ಕಲಬುರಗಿ: ಇರುವೆ ಕಟ್ಟಿದ ಗೂಡಿನೊಳಗೆ ಹಾವು ಬಂದು ಸೇರಿಕೊಳ್ಳುವಂತೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿರುವ ಸಿದ್ದರಾಮಯ್ಯ (Siddaramaiah) ಅಲ್ಲಿನ ಹಿಂದುಳಿದ ಹಾಗೂ ದಲಿತ ನಾಯಕರ (Backward Classes) ಮೂಲೆ ಗುಂಪು ಮಾಡಿದ್ದೇ ಅವರ ಸಾಧನೆ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ವ್ಯಂಗ್ಯವಾಡಿದ್ದಾರೆ. ಕಲಬುರ್ಗಿಯಲ್ಲಿ ಭಾನುವಾರ (ಅಕ್ಟೋಬರ್ 30) ನಡೆದ ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಓ.ಬಿ.ಸಿ. ವರ್ಗಕ್ಕೆ 27 % ಮೀಸಲಾತಿ ನೀಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ಸಮುದಾಯದ 27 ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತ ಸಮುದಾಯದ 12 ಸಂಸದರು ಕೇಂದ್ರ ಸಚಿವರಾಗಿದ್ದಾರೆ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರಮುಖ ಹಿಂದುಳಿದ ವರ್ಗಗಳ ನಾಯಕರಿಗೆ ಸಚಿವ ಸ್ಥಾನವನ್ನೇ ನೀಡಲಿಲ್ಲ.
ಇರುವೆ ಕಟ್ಟುವ ಗೂಡಿನಲ್ಲಿ ಹಾವು ಬಂದು ಸೇರಿಕೊಳ್ಳುವಂತೆ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಮೊದಲು ಮಲ್ಲಿಕಾರ್ಜುನ ಖರ್ಗೆಯವರನ್ನು ಮೂಲೆಗುಂಪು ಮಾಡಿದರು. ಈಗ ಕಾಂಗ್ರೆಸ್ ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿರುವಾಗ ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಹಾಗೂ ದಲಿತ ಸಮುದಾಯಕ್ಕೆ ಕೊಡಬೇಕಾಗಿದ್ದ ನ್ಯಾಯ ಕೊಡಲಿಲ್ಲ ಎಂದು ಪ್ರಲ್ಹಾದ ಜೋಶಿಯವರು ವಾಗ್ದಾಳಿ ನಡೆಸಿದರು.
ಉತ್ತಮ ಸಮಾಜದ ನಿರ್ಮಾಣದಲ್ಲಿ ಹಿಂದುಳಿದ ವರ್ಗಗಳ ಕೊಡುಗೆ ಅಪಾರವಾಗಿದ್ದು, ಭಾರತೀಯ ಜನತಾ ಪಕ್ಷವು ಅಂತವರಿಗೆ ಹೆಚ್ಚಿನ ಆದ್ಯತೆ ನೀಡಿ, ಆ ವರ್ಗವನ್ನು ಕೂಡ ಸಮಾಜದಲ್ಲಿ ಮುನ್ನಲೆಗೆ ಬರುವಂತೆ ಮಾಡುತ್ತಿದೆ. ಇಂತಹ ಕಾರ್ಯಕ್ರಮದ ಮೂಲಕ ಹಿಂದುಳಿದ ವರ್ಗಗಳನ್ನು ಬಲಪಡಿಸುವ ಕಾರ್ಯ ಮತ್ತಷ್ಟು ಹೆಚ್ಚಾಗಬೇಕು ಎಂದು ಜೋಶಿಯವರು ಅಭಿಪ್ರಾಯಪಟ್ಟರು.
ಯಶಸ್ವಿಯಾಗಿ ನಡೆದ ಸಮಾವೇಶದಲ್ಲಿ ಮಧ್ಯ ಪ್ರದೇಶದ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಈಶ್ವರಪ್ಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.