
ಕಲಬುರಗಿ, ಜೂನ್ 29: ಉತ್ತರ ಕರ್ನಾಟಕದ ಜೋಳದ ರೊಟ್ಟಿ (Jolad Rotti) ಊಟ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಕಲಬುರಗಿಯ ಖಡಕ್ ರೊಟ್ಟಿ (Kalaburagi Kadhak Rotti) ಸಾಕಷ್ಟು ಬೇಡಿಕೆ ಇದೆ. ಕಳೆದ ವರ್ಷ ಕಲಬುರಗಿ ಜಿಲ್ಲಾಡಳಿತ ರೊಟ್ಟಿಯನ್ನು ಜಿಲ್ಲೆಯ ಬ್ರ್ಯಾಂಡ್ ಎಂದು ಗುರಿತಿಸಿ, ಆನ್‌ಲೈನ್ ಮಾರುಕಟ್ಟೆ ಒದಗಿಸಿದೆ. ಆನ್‌ಲೈನ್ ಮೂಲಕವೂ ಖಡಕ್ ರೊಟ್ಟಿ ಸಿಗುವ ಹಾಗೆ ಮಾಡಿದೆ. ಸದ್ಯ, ಕಲಬುರಗಿಯ ಖಡಕ್ ರೊಟ್ಟಿ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ತಮ್ಮ ಮನ್ ಕಿ ಬಾತ್ನಲ್ಲಿ (Mann Ki Baat) ಮಾತನಾಡಿದ್ದು, ರೊಟ್ಟಿ ಮಾಡುವ ಮಹಿಳೆಯರನ್ನು ಶ್ಲಾಘಿಸಿದ್ದಾರೆ.
ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಶೆಂಗಾ ಚಟ್ನಿ, ಪುಂಡಿಪಲ್ಯ ಊಟ ಅಮೃತಕ್ಕೆ ಸಮಾನ ಎಂದು ರುಚಿ ಸವಿದವರು ಹೇಳುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ರೊಟ್ಟಿ ಊಟಕ್ಕೆ ವಿಶೇಷ ಬೇಡಿಕೆಯಿದೆ. ಅದರಲ್ಲೂ ಕಲಬುರಗಿ ಖಡಕ್ ರೊಟ್ಟಿಗೆ ವಿದೇಶದಲ್ಲೂ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ, ಕಲಬುರಗಿ ಜಿಲ್ಲಾಡಳಿತ ರೊಟ್ಟಿಯನ್ನು ಬ್ರ್ಯಾಂಡ್ ಮಾಡಿದೆ. ಈ ಕಲಬುರಗಿ ಖಡಕ್ ರೊಟ್ಟಿ ವಿಶ್ವದ ಎಲ್ಲ ಜನರ ಕೈಗೆ ಸುಲಭವಾಗಿ ಸಿಗುವಂತೆ ಮಾಡಲು ಕಲಬುರಗಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಆನ್‌ಲೈನ್ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಹೀಗಾಗಿ, 2024ರ ನವೆಂಬರ್ 16 ರಿಂದ ಕಲಬುರಗಿ ಖಡಕ್ ರೊಟ್ಟಿ ಆನ್ಲೈನ್ಲ್ಲೂ ಸಿಗಲು ಆರಂಭಿಸಿದೆ.
ವಿವಿಧ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸರ್ಕಾರದಿಂದಲೇ ಸಬ್ಸಿಡಿ ಆಧಾರದಲ್ಲಿ ರೊಟ್ಟಿ ಮಾಡುವ ಯಂತ್ರಗಳನ್ನು ಜಿಲ್ಲಾಡಳಿತ ನೀಡಿದೆ. ಅವರು ತಯಾರಿಸುವ ರೊಟ್ಟಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಕಲಬುರಗಿ ರೊಟ್ಟಿ ಉತ್ಪಾದಕರ ಸಂಘದ ಹೆಸರಿನಲ್ಲಿ ರೊಟ್ಟಿಯನ್ನು ಮಾರುಕಟ್ಟೆಗೆ ಕಳಿಹಿಸಲಾಗುತ್ತಿದೆ.
ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಜಿಲ್ಲೆಯ ನೂರಕ್ಕೂ ಹೆಚ್ಚು ರೊಟ್ಟಿ ಉತ್ಪಾದಕ ಕೇಂದ್ರಗಳಿಂದ ರೊಟ್ಟಿ ತರಸಿಕೊಂಡು ಮಾರುಕಟ್ಟೆಗೆ ಕಳುಹಿಸುತ್ತಿವೆ. ಈ ಮೂಲಕ ಕಲಬುಗರಿ ಜಿಲ್ಲೆಯ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಹಾಯ ಮಾಡುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ನಲ್ಲಿ ಕಲಬುರಗಿ ಖಡಕ್ ರೊಟ್ಟಿ ಕುರಿತು ಮಾತನಾಡಿದ್ದಾರೆ.
“ಕಲಬುರಗಿಯ ಮಹಿಳೆಯರು ಖಡಕ್ ರೊಟ್ಟಿಯನ್ನು ಬ್ರ್ಯಾಂಡ್ ಮಾಡಿದ್ದಾರೆ. ಕಲಬುರಗಿಯ ಮಹಿಳೆಯರು ಪ್ರತಿದಿನ 3 ಸಾವಿರ ರೊಟ್ಟಿಗಳನ್ನು ಮಾಡುತ್ತಾರೆ. ಈ ರೊಟ್ಟಿಗಳನ್ನು ಮಾರಾಟ ಮಾಡುವ ಕೇಂದ್ರಗಳು ಕೇವಲ ಹಳ್ಳಿಗಳಿಗೆ ಸೀಮತವಾಗಿಲ್ಲ, ಬದಲಿಗೆ ಬೆಂಗಳೂರಿನಲ್ಲೂ ರೊಟ್ಟಿ ಮಾರಾಟ ಕೇಂದ್ರ ತೆರೆಯಲಾಗಿದೆ. ಆನ್‌ಲೈನ್ ಮೂಲಕವೂ ರೊಟ್ಟಿಗಳನ್ನು ಆರ್ಡರ್ ಮಾಡಲಾಗುತ್ತಿದೆ. ಕಲಬುರಗಿಯ ಖಡಕ್ ರೊಟ್ಟಿ ದೊಡ್ಡ ದೊಡ್ಡ ನಗರಗಳ ಅಡುಗೆ ಮನೆಗಳವರೆಗೂ ತಲುಪಿದೆ. ರೊಟ್ಟಿ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಕಲಬುರಗಿ ಮಹಿಳೆಯರ ಪರಿಶ್ರಮ ಅಧಿಕವಾಗಿದೆ. ಈ ಎಲ್ಲ ಪ್ರತಿಫಲ ಕಲಬುರಗಿ ಮಹಿಳೆಯರಿಗೆ ಸಲ್ಲಬೇಕು” ಎಂದು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಹಾಡಿ ಹೊಗಳಿದರು.
ಒಂದು ರೊಟ್ಟಿಗೆ 6 ರೂಪಾಯಿ ದರ ನಿಗದಿ ಮಾಡಲಾಗಿದೆ. ಅಲ್ಲದೆ, 10 ರೊಟ್ಟಿ ಇರುವ ಒಂದು ಬಾಕ್ಸ್ ಮಾಡಲಾಗಿದ್ದು, ಬಾಕ್ಸ್ ಮೇಲೆ ಕಲಬುರಗಿ ಖಡಕ್ ರೊಟ್ಟಿ ಎಂದು ನಮೂದಿಸಲಾಗಿದೆ. ಮತ್ತು ರೊಟ್ಟಿ ಬಾಕ್ಸ್ ಮೇಲೆ ಕ್ಯೂಆರ್ ಕೋಡ್ ಹಾಕಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಕಲಬುರಗಿ ಖಡಕ್ ರೊಟ್ಟಿಯನ್ನು ಆರ್ಡರ್ ಮಾಡಬಹುದು.
ಇದನ್ನೂ ನೋಡಿ: ಪ್ರಧಾನಿ ಮೋದಿ ಮನ್ ಕೀ ಬಾತ್ನಲ್ಲಿ ಸದ್ದು ಮಾಡಿದ ಕಲಬುರಗಿಯ ಖಡಕ್ ರೊಟ್ಟಿ
ಕಲಬುರಗಿ ರೊಟ್ಟಿಯ ಬಗ್ಗೆ ನ್ಯೂಜಿಲೆಂಡ್ ರಾಯಭಾರಿ ಕಚೇರಿ ಸಹ ಮಾಹಿತಿ ಪಡೆದುಕೊಂಡಿದೆ. ಜೋಳದ ರೊಟ್ಟಿ ಮಾತ್ರವಲ್ಲದೆ ಸಜ್ಜೆ ರೊಟ್ಟಿ, ದಪಾಟಿ, ಶೇಂಗಾ ಹೊಳಿಗೆ ಖರೀದಿ ಮಾಡಲು ಹೋಟೆಲ್ ಮಾಲೀಕರ ಸಂಘ ಮುಂದಾಗಿದೆ ಎಂದು ತಿಳಿದುಬಂದಿದೆ. ಕಲಬುರಗಿ ಖಡಕ್ ರೊಟ್ಟಿ ಇದೀಗ ವಿಶ್ವಮಟ್ಟದಲ್ಲಿ ಪರಿಚಯಿಸುವ ಕೆಲಸಕ್ಕೆ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ.
Published On - 6:52 pm, Sun, 29 June 25