AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಸುಪ್ರಿಯಾ ಬಂಧನ

ಪಿಎಸ್​ಐ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 52 ಮಂದಿಯನ್ನು ಸಿಐಡಿ ಬಂಧಿಸಿದೆ. ಕರ್ನಾಟಕ ಸರ್ಕಾರವು ಅಕ್ಟೋಬರ್ 2021ರಲ್ಲಿ ಪಿಎಸ್​ಐ ನೇಮಕಾತಿಗಾಗಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು.

PSI Recruitment Scam: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಸುಪ್ರಿಯಾ ಬಂಧನ
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on:Nov 03, 2022 | 9:07 AM

Share

ಕಲಬುರ್ಗಿ: ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ಸುಪ್ರಿಯಾ ಹುಂಡೇಕರ್ (Supriya Hundekar) ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡವು, ಇನ್ನೊಬ್ಬ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದು, ಹುಡುಕಾಟ ನಡೆಸುತ್ತಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಹಿಪ್ಪರಗಾ ಗ್ರಾಮದ ನಿವಾಸಿ ಸುಪ್ರಿಯಾ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿರುವ ಆರೋಪ ಎದುರಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಅವರು ಮೊದಲ ರ‍್ಯಾಂಕ್ ಪಡೆದಿದ್ದರು. ಸುಪ್ರಿಯಾ ವಿಚಾರಣೆ ಬಳಿಕ ಅಕ್ರಮವಾಗಿ ಪರೀಕ್ಷೆ ಬರೆದಿರುವ ಮತ್ತಷ್ಟು ಜನರ ಮಾಹಿತಿ ಲಭ್ಯವಾಗಬಹುದು ಎಂದು ಸಿಐಡಿ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.

ಕಲಬುರ್ಗಿಯ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸುಪ್ರಿಯಾ ಪರೀಕ್ಷೆ ಬರೆದಿದ್ದರು. ಮೊದಲ ರ‍್ಯಾಂಕ್ ಪಡೆದಿದ್ದ ಸುಪ್ರಿಯಾ 1ನೇ ಪತ್ರಿಕೆಯಲ್ಲಿ 50ಕ್ಕೆ 24, 2ನೇ ಪತ್ರಿಕೆಯಲ್ಲಿ 150ಕ್ಕೆ 131.25 ಅಂಕ ಪಡೆದಿದ್ದರು. ಎರಡೂ ಪತ್ರಿಕೆಗಳಿಂದ 155.25 ಅಂಕ ಪಡೆದಿದ್ದ ಸುಪ್ರಿಯಾ ಹುದ್ದೆಗೆ ಆಯ್ಕೆಯಾಗಿದ್ದರು.

ಪಿಎಸ್​ಐ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 52 ಮಂದಿಯನ್ನು ಸಿಐಡಿ ಬಂಧಿಸಿದೆ. ಕರ್ನಾಟಕ ಸರ್ಕಾರವು ಅಕ್ಟೋಬರ್ 2021ರಲ್ಲಿ ಪಿಎಸ್​ಐ ನೇಮಕಾತಿಗಾಗಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು. ಸುಮಾರು 54,041 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅಭ್ಯರ್ಥಿಗಳಿಂದ ಲಂಚ ಪಡೆದಿರುವ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರದ ಸಿಬ್ಬಂದಿ ಅಕ್ರಮ ಎಸಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಒತ್ತಡ ಹೆಚ್ಚಾಗಿ, ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಆದೇಶಿಸಿತ್ತು.

ಆರಂಭದಲ್ಲಿ ಕಲಬುರ್ಗಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸ್ ಅಧಿಕಾರಿಗಳ ಬಂಧನವಾಯಿತು. ನೇಮಕಾತಿ ವಿಭಾಗದ ಎಡಿಜಿಪಿ, ಐಪಿಎಸ್ ಅಧಿಕಾರಿ ಅಮ್ರಿತ್ ಪಾಲ್ ಅವರ ಬಂಧನ-ವಿಚಾರಣೆಯೂ ನಡೆಯಿತು. ಸೇಡಂ ಪಟ್ಟಣದ ವೀರೇಶ್ ಎಂಬ ವಿದ್ಯಾರ್ಥಿಯ ವಿಚಾರಣೆಯ ನಂತರ ಹಗರಣದ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದವು. ಕಲಬುರ್ಗಿಯ ಜ್ಞಾನಜ್ಯೋತಿ ಶಾಲೆಯೇ ಅಕ್ರಮದ ಕೇಂದ್ರ ಎಂಬುದು ಸಾಬೀತಾಯಿತು. ಹಗರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇದೇ ಶಾಲೆಯ ಆಡಳಿತ ಮಂಡಳಿಯ ಜವಾಬ್ದಾರಿ ಹೊತ್ತಿದ್ದರು. ದಿವ್ಯಾ ಹೆಸರು ಬಹಿರಂಗವಾದ ನಂತರ ರಾಜಕಾರಿಣಿಗಳ ಹಸ್ತಕ್ಷೇಪ ಇದ್ದ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು.

ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ಕಲಬುರ್ಗಿ, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಈವರೆಗೆ ನೂರಕ್ಕೂ ಹೆಚ್ಚು ಜನರಲ್ಲಿ ಸಿಐಡಿ ಬಂಧಿಸಿದೆ. ಈ ಪೈಕಿ 52 ಅಭ್ಯರ್ಥಿಗಳು ಸೇರಿದ್ದಾರೆ. ಕಲಬುರ್ಗಿಯಲ್ಲಿ 8 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದೆ.

ಇದನ್ನೂ ಓದಿ: PSI Recruitment Scam: ಮುಂದಿನ ಆದೇಶದವರೆಗೂ ಮರುಪರೀಕ್ಷೆಯ ದಿನಾಂಕ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ

Published On - 9:07 am, Thu, 3 November 22