545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಗ್ರಾ.ಪಂ ಸದಸ್ಯ, ಬ್ರೋಕರ್ ಕೆಲಸ ಮಾಡಿದ್ದ ಕಿಂಗ್ಪಿನ್ ರುದ್ರಗೌಡ ಪಾಟೀಲ್ಗೆ ಇತ್ತು ಅನೇಕರ ಲಿಂಕ್
ಅಕ್ರಮದ ಕಿಂಗ್ಪಿನ್ ರುದ್ರಗೌಡ ಪಾಟೀಲ್ಗೆ ಬೆಂಗಳೂರಿನ ಲಿಂಕ್ ಇದೆ. 2012-14ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ರುದ್ರಗೌಡ, ಅನೇಕ ಕೆಲಸಗಳಿಗಾಗಿ ಬೆಂಗಳೂರಿಗೆ ಓಡಾಡಿಕೊಂಡಿದ್ದ. ಬಳಿಕ ಬೆಂಗಳೂರಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದ. ಇದೇ ವೇಳೆ ಅಕ್ರಮ ಪರೀಕ್ಷೆ ಕಿಂಗ್ಪಿನ್ಗಳ ಜೊತೆ ಸಂಪರ್ಕ ಬೆಳೆಸಿರುವುದಾಗಿ ಮಾಹಿತಿ ಸಿಕ್ಕಿದೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿ 6 ತಂಡಗಳನ್ನು ರಚಿಸಿದೆ. ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಕಲಬುರಗಿಯಲ್ಲೇ ಬೀಡುಬಿಟ್ಟಿದ್ದಾರೆ. ಆರೋಪಿಗಳ ಬಂಧನ ಕುರಿತು ಒಂದು ತಂಡದಿಂದ ತನಿಖೆ ನಡೆದ್ರೆ, ಮತ್ತೊಂದು ತಂಡ, ಈಗಾಗಲೇ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರೋ ಅಭ್ಯರ್ಥಿಗಳ ಓಎಂಆರ್ ಶೀಟ್ ಪರಿಶೀಲನೆ ನಡೆಸಲಿದೆ. ಮತ್ತೊಂದು ತಂಡ ತಾಂತ್ರಿಕವಾಗಿ ಮಾಹಿತಿ ಸಂಗ್ರಹಿಸುತ್ತಿದೆ. ಕಲಬುರಗಿ ಮಾತ್ರವಲ್ಲ ಬೇರೆಡೆಯೂ ಅಕ್ರಮ ನಡೆದಿದೆಯಾ? ಈ ಕುರಿತು ಮತ್ತೊಂದು ತಂಡದಿಂದ ಸಾಕ್ಷ್ಯ ಸಂಗ್ರಹ ಕೆಲಸ ನಡೆಯುತ್ತಿದೆ. ಆರೋಪಿಗಳು ತಪ್ಪಿಸಿಕೊಳ್ಳದಂತೆ ಮಾಡಲು ಸಿಐಡಿ ಅಧಿಕಾರಿಗಳು ಪ್ರಕರಣದ ಬಗ್ಗೆ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ಕಳೆದ 15 ದಿನಗಳಿಂದ ನಾಪತ್ತೆಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ದಿವ್ಯಾ ಹಾಗರಗಿ, ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ. ದಿವ್ಯಾ ಹಾಗರಗಿ ಜೊತೆ ಕಿಂಗ್ಪಿನ್ ಮಂಜುನಾಥ ಮೇಳಕುಂದಿ, ಕಾಶಿನಾಥ್, ಇಬ್ಬರು ಕೊಠಡಿ ಮೇಲ್ವಿಚಾರಕಿಯರು ನಾಪತ್ತೆಯಾಗಿದ್ದಾರೆ. ರಾಜ್ಯ, ನೆರೆ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಪ್ರಕರಣದ ತನಿಖೆ ಶುರುವಾಗುತ್ತಿದ್ದಂತೆ ಐವರು ನಾಪತ್ತೆಯಾಗಿದ್ದರು. ನಿಜವಾಗಿಯೂ ದಿವ್ಯಾ ಹಾಗರಗಿ ಗ್ಯಾಂಗ್ ಸಿಐಡಿಗೆ ಸಿಗುತ್ತಿಲ್ಲವಾ? ರಾಜ್ಯದ ಓರ್ವ ಪ್ರಭಾವಿ ಸಚಿವರು ರಕ್ಷಣೆ ಮಾಡುತ್ತಿರುವ ಶಂಕೆ? ವ್ಯಕ್ತವಾಗಿದೆ. ದಿವ್ಯಾ ಬಂಧಿಸದಂತೆ ಸಿಎಂ ಮೇಲೆ ಒತ್ತಡ ಹೇರಿದ್ದಾರೆಂಬ ಅನುಮಾನ ಶುರುವಾಗಿದೆ. ಅಕ್ರಮದಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ ಅಂತಿರೋ ಸಿಐಡಿ ದಿವ್ಯಾ ಹಾಗರಗಿ & ಗ್ಯಾಂಗ್ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದೆ.
ಕಿಂಗ್ಪಿನ್ ರುದ್ರಗೌಡ ಪಾಟೀಲ್ಗೆ ಬೆಂಗಳೂರಿನ ಲಿಂಕ್ ಅಕ್ರಮದ ಕಿಂಗ್ಪಿನ್ ರುದ್ರಗೌಡ ಪಾಟೀಲ್ಗೆ ಬೆಂಗಳೂರಿನ ಲಿಂಕ್ ಇದೆ. 2012-14ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ರುದ್ರಗೌಡ, ಅನೇಕ ಕೆಲಸಗಳಿಗಾಗಿ ಬೆಂಗಳೂರಿಗೆ ಓಡಾಡಿಕೊಂಡಿದ್ದ. ಬಳಿಕ ಬೆಂಗಳೂರಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದ. ಇದೇ ವೇಳೆ ಅಕ್ರಮ ಪರೀಕ್ಷೆ ಕಿಂಗ್ಪಿನ್ಗಳ ಜೊತೆ ಸಂಪರ್ಕ ಬೆಳೆಸಿರುವುದಾಗಿ ಮಾಹಿತಿ ಸಿಕ್ಕಿದೆ. ಆರೋಪಿಗಳ ಜೊತೆ ಸಂಪರ್ಕ ಸಾಧಿಸಿದ್ದ ರುದ್ರಗೌಡ ಪಾಟೀಲ್, ಕಲಬುರಗಿ ಜಿಲ್ಲೆಯ ಅನೇಕರ ಕೆಲಸಗಳನ್ನು ಮಾಡಿಸಿ ಕೊಡ್ತಿದ್ದ. 2015ರಿಂದ ಪರೀಕ್ಷಾ ಅಕ್ರಮ ಶುರುಮಾಡಿರುವ ರುದ್ರಗೌಡ ನೇಮಕಾತಿ ವಿಭಾಗದಿಂದ ಕೊಠಡಿ ಮೇಲ್ವಿಚಾರಕರವರೆಗೆ ಲಿಂಕ್ ಹೊಂದಿದ್ದ. ತನ್ನ ಎಲ್ಲ ಅಕ್ರಮಗಳಿಗೆ ಎಲ್ಲರನ್ನೂ ಬುಕ್ ಮಾಡ್ತಿದ್ದ.
ಲೋಕೋಪಯೋಗಿ ಇಲಾಖೆಯ ಜೆಇ ಪರೀಕ್ಷೆಯಲ್ಲಿ ಅಕ್ರಮ; ತನಿಖೆಗೆ ಮುಂದಾಗದ ಸರ್ಕಾರ ಇನ್ನು ಮತ್ತೊಂದು ಕಡೆ ಲೋಕೋಪಯೋಗಿ ಇಲಾಖೆಯ ಜೆಇ ಪರೀಕ್ಷೆಯಲ್ಲಿ ಅಕ್ರಮ ನಡೆದರೂ ಸರ್ಕಾರ ತನಿಖೆಗೆ ವಹಿಸಿಲ್ಲ. ಕಳೆದ ಡಿಸೆಂಬರ್ 13, 14ರಂದು ಜೆಇ, ಎಇ ಪರೀಕ್ಷೆ ನಡೆದಿತ್ತು. ಸೇಂಟ್ಜಾನ್ಸ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ವೀರಣ್ಣಗೌಡ ಎಂಬ ಅಭ್ಯರ್ಥಿ ಪರೀಕ್ಷೆ ಬರೆಯುವಾಗ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಅಲ್ಲದೆ ಲಾಡ್ಜ್ನಲ್ಲಿ ಕೂತು ಉತ್ತರ ಹೇಳುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ. ಇಷ್ಟೆಲ್ಲಾ ಆದರೂ ಪರೀಕ್ಷೆ ಅಕ್ರಮದ ಬಗ್ಗೆ ತನಿಖೆಗೆ ಸರ್ಕಾರ ಮುಂದಾಗಿಲ್ಲ. ಉನ್ನತ ಮಟ್ಟದ ತನಿಖೆ ನಡೆದರೆ ಅಕ್ರಮ ಬಯಲಾಗುವ ಸಾಧ್ಯತೆ ಇದೆ.
ಇನ್ನು ಈ ಬಗ್ಗೆ ದೂರು ಬಂದ ಬಳಿಕ ಯುವತಿ ಸೌಮ್ಯರನ್ನ ಕೆಇಎಗೆ ಕರೆಯಿಸಿದ್ದ ಅಧಿಕಾರಿಗಳು ಪೊಲೀಸ್ ತನಿಖೆಗೂ ಮುನ್ನ ಯುವತಿ ವಿಚಾರಣೆ ನಡೆಸಿದ್ದರು. ಕೆಇಎ ಅಧಿಕಾರಿಗಳು ಮೈಸೂರು ಮೂಲದ ಸೌಮ್ಯ ಬಳಿ ಮಾಹಿತಿ ಸಂಗ್ರಹಿಸಿದ್ದರು. ವಾಟ್ಸಪ್ ನಲ್ಲಿ ಹರಿದಾಡಿದ ಪ್ರಶ್ನೆಗಳ ಬಗ್ಗೆ ವಿವರಣೆ ಕೇಳಿದ್ದರು. ಈ ವೇಳೆ ನನಗೆ ಯಾರು ಪ್ರಶ್ನೆಗಳನ್ನ ಕಳಿಸಿಲ್ಲ. ನಾನು ಪರೀಕ್ಷೆಗೆ ಪ್ರಿಪೇರ್ ಮಾಡಿದ್ದ ನೋಟ್ಸ್ ಎಂದಿದ್ದಳು. ನಾನು ಓದುವ ಸಲುವಾಗಿ ಅದನ್ನ ಬರೆದುಕೊಂಡಿದ್ದಾಗಿ ಮಾಹಿತಿ ನೀಡಿದ್ದಾಳೆ. ಅದ್ರೆ ಪರಿಶೀಲನೆ ವೇಳೆ ಪ್ರಶ್ನೆ ಪತ್ರಿಕೆ ಹೋಲುವಂತ 11 ಪ್ರಶ್ನೆಗಳು ಯುವತಿ ವಾಟ್ಸಪ್ನಲ್ಲೂ ಪತ್ತೆಯಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಗುಮಾನಿ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಕೆಇಎ ಮಾಹಿತಿ ಪಡೆದಿದೆ. ಪ್ರಶ್ನೆ ಪತ್ರಿಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿದೆ.
ಪೊಲೀಸರು ಕೂಡ ಈಗಾಗಲೇ ಯುವತಿ ಬಳಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಯುವತಿ ಶೇರ್ ಮಾಡಿದ ಆಕೆಯ ನಾಲ್ವರು ಪರಿಚಿತರ ವಿಚಾರಣೆ ಮಾಡಲಾಗಿದೆ. ಸ್ನೇಹಿತರ ಹೇಳಿಕೆ ಸಂಗ್ರಹಿಸಿ ಸೂಕ್ತ ಸಾಕ್ಷ್ಯ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದಿಯಾ ಅಥವಾ ನೋಟ್ಸ್ ಮಾಡಿರೋದಾ ಅನ್ನೋ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಸದ್ಯ ಪೊಲೀಸ್ ತನಿಖೆ ಮುಗಿಯುವವರೆಗೂ ಅಸಲಿ ಸತ್ಯ ನಿಗೂಢ. ಈಗಾಗಲೇ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದು ವಿಚಾರಣೆಗೆ ಹಾಜರಾಗಲು ಎಲ್ಲರಿಗೂ ಕರೆಯಲಾಗಿದೆ. ಖುದ್ದು ಉತ್ತರ ವಿಭಾಗ ಡಿಸಿಪಿ ವಿನಾಯಕ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಹಲವು ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಳಿಸಿದ ಸಿಐಡಿ; ಒಎಂಆರ್ ಶೀಟ್ಗಳನ್ನು ಎಫ್ಎಸ್ಎಲ್ಗೆ ಕಳಿಸಲು ಸಿದ್ಧತೆ