ಎಂಟುವರೆಗಂಟೆ ಪೊಲೀಸರ ಎದೆಬಡಿತ ಹೆಚ್ಚಿಸಿದ್ದ ಖತರ್ನಾಕ ಕಳ್ಳ: ಕಳ್ಳಾಟಕ್ಕೆ ಕಂಗಾಲಾದ ಕಲಬುರಗಿ ಪೊಲೀಸ್​​

| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2023 | 4:00 PM

ಕುಖ್ಯಾತ ಕಳ್ಳನೋರ್ವನನ್ನು ಪೊಲೀಸರು ಹಿಡಿಯಲು ಹೋಗಿದ್ದಾಗ ಪಿಎಸ್ಐ ಅವರ ಸರ್ವಿಸ್ ಪಿಸ್ತೂಲ್​ ಸಮೇತ ಪರಾರಿಯಾಗಿದ್ದ. ಕೊನೆಗೆ ಎಂಟುವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಸರ್ವಿಸ್ ಪಿಸ್ತೂಲ್​ ಪಡೆಯುವ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ.

ಎಂಟುವರೆಗಂಟೆ ಪೊಲೀಸರ ಎದೆಬಡಿತ ಹೆಚ್ಚಿಸಿದ್ದ ಖತರ್ನಾಕ ಕಳ್ಳ: ಕಳ್ಳಾಟಕ್ಕೆ ಕಂಗಾಲಾದ ಕಲಬುರಗಿ ಪೊಲೀಸ್​​
PSI ರಿವಾಲ್ವರ್ ಕಸಿದು ಪರಾರಿಯಾಗಿದ್ದ ಕಳ್ಳ
Follow us on

ಕಲಬುರಗಿ, ಜುಲೈ17: ನೀವೆಲ್ಲಾ ಕಳ್ಳ ಮತ್ತು ಪೊಲೀಸ ಆಟ ಅಂತ ಕೇಳಿರ್ತೀರಿ, ಸಿನಿಮಾದಲ್ಲಿ ನೋಡಿರ್ತಿರಿ. ಆದರೆ ಜಿಲ್ಲೆಯಲ್ಲಿ ಇಂದು ನಿಜವಾಗಿಯೂ ಕಳ್ಳ ಪೊಲೀಸ್ ಆಟವೊಂದು ನಡೆದಿದೆ. ಕುಖ್ಯಾತ ಕಳ್ಳನೋರ್ವನನ್ನು ಪೊಲೀಸರು ಹಿಡಿಯಲು ಹೋಗಿದ್ದರು. ಆದರೆ ಕಳ್ಳ ಪಿಎಸ್ಐ (psi revolver) ಅವರ ಸರ್ವಿಸ್ ಪಿಸ್ತೂಲ್​ ಸಮೇತ ಪರಾರಿಯಾಗಿ ಪೊಲೀಸರಿಗೆ ಆಟವಾಡಿಸಿದ್ದ. ಕೊನೆಗೆ ಎಂಟುವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಶರಣಾಗಿದ್ದಾನೆ.

ಕಲಬುರಗಿಯಲ್ಲಿ ಕಳ್ಳ ಪೊಲೀಸ್​ ಆಟ

ಹೌದು ಇಂದು ಕಲಬುರಗಿ ಜಿಲ್ಲೆಯಲ್ಲಿ ಅಕ್ಷರಶ ಪೊಲೀಸರು ಮತ್ತು ಕಳ್ಳನ ನಡುವೆ, ಕಳ್ಳ ಪೊಲೀಸ್ ಆಟ ನಡೆದಿದೆ. ಕೊನೆಗೂ ಕಲಬುರಗಿ ಪೊಲೀಸರು ಆಟದಲ್ಲಿ ಗೆದ್ದಿದ್ದು, ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮೂರು ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ಖತರ್ನಾಕ ಮನೆಗಳ್ಳನನ್ನು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.

ಮೂರು ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ಖತರ್ನಾಕ ಕಳ್ಳ

ಸರಿಸುಮಾರು ಎಂಟುವರೆ ಗಂಟೆಗಳ ಕಾಲ ಕಳ್ಳಾಟವಾಡಿ ಪೊಲೀಸರಿಗೆ ಶರಣಾದ ಕಿಲಾಡಿ ಕಳ್ಳನ ಹೆಸರು ಖಾಜಪ್ಪಾ ಅಂತ. ಮೂಲತ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ನಿವಾಸಿ. ಬಳ್ಳೂರಗಿ ಗ್ರಾಮದವನಾದರೂ ಕೂಡ ಈತ ಇರ್ತಿದ್ದು ಹೆಚ್ಚಾಗಿ ಮಹರಾಷ್ಟ್ರದ ಪುಣೆ, ಅಕ್ಕಲಕೋಟೆ ಸೇರಿದಂತೆ ಅನೇಕ ಬಾಗದಲ್ಲಿಯೇ. ಈತನ ಮೇಲೆ ಕಲಬುರಗಿ, ಮಹರಾಷ್ಟ್ರ, ತೆಲೆಂಗಾಣದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 28 ಮನೆಗಳ್ಳತನ ಪ್ರಕರಣಗಳಿವೆ.

ಇದನ್ನೂ ಓದಿ: Kalaburagi News: ಬಂಧಿಸಲು ಹೋದಾಗ PSI ಪಿಸ್ತೂಲ್​ ಕಸಿದುಕೊಂಡು ಪರಾರಿಯಾದ ಕುಖ್ಯಾತ ಕಳ್ಳ

ಕಳೆದ ಕೆಲ ದಿನಗಳ ಹಿಂದೆ ಈತ ಮಹರಾಷ್ಟ್ರದ ಅಕ್ಕಲಕೋಟೆಯಲ್ಲಿ ಮನೆಕಳ್ಳತನ ಮಾಡಿದ್ದನಂತೆ. ಹೀಗಾಗಿ ಖಾಜಪ್ಪನ ಚಲನವಲನದ ಬಗ್ಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಆದರೆ ಕಳೆದ ರಾತ್ರಿ ಆತ ಅಫಜಲಪುರಕ್ಕೆ ಹೋಗ್ತಿರೋದು ಗೊತ್ತಾಗಿತ್ತು. ಹೀಗಾಗಿ ಅಫಜಲಪುರ ಪೊಲೀಸರಿಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ನೀಡಿದ್ದರು.

ಇಂದು ನಸುಕಿನ ಜಾವ ಮೂರು ಗಂಟೆಯಿಂದ ಅಫಜಲಪುರ ಪೊಲೀಸರು, ಅಫಜಲಪುರ ಹೊರವಲಯದ ಸೊನ್ನ ಕ್ರಾಸ್ ಬಳಿ ಚೆಕ್ ಪೋಸ್ಟ್ ಹಾಕಿಕೊಂಡು ವಾಹನ ತಪಾಸಣೆ ಮಾಡ್ತಿದ್ದರು. ಮೂರುವರೆ ಸಮಯದಲ್ಲಿ ಖಾಜಪ್ಪಾ ಕಾರ್​ನಲ್ಲಿ ಬಂದಿದ್ದ. ಆದರೆ ಪೊಲೀಸರನ್ನು ನೋಡುತ್ತಿದ್ದಂತೆ, ಕಾರ್​ನ್ನು ರಿಟರ್ನ್ ತೆಗದುಕೊಂಡು ಹೋಗಲು ಮುಂದಾಗಿದ್ದ. ಕೂಡಲೇ ಅಫಜಲಪುರ ಪಿಎಸ್​ಐ ಭೀಮರಾಯ್ ಬಂಕಲಿ, ಕಾರ್ ನ ಗ್ಲಾಸ್​ನ್ನು ಒಡೆದು, ಆತನನ್ನು ಹಿಡಿಯುವ ಯತ್ನ ಮಾಡಿದ್ದರು. ಆದರೆ ಪಿಎಸ್​ಐ ಕೈಯಲ್ಲಿದ್ದ ಲೋಡೆಡ್ ಸರ್ವಿಸ್ ಪಿಸ್ತೂಲ್ ಕೈಜಾರಿ ಕಾರ್​ನೊಳಗೆ ಬಿದಿತ್ತು. ಕಳ್ಳ ಖಾಜಪ್ಪ ಕಾರ್​ನ್ನು ರಿಟರ್ನ್ ಮಾಡಿಕೊಂಡು ಪರಾರಿಯಾಗಿದ್ದ. ಲೋಡೆಡೆ ಸರ್ವಿಸ್ ಪಿಸ್ತೂಲ್ ತಗೆದುಕೊಂಡು ಹೋಗಿದ್ದ ಪೊಲೀಸರ ತಲೆಬಿಸಿ ಹೆಚ್ಚಿಸಿತ್ತು.

ಎಂಟುವರೆ ಗಂಟೆ ನಂತರ ಶರಣಾದ ಕಳ್ಳ ಖಾಜಪ್ಪ

ನಸುಕಿನ ಜಾವ ನಾಲ್ಕು ಗಂಟೆಯಿಂದ ಖಾಜಪ್ಪನಿಗಾಗಿ ಕಲಬುರಗಿ ಜಿಲ್ಲಾ ಪೊಲೀಸರು ಹುಡುಕಾಟ ನಡೆಸಿದ್ದರು. ಆದ್ರೆ ಮುಂಜಾನೆ ಎಂಟು ಗಂಟೆಗೆ ಗೊತ್ತಾಗಿತ್ತು, ಆತ ಬಳ್ಳೂರಗಿ ಹೊರವಲಯದ ಮಹಾಲಕ್ಷ್ಮಿ ದೇವಸ್ಥಾನದ ಬಳಿಯಿದ್ದಾನೆ ಅಂತ. ಅಲ್ಲಿಗೆ ಬರುವಷ್ಟರಲ್ಲಿ ಖಾಜಪ್ಪ ಮರವೇರಿ ಕೂತಿದ್ದ. ಮತ್ತೊಂದಡೆ ಆತನ ಸಹಚರರಾದ ಸಂಜು ಮತ್ತು ರವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: Ramanagara News: ಅಕ್ರಮ ಸಂಬಂಧದ ಆರೋಪ; ರಾಮನಗರದಲ್ಲಿ ಯುವಕನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

ಮುಂಜಾನೆ ಎಂಟು ಗಂಟೆಯಿಂದ ಆತನನ್ನು ಮರದಿಂದ ಕೆಳಗಿಳಿಸೋ ಯತ್ನವನ್ನು ಪೊಲೀಸರು ಮಾಡಿದ್ದರು. ಆದ್ರೆ ನನ್ನ ಸಮೀಪ ಬಂದ್ರೆ ನಾನೇ ಪೈರ್ ಮಾಡಿಕೊಂಡು ಸಾಯ್ತೇನೆ ಅಂತ ಬೆದರಿಕೆ ಹಾಕಿದ್ದನಂತೆ. ಕೊನೆಗೆ ಆತನ ಕುಟುಂಬದವರನ್ನು ಕರೆಸಿ, ಆತನಿಗೆ ಏನು ಮಾಡೋದಿಲ್ಲಾ ಅಂತ ಹೇಳಿ, ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂದು ಮಧ್ಯಾಹ್ನ 12-45 ಕ್ಕೆ ಆರೋಪಿ ಖಾಜಪ್ಪ ಪೊಲೀಸರಿಗೆ ಶರಣಾಗಿದ್ದು, ತನ್ನ ಬಳಿಯಿದ್ದ ಸರ್ವಿಸ್ ಪಿಸ್ತೂಲ್​ನ್ನು ಪೊಲೀಸರಿಗೆ ನೀಡಿದ್ದಾನೆ.

ಕಳ್ಳವೇರಿದ್ದ ಮರದ ಕೆಳಗಿದ್ದ ದೇವಸ್ಥಾನಕ್ಕೆ ಎಸ್ಪಿ ಪೂಜೆ

ಯಾವುದೇ ತೊಂದರೆಯಿಲ್ಲದೆ ಕಾರ್ಯಾಚರಣೆ ಯಶಸ್ವಿಯಾಗಿದ್ದ ಹಿನ್ನೆಲೆ, ಮರವಿದ್ದ ದೇವಸ್ಥಾನದ ಕೆಳಗಿದ್ದ ಮಹಾಲಕ್ಷ್ಮಿ ದೇವಿಗೆ ಕಲಬುರಗಿ ಎಸ್ಪಿ ಇಶಾ ಪಂತ್ ಪೂಜೆ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಖಾಜಪ್ಪನನ್ನು ವಶಕ್ಕೆ ಪಡೆದಿರೋ ಪೊಲೀಸರು ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಆದ್ರೆ ಖಾಜಪ್ಪ ಸಿಗೋವರಗೆ ಪೊಲೀಸರ ಎದೆಬಡಿತ ಮಾತ್ರ ಹೆಚ್ಚಾಗಿದ್ದು ಸತ್ಯ. ಇನ್ನು ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೇ ನೀಡಿರುವ ಕಲಬುರಗಿ ಎಸ್ಪಿ ಇಶಾ ಪಂತ್, ಕಳ್ಳನ ಬಳಿಯಿದ್ದ ಲೋಡೆಡ್ ಪಿಸ್ತೂಲ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಆತನನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಸೋದಾಗಿ ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:00 pm, Mon, 17 July 23