ಶಹಬಾದ್: ಕಾಲು ಜಾರಿ ಹೊಂಡಕ್ಕೆ ಬಿದ್ದು ಯುವತಿಯರಿಬ್ಬರು ದುರ್ಮರಣ
ಕಾಲು ಜಾರಿ ಹೊಂಡದಲ್ಲಿ ಬಿದ್ದು ಇಬ್ಬರು ಯುವತಿಯರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಶಹಬಾದ್ ತಾಲೂಕಿನ ರಾಮಘಡ್ ಕಾಲೋನಿಯಲ್ಲಿ ನಡೆದಿದೆ.
ಕಲಬುರಗಿ: ಕಾಲು ಜಾರಿ ಹೊಂಡದಲ್ಲಿ ಬಿದ್ದು ಇಬ್ಬರು ಯುವತಿಯರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಶಹಬಾದ್ ತಾಲೂಕಿನ ರಾಮಘಡ್ ಕಾಲೋನಿಯಲ್ಲಿ ನಡೆದಿದೆ. ಮಾಣಿಕಮ್ಮ ದಾಸರ್ (20) ಕೀರ್ತಿಕಾ (12) ಮೃತರು. ಮೃತರನ್ನು ರಾಮಘಡ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಬ್ಬರು ಇಂದು ಮಧ್ಯಾಹ್ನ ಬಟ್ಟೆ ತೊಳೆಯಲು ಹೊಂಡಕ್ಕೆ ಹೋಗಿದ್ದರು. ಈ ವೇಳೆ ಹೊಂಡದಲ್ಲಿ ಕಾಲು ಜಾರಿಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆಸ್ತಿ ವಿವಾದಕ್ಕೆ ನಡೆದಿದ್ದ ಭೀಕರ ಕೊಲೆ: ವಿಡಿಯೋ ವೈರಲ್
ಕಾರವಾರ: ಆಸ್ತಿ ವಿವಾದಕ್ಕೆ ಭೀಕರ ಕೊಲೆ ನಡೆದಿದ್ದು ಸದ್ಯ ಕೊಲೆಯ ವಿಡಿಯೋ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ತೊಟ್ಟಿಲುಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನುಮಂತ ನಾಯ್ಕ್ (54) ಕೊಲೆಯಾದ ವ್ಯಕ್ತಿ. ವಿನಾಯಕ, ಚಿದಂಬರ ಹಾಗೂ ಮಂಜುನಾಥ ಹಲ್ಲೆ ಮಾಡಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಡಿಕೆ ತೋಟ ಭಾಗ ಮಾಡುವ ವಿಚಾರವಾಗಿ ಅಣ್ಣತಮ್ಮಿಂದಿರ ನಡುವೆ ಜಗಳ ನಡೆದಿದೆ. ಸ್ವಂತ ಅಣ್ಣನನ್ನ ರಾಡ್ನಿಂದ ಹೊಡೆದು ತಮ್ಮಂದಿರು ಕೊಲೆ ಮಾಡಿದ್ದಾರೆ. ಬೇಡ ಬೇಡ ಅಂದ್ರು ಕೈಯಲ್ಲಿ ರಾಡ್ ಹಿಡಿದು ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಧಿಕ ಪ್ರಮಾಣದ ಮಾತ್ರೆ ಸೇವಿಸಿ ಮಹಿಳೆ ಸಾವು
ಬೆಂಗಳೂರು: ಮಾತ್ರೆ ಸೇವಿಸಿ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಗ್ರಾಮದಲ್ಲಿ ನಡೆದಿದೆ. ಚಂದ್ರಮ್ಮ (28) ಮೃತ ಮಹಿಳೆ. ಕಳೆದೆಂಟು ವರ್ಷದಿಂದ ಉಸಿರಾಟದ ತೊಂದರೆ, ತಲೆನೋವಿನಿಂದ ಬಳಲುತ್ತಿದ್ದಳು. 5 ವರ್ಷದಿಂದ ಚಂದ್ರಮ್ಮ ಮಾತ್ರೆ ಸೇವನೆ ಮಾಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಪ್ರತಿದಿನ 3 ಮಾತ್ರೆ ಸೇವಿಸಬೇಕಿತ್ತು. ನೆನ್ನೆ ಅಧಿಕ ತಲೆ ನೋವು ಹೆಚ್ಚಾದ್ರಿಂದ ಒಂದೇ ಬಾರಿಗೆ 3 ಪಟ್ಟು ಹೆಚ್ಚು ಮಾತ್ರೆ ಸೇವಿಸಿದ್ದಾರೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಬಸ್ ಪಲ್ಟಿ; ಮಹಿಳೆ ಸಾವು, ಎಂಟು ಮಂದಿಗೆ ಗಂಭೀರ ಗಾಯ
ಕಾರವಾರ: ಶಾಲಾ ಬಸ್ ಪಲ್ಟಿಯಾಗಿ 60 ವರ್ಷದ ಮಹಿಳೆ ಸಾವುನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಅರಬೈಲ್ ಘಟ್ಟದ ಬಳಿ ನಡೆದಿದೆ. ಘಟನೆಯಲ್ಲಿ ಶಾಲಾ ಬಸ್ ಚಾಲಕ ಸೇರಿದಂತೆ ಎಂಟು ಮಂದಿಗೆ ಗಂಭೀರ ಗಾಯಗಳಾಗಿದ್ದು, ಉಳಿದ 7 ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿಯಿಂದ ಅಂಕೋಲಾ ಮಾರ್ಗವಾಗಿ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ರಜೆ ಹಿನ್ನೆಲೆ ಪ್ರವಾಸ ಕೈಗೊಳ್ಳಲಾಗಿತ್ತು. ಅದರಂತೆ ಹುಬ್ಬಳಿಯಿಂದ ಅಂಕೋಲಾ ಮಾರ್ಗವಾಗಿ ಪ್ರವಾಸಕ್ಕೆ ತೆರಳುತ್ತಿದ್ದ ರಾಣಿಬೆನ್ನೂರಿನ ಪರಿಣಿತಿ ವಿದ್ಯಾ ಮಂದಿರಕ್ಕೆ ಸೇರಿದ್ದ ಬಸ್, ರಾಣೆಬೆನ್ನೂರು ಸಿದ್ಧಾರೂಢ ನಗರದಿಂದ ಶಿರಸಿಯತ್ತ ಬರುತ್ತಿದ್ದಾಗ ಬನವಾಸಿಯ ಬುಗುಡಿಕೊಪ್ಪದಲ್ಲಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಶಿರಸಿ- ಹಾವೇರಿ ರಾಷ್ಟ್ರೀಯ ಹೆದ್ದಾರಿ 766ಇ ಯಲ್ಲಿ ಈ ದುರ್ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:56 pm, Fri, 11 November 22