಿ ಸಂಗ್ರಹಿಸುವ ಕೆಲಸ ಪ್ರಾರಂಭಿಸಿದ್ದಾರೆ. ಲಾಡ್ಲಾಪುರ ಗ್ರಾಮದಲ್ಲಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗೆ ಹೋಗುತ್ತಿದ್ದ ಮಕ್ಕಳಲ್ಲಿ ಚಿಕನ್ ಫಾಕ್ಸ್ ಲಕ್ಷಣಗಳು ಕಾಣಿಸಿವೆ. ಮಕ್ಕಳಿಗೆ ಜ್ವರ ಮತ್ತು ಮೈಮೇಲೆ ಮೇಲೆ ಗುಳ್ಳೆಗಳು ಆಗಿವೆ. ಇದು ಗ್ರಾಮದ ಜನರ ಆತಂಕವನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಹೇಳಿದ್ದಾರೆ.
ಮೊದಲು ಜಿಲ್ಲೆಯಲ್ಲಿ ಚಿಕನ್ ಫಾಕ್ಸ್ ಹೆಚ್ಚಾಗಿ ಕಾಣಿಸಿಕೊಂಡಿದ್ದು, ನಾಲವಾರ ಗ್ರಾಮದಲ್ಲಿ. ಅದರಲ್ಲೂ ನಾಲವಾರ ಗ್ರಾಮದಲ್ಲಿ ಚಿಕನ್ ಫಾಕ್ಸ್ನಿಂದ ಬಳಲುತ್ತಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದರು. ಹೌದು ಸ್ಟೇಷನ್ ನಾಲವಾರ್ ಗ್ರಾಮದ ನಿವಾಸಿಯಾಗಿರುವ 33 ವರ್ಷದ ಹಪೀಜಾ ಬೇಗಂ ಮತ್ತು ಅವರ ನಾಲ್ವರು ಮಕ್ಕಳಿಗೆ ಚಿಕನ್ ಫಾಕ್ಸ್ ಸೋಂಕು ವಕ್ಕರಿಸಿತ್ತು. ಹಪೀಜಾ ಬೇಗಂನ ಎಂಟು ವರ್ಷದ ಮಗ ಇಮ್ರಾನ್ ಕಳೆದ ಜನವರಿ 17 ರಂದು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇನ್ನೋಬ್ಬ ಮಗ, ಹದಿನೈದು ವರ್ಷದ ರೆಹಮಾನ್, ಮಹರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಜನವರಿ ಮೂವತ್ತರಂದು ಮೃತಪಟ್ಟಿದ್ದಾನೆ.
ಮೃತ ಬಾಲಕರಿಬ್ಬರಿಗೂ ಕೂಡಾ ಚಿಕನ್ ಫಾಕ್ಸ್ ಆಗಿತ್ತು. ಮೈ ತುಂಬಾ ಗುಳ್ಳೆಗಳು ಎದ್ದಿದ್ದವು. ಜ್ವರ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಇನ್ನು ಮೃತ ಬಾಲಕರಿಬ್ಬರ ತಾಯಿ ಮತ್ತು ಇನ್ನೋರ್ವ ಬಾಲಕಿ ಹಾಗೂ ಬಾಲಕನಿಗೂ ಕೂಡಾ ಚಿಕನ್ ಫಾಕ್ಸ್ ಆಗಿದ್ದು, ಮೂವರು ಕೂಡಾ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಕರು ಮೃತಪಟ್ಟ ನಂತರ ಆರೋಗ್ಯ ಇಲಾಖೆಗೆ ಮಾಹಿತಿ ಬಂದಿದ್ದರಿಂದ, ಸದ್ಯ ಚಿಕನ್ ಫಾಕ್ಸ್ಗೆ ಚಿಕಿತ್ಸೆ ಪಡೆಯುತ್ತಿರುವ ಹಪೀಜಾ ಬೇಗಂ ಮತ್ತು ಅವರ ಮಕ್ಕಳ ರಕ್ತದ ಸ್ಯಾಂಪಲ್ಸ್ಗಳನ್ನು ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ವೈರಾಲಜಿಗೆ ಕಳುಹಿಸಿತ್ತು. ಚಿಕನ್ ಫಾಕ್ಸ್ ಪತ್ತೆಗೆ ನಿಖರವಾದ ಲ್ಯಾಬ್ ತಪಾಸಣೆಗಳು ಇಲ್ಲದೇ ಇರುವುದರಿಂದ, ದಡಾರ ಇದೆಯಾ ಎನ್ನುವುದನ್ನು ಪತ್ತೆ ಮಾಡಲು ಸ್ಯಾಂಪಲ್ಸ್ ಕಳುಹಿಸಲಾಗಿತ್ತು. ಆದರೆ ಮೂವರಿಗೂ ಕೂಡಾ ದಡಾರ ಮತ್ತು ರುಬೆಲ್ಲಾ ಇಲ್ಲಾ ಎನ್ನುವುದು ಗೊತ್ತಾಗಿದೆ. ಹೀಗಾಗಿ ಇಬ್ಬರು ಮಕ್ಕಳ ಸಾವಿಗೆ ಚಿಕನ್ ಫಾಕ್ಸ್ ಕಾರಣವಾಗಿರಬಹುದು. ಆದರೆ ಚಿಕನ್ ಫಾಕ್ಸ್ನಿಂದಲೇ ಸತ್ತಿದ್ದಾರೆ ಎಂದು ಕೂಡಾ ಹೇಳಲು ಆಗುವುದಿಲ್ಲ ಎಂದು ಆರ್ಸಿಎಚ್ಓ ಅಧಿಕಾರಿ ಡಾ. ಅನೀಲ್ ಹೇಳಿದ್ದಾರೆ.
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಚಿಕನ್ ಫಾಕ್ಸ್ ಹೆಚ್ಚಾಗುತ್ತಿರುವುದರಿಂದ, ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಎಲ್ಲಾ ಗ್ರಾಮಗಳಲ್ಲಿ ಮಕ್ಕಳನ್ನು ತಪಾಸಣೆ ಮಾಡಲು ಮುಂದಾಗಿದೆ. ಜೊತೆಗೆ ಚಿಕನ್ ಫಾಕ್ಸ್ ಬಗ್ಗೆ ಭಯಪಡದೆ, ಏನೆಲ್ಲಾ ಕ್ರಮ ಕೈಗೊಂಡರೆ, ಸುಲಭವಾಗಿ ಚಿಕನ್ ಫಾಕ್ಸ್ನಿಂದ ಗುಣಮುಖರಾಗಬಹುದು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ವರದಿ: ಸಂಜಯ್ ಚಿಕ್ಕಮಠ
ಇದನ್ನೂ ಓದಿ:
Air Pollution ವಾಯುಮಾಲಿನ್ಯದಿಂದ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ
ಸಕ್ಕರೆ ಕಾಯಿಲೆ ಲಕ್ಷಣಗಳೇನು? ಆರೋಗ್ಯ ಕಾಪಾಡುವುದು ಹೇಗೆ? ಡಯಾಬಿಟೀಸ್ ಇರುವವರಿಗೆ ವೈದ್ಯರ ಸಲಹೆಗಳು