ಕಲಬುರಗಿಯಲ್ಲಿ ತಯಾರಾಗುತ್ತಿವೆ ಗೋಮಯ ರಾಖಿಗಳು; ಪರಿಸರದ ಕಾಳಜಿಯಲ್ಲಿ ಮತ್ತೊಂದು ಮೈಲಿಗಲ್ಲು

| Updated By: preethi shettigar

Updated on: Aug 21, 2021 | 9:59 AM

ಗೋಮಯ ರಾಖಿ ಎಂದರೆ, ಗೋವಿನ ಸೆಗಣಿಯಿಂದ ಮಾಡಲಾಗುವ ರಾಖಿಗಳು. ಇದು ಪರಿಸರಕ್ಕೆ ಹಾನಿಯಾಗದೇ, ಪರಿಸರ ಪ್ರೇಮಿ ರಾಖಿಗಳಾಗಿವೆ. ಜತೆಗೆ ರಾಖಿಯಲ್ಲಿ ತುಳಸಿ ಬೀಜಗಳನ್ನು ಹಾಕುತ್ತಿರುವುದರಿಂದ, ರಾಖಿ ಕಟ್ಟಿಕೊಂಡು ಮಣ್ಣಿರುವ ಜಾಗದಲ್ಲಿ ಅವುಗಳನ್ನು ಬಿಸಾಡಿದರು ಕೂಡಾ, ಅದರಿಂದ ಮೂರ್ನಾಲ್ಕು ತುಳಸಿ ಗಿಡಗಳು ಹುಟ್ಟಿಕೊಳ್ಳುತ್ತವೆ.

ಕಲಬುರಗಿಯಲ್ಲಿ ತಯಾರಾಗುತ್ತಿವೆ ಗೋಮಯ ರಾಖಿಗಳು; ಪರಿಸರದ ಕಾಳಜಿಯಲ್ಲಿ ಮತ್ತೊಂದು ಮೈಲಿಗಲ್ಲು
ಗೋಮಯ ರಾಖಿ
Follow us on

ಕಲಬುರಗಿ: ಅಣ್ಣ-ತಂಗಿಯರ ಬಂಧ, ಜನುಮ ಜನುಮಗಳ ಅನುಬಂಧ ಎಂಬ ಮಾತಿದೆ. ಇಂತಹ ಪವಿತ್ರ ಬಾಂಧವ್ಯ ಪ್ರತಿಕವಾಗಿ ರಕ್ಷಾ ಬಂಧನ ಆಚರಿಸಲಾಗುತ್ತದೆ. ಅದರಲ್ಲೂ ಪಂಚಮಿ ಹಬ್ಬಕ್ಕೆ ತವರಿಗೆ ಬರುವ ಸಹೋದರಿಯರು ರಾಖಿ ಹಬ್ಬದವರಗೆ ತವರಲ್ಲಿ ಇರುತ್ತಾರೆ. ಅದರಂತೆ ರಕ್ಷಾ ಬಂಧನದ ದಿನ ಸಹೋದರರಿಗೆ ರಾಖಿ ಕಟ್ಟಿ, ನಂತರ ಗಂಡನ ಮನೆಗೆ ಹೋಗುವ ಸಂಪ್ರದಾಯ ಇಂದಿಗೂ ಉತ್ತರ ಕರ್ನಾಟಕ ಭಾಗದಲ್ಲಿದೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಆಕರ್ಷಕ ರಾಖಿಗಳು ಮಿಂಚುತ್ತಿವೆ. ಅನೇಕರು ಬೆಳ್ಳಿ ಮತ್ತು ಬಂಗಾರದ ಆಭರಣದಲ್ಲಿ ಮಾಡಿದ ರಾಖಿಯನ್ನು ಕೂಡಾ ಈ ಸಂದರ್ಭದಲ್ಲಿ ಸಹೋದರರಿಗೆ ಕಟ್ಟುತ್ತಾರೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಕೆಯ ರಾಖಿಗಳು ಹೆಚ್ಚಾಗುತ್ತಿವೆ. ಕೆಲ ಗಂಟೆಗಳ ಕಾಲ ಕಟ್ಟಿಕೊಂಡು ಬಿಸಾಡುವ ರಾಖಿಯಿಂದಾಗಿ ಪರಿಸರದ ಮೇಲೆ ವ್ಯತಿರಕ್ತ ಪರಿಣಾಮಗಳು ಕೂಡಾ ಉಂಟಾಗುತ್ತಿವೆ. ಆದರೆ ಕಲಬುರಗಿಯಲ್ಲಿ ಕೆಲ ಯುವಕರ ತಂಡ, ಪ್ಲಾಸ್ಟಿಕ್​ಗೆ ಬೈ ಬೈ ಹೇಳಿ, ರಕ್ಷಾ ಬಂಧನಕ್ಕಾಗಿಯೇ ವಿಶೇಷ ಗೋಮಯ ರಾಖಿಗಳನ್ನು ತಯಾರಿಸಿದ್ದಾರೆ.

ಸಿದ್ಧವಾಗಿವೆ ಗೋಮಯ ರಾಖಿ
ಕಲಬುರಗಿ ತಾಲೂಕಿನ ಗೂರೂರು ಬಿ ಗ್ರಾಮದ ಮಂದಹಾಸ ಶಿಕ್ಷಣ ಸಂಸ್ಥೆ ಮತ್ತು ಸ್ಪೂರ್ತಿ ಕ್ರಿಯೇಟಿವ್ ಮೈಂಡ್ಸ್ ಸಂಸ್ಥೆಗಳು, ಗೂರೂರು ಬಿ ಗ್ರಾಮದಲ್ಲಿ ಗೋಮಯ ರಾಖಿಗಳನ್ನು ಸಿದ್ಧಗೊಳಿಸಿದ್ದಾರೆ. ಕ್ರಿಯೇಟಿನ್ ಮೈಂಡ್ಸ್​ನ ಸಂಚಾಲಕ ಶಿವಕುಮಾರ್ ಹಳ್ಳಿ ನೇತೃತ್ವದಲ್ಲಿನ ಯುವಕರ ತಂಡ, ರಾಖಿ ಹಬ್ಬಕ್ಕಾಗಿಯೇ ಭಿನ್ನ ವಿಭಿನ್ನ ಶೈಲಿಯಲ್ಲಿ ಗೋಮಯ ರಾಖಿಗಳನ್ನು ಸಿದ್ಧಗೊಳಿಸಿ, ಕಡಿಮೆ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಹಿಂದೆ ಗೋಮಯ ಗಣಪತಿ ಸೇರಿದಂತೆ ಅನೇಕ ಗೋಮಯ ಉತ್ಪನ್ನಗಳನ್ನು ಸಿದ್ಧಗೊಳಿಸಿ ಜನರಿಗೆ ನೀಡಿದ್ದ ಸಂಸ್ಥೆಗಳು ಇದೀಗ ರಕ್ಷಾ ಬಂಧನಕ್ಕೂ ಕೂಡಾ ಗೋಮಯ ರಾಖಿಗಳನ್ನು ತಯಾರು ಮಾಡಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಗೋಮಯ ರಾಖಿಗಳನ್ನು ಸಿದ್ಧಗೊಳಿಸಿರುವ ತಂಡ, ಕೇವಲ ಹತ್ತರಿಂದ ಇಪ್ಪತ್ತು ರೂಪಾಯಿ ಪಡೆದು, ಕಡಿಮೆ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಿದ್ದಾರೆ.

ಏನಿದು ಗೋಮಯ ರಾಖಿ?
ಇತ್ತೀಚೆಗೆ ಪ್ರತಿಯೊಂದು ವಸ್ತುಗಳು ಕೂಡಾ ಪ್ಲಾಸ್ಟಿಕ್​ನಲ್ಲಿ ತಯಾರಾಗುತ್ತಿವೆ. ಊಟದ ತಟ್ಟೆಯಿಂದ ಹಿಡಿದು, ಅನೇಕ ಕೆಲಸಗಳಿಗಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಇದರಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿವೆ. ಇದಕ್ಕೆ ಪರ್ಯಾವಾಗಿ ಅನೇಕರು ದೇಶಿಯ ವಸ್ತುಗಳನ್ನು ಪರಿಚಯಿಸುತ್ತಿದ್ದಾರೆ. ಅದರಂತೆ ಶಿವಕುಮಾರ್ ಹಳ್ಳಿ ಮತ್ತು ಅವರ ತಂಡ ಗೋಮಯ ರಾಖಿಗಳನ್ನು ಸಿದ್ಧಗೊಳಿಸಿ ನೀಡುತ್ತಿದ್ದಾರೆ.

ಗೋಮಯ ರಾಖಿ ಎಂದರೆ, ಗೋವಿನ ಸೆಗಣಿಯಿಂದ ಮಾಡಲಾಗುವ ರಾಖಿಗಳು. ಇದು ಪರಿಸರಕ್ಕೆ ಹಾನಿಯಾಗದೇ, ಪರಿಸರ ಪ್ರೇಮಿ ರಾಖಿಗಳಾಗಿವೆ. ಜತೆಗೆ ರಾಖಿಯಲ್ಲಿ ತುಳಸಿ ಬೀಜಗಳನ್ನು ಹಾಕುತ್ತಿರುವುದರಿಂದ, ರಾಖಿ ಕಟ್ಟಿಕೊಂಡು ಮಣ್ಣಿರುವ ಜಾಗದಲ್ಲಿ ಅವುಗಳನ್ನು ಬಿಸಾಡಿದರು ಕೂಡಾ, ಅದರಿಂದ ಮೂರ್ನಾಲ್ಕು ತುಳಸಿ ಗಿಡಗಳು ಹುಟ್ಟಿಕೊಳ್ಳುತ್ತವೆ. ಗೋಮಯ ಸೆಗೆಣಿಯಿಂದ ರಾಖಿಗಳನ್ನು ಸಿದ್ಧಗೊಳಿಸಿರುವ ತಂಡ, ಅವುಗಳಲ್ಲಿ ತುಳಸಿ ಬೀಜಗಳನ್ನು ಹಾಕುತ್ತಿದೆ. ಬಳಸಿ ಬಿಸಾಡಿದ ನಂತರವು ಕೂಡಾ ತುಳಸಿ ಗಿಡಗಳು ಹುಟ್ಟಿಕೊಳ್ಳುವುದರಿಂದ ಪರಿಸರಕ್ಕೆ ಲಾಭವಾಗುತ್ತದೆ ವಿನಃ ಹಾನಿಯಾಗುವುದಿಲ್ಲ.

ರಕ್ಷಾ ಬಂಧನಕ್ಕಾಗಿಯೇ ವಿಶೇಷ ಗೋಮಯ ರಾಖಿ

ಹೇಗೆ ತಯಾರಾಗುತ್ತದೆ ಗೋಮಯ ರಾಖಿ?
ಸಂಸ್ಥೆಯ ಸಿಬ್ಬಂದಿಯವರು, ಗೋವಿನ ಸೆಗಣಿಯನ್ನು ಮೊದಲು ಚೆನ್ನಾಗಿ ಒಣಗಿಸುತ್ತಾರೆ. ನಂತರ ಅದನ್ನು ಪುಡಿ ಮಾಡಿ, ಶುದ್ಧವಾದ ಸೆಗಣಿಯ ಪುಡಿಯನ್ನು ಸೋಸಿ ಪಡೆಯುತ್ತಾರೆ. ಅದಕ್ಕೆ ಕೆಲ ಗಮ್​ಗಳನ್ನು ಹಾಕಿ, ಅದನ್ನು ಚೆನ್ನಾಗಿ ಹದ ಮಾಡುತ್ತಾರೆ. ನಂತರ ವಿವಿಧ ಆಕಾರದ ಪಡಿಯಚ್ಚುಗಳಲ್ಲಿ ಹಾಕಿ, ಅದಕ್ಕೆ ಒಂದು ಆಕಾರ ನೀಡಿ, ಒಣಗಿಸುತ್ತಾರೆ. ನಂತರ ಪ್ರತಿಯೊಂದು ರಾಖಿ ಮೇಲೆ ಕೂಡ ತುಳಸಿ ಬೀಜಗಳನ್ನು ಹಾಕುತ್ತಾರೆ. ಕೆಲ ನೈಸರ್ಗಿಕ ಬಣ್ಣಗಳಿಂದ ಅವುಗಳ ಅಲಂಕಾರ ಮಾಡಲಾಗುತ್ತದೆ. ಹೀಗೆ ತಯಾರಾದ ಗೋಮಯ ರಾಖಿಗಳನ್ನು ಕಲಬುರಗಿ ಸೇರಿದಂತೆ ಬೇರೆ ಬೇರೆ ಕಡೆಯ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಇಲ್ಲಿವರಗೆ ಐದು ಸಾವಿರಕ್ಕೂ ಹೆಚ್ಚು ಗೋಮಯ ರಾಖಿಗಳನ್ನು ಸಿದ್ಧಗೊಳಿಸಿರುವ ತಂಡ, ಈಗಗಾಲೇ ಅನೇಕ ಕಡೆ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ರಾಖಿಗಳಿಗೆ ಪರ್ಯಾಯವಾಗಿ ಸೃಷ್ಟಿಯಾಗಿರುವ ಗೋಮಯ ರಾಖಿಗಳನ್ನು ಕೇವಲ ಹತ್ತರಿಂದ ಇಪ್ಪತ್ತು ರೂಪಾಯಿಗೆ ಮಾರಾಟ ಮಾಡುತ್ತಿರುವ ತಂಡಕ್ಕೆ, ಅದರಿಂದ ಲಾಭ ಗಳಿಸುವ ಉದ್ದೇಶವಿಲ್ಲ. ಬದಲಾಗಿ ನಾವು ಬಳಸುವ ವಸ್ತುಗಳಿಂದ ಪರಿಸರ ಹಾಳಾಗಬಾರದು. ನಮ್ಮ ಆಚರಣೆಗಳು, ಬಳಸುವ ವಸ್ತುಗಳು ಪರಿಸರಕ್ಕೂ ಪೂರಕವಾಗಿರಬೇಕು ಎನ್ನುವುದು ಈ ಸಂಸ್ಥೆಯ ಧ್ಯೇಯವಾಗಿದೆ.

ನಾನು ಎಂಎ ಫೈನ್ ಆರ್ಟ್ ಮಾಡಿದ್ದೇನೆ. ಮೊದಲಿನಿಂದಲು ಪರಿಸರಪ್ರೇಮಿಯಾಗಿರುವ ವಸ್ತುಗಳನ್ನು ನಾವು ಬಳಸಬೇಕು ಎನ್ನುವ ವಿಚಾರ ಹೊಂದಿದ್ದೆ. ಆ ನಿಟ್ಟಿನಲ್ಲಿ ಅನೇಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಇದೀಗ ರಾಖಿ ಹಬ್ಬಕ್ಕೆ ಕೂಡಾ ಗೋಮಯ ರಾಖಿಗಳನ್ನು ತಯಾರಿಸಿ ನೀಡಲಾಗುತ್ತದೆ. ಗೋವು ಕೂಡಾ ಸಹೋದರಿಯಂತೆ. ಹೀಗಾಗಿ ಸಹೋದರಿಯರು ಪ್ರೀತಿಯಿಂದ ಸಹೋದರರಿಗೆ ಕಟ್ಟುವ ರಾಖಿಗಳು ಕೂಡಾ ಗೋಮಯವಾಗಿರಬೇಕು ಎನ್ನುವ ಉದ್ದೇಶದಿಂದ ಗೋಮಯ ರಾಖಿಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಗೋಮಯ ರಾಖಿ ತಯಾರಕ ಶಿವಕುಮಾರ್ ತಿಳಿಸಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ:

Raksha Bandhan 2021: ರಾಖಿ ಕಟ್ಟುವ ಶುಭ ಮುಹೂರ್ತ ಈ ವರ್ಷ ಯಾವ ಘಳಿಗೆಯಲ್ಲಿ ಬಂದಿದೆ?

ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?

 

Published On - 9:55 am, Sat, 21 August 21