ಅವರು ತಮಿಳುನಾಡಿನವರು, ರೈಲಿನಲ್ಲಿ ಕರ್ನಾಟಕಕ್ಕೆ ಬರ್ತಿದ್ದರು, ಮಳ್ಳರಂತೆ ಎಲ್ಲಿ ಏನನ್ನು ಟಾರ್ಗೆಟ್ ಮಾಡ್ತಿದ್ದರು, ಏನನ್ನು ಎಗರಿಸುತ್ತಿದ್ದರು ಗೊತ್ತಾ!?
Tamilnadu Thieves: ತಮಿಳನಾಡು ಬಿಟ್ಟು ಕರ್ನಾಟಕಕ್ಕೆ ಬಂದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರ ಮೇಲೆ ರಾಜ್ಯದ ವಿವಿಧ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆಯಂತೆ. ಆದ್ರೆ ಯಾರ ಕೈಗೂ ಸಿಗದೇ ಯಾಮಾರಿಸುತ್ತಿದ್ದ ಖತರ್ನಾಕ್ ಕಿಲಾಡಿಗಳನ್ನು ಕಲಬುರಗಿ ಬ್ರಹ್ಮಪುರ ಪೊಲೀಸರು ಬಂಧಿಸಿ, ಅನೇಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಅವರು ತಮಿಳುನಾಡು ರಾಜ್ಯದವರು. ಆದ್ರೆ ರೈಲು (Train) ಹತ್ತಿ ಕರ್ನಾಟಕಕ್ಕೆ ಬರುತ್ತಿದ್ದರು. ಮಳ್ಳರಂತೆ ಅಡ್ಡಾಡುತ್ತಿದ್ದ (Tamilnadu Thieves) ಅವರು ಟಾರ್ಗೆಟ್ ಮಾಡ್ತಿದ್ದದ್ದು ಕೇವಲ ಕಾರ್ ಗಳನ್ನು ಮಾತ್ರ. ರಸ್ತೆ ಪಕ್ಕ ನಿಲ್ಲಿಸಿದ್ದ ಕಾರ್ ಗಳ ಗ್ಲಾಸ್ ಗಳನ್ನು ಒಡೆದು, ಕಾರ್ ನಲ್ಲಿ ಇಟ್ಟಿರೋ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಇಂತಹ ಇಬ್ಬರು ಖತರ್ನಾಕ್ ಕಿಲಾಡಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಆ ಸಿಸಿಟಿವಿ ದೃಶ್ಯಗಳನ್ನು ನೋಡಿದರೆ ಸಾಕು ಎಲ್ಲಾ ಗೊತ್ತಾಗುತ್ತದೆ. ಅಲ್ಲಿ ಇಬ್ಬರು ಅಮಾಯಕರಂತೆ ಇತ್ತಿಂದತ್ತ, ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಯಾರಾದ್ರು ನೋಡಿದ್ರೆ ಇವರು ಯಾರೋ ಅಮಾಯಕರು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ ಅಂತ ಅಂದುಕೊಂಡಿರಬಹುದು. ಆದ್ರೆ ಇವರು ಅಮಾಯಕರಲ್ಲಾ, ಯಾಕಂದ್ರೆ ಇವರು ಸುಮ್ಮನೇ ಅಡ್ಡಾಡುತ್ತಿಲ್ಲ. ಬದಲಾಗಿ ಕಾರ್ (Car) ಗಳ ಸಮೀಪ ಹೋಗಿ, ಕಾರ್ ನಲ್ಲಿ ಯಾರಾದ್ರು ಬೆಲೆ ಬಾಳೋ ವಸ್ತುಗಳನ್ನು ಇಟ್ಟಿದ್ದಾರಾ ಅಂತ ಗಮನಿಸುತ್ತಾರೆ. ಕಾರ್ ಮಾಲೀಕರು, ಕಾರ್ ನಲ್ಲಿ ಲ್ಯಾಪಟಾಪ್, ಪರ್ಸ್, ಬ್ಯಾಗ್ ಗಳನ್ನು ಬಿಟ್ಟು ಹೋಗಿದ್ದರೆ, ಇವರಿಗೆ ಫುಲ್ ಖುಷಿಯಾಗುತ್ತದೆ. ಕಣ್ಣು ಮುಚ್ಚಿ ಕಣ್ಣು ತಗೆಯೋದರೊಳಗಾಗಿ ಕಾರ್ ಗ್ಲಾಸ್ ಗಳನ್ನು ಒಡೆಯುತ್ತಿದ್ದ ಕಿಲಾಡಿಗಳು, ಕಾರ್ ನಲ್ಲಿದ್ದ ಬೆಲೆಬಾಳೋ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು (Kalaburagi Police).
ಹೌದು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಸೇರಿದಂತೆ ಇತರೆ ಕೆಲವಡೆ ಮೇಲಿಂದ ಮೇಲೆ ಕಾರ್ ಗಳಲ್ಲಿದ್ದ ವಸ್ತುಗಳು ಕಳ್ಳತನವಾಗುತ್ತಿದ್ದವು. ರಸ್ತೆ ಪಕ್ಕ ನಿಲ್ಲಿಸಿದ್ದ ಕಾರ್ ಗಳನ್ನೇ ಟಾರ್ಗೆಟ್ ಮಾಡ್ತಿದ್ದ ಕಳ್ಳರು, ಕಾರ್ ಗ್ಲಾಸ್ ಒಡೆದು ಕಳ್ಳತನ ಮಾಡ್ತಿದ್ದರು. ಈ ಬಗ್ಗೆ ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ಎರಡು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ತೆಗದುಕೊಂಡಿದ್ದ ಪೊಲೀಸರು, ಇದೀಗ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು, ತಮಿಳುನಾಡು ಮೂಲದ ಗೋಪಾಲ್ ಮತ್ತು ರಾಜಾರಾಮ್.
ಹೌದು ತಮಿಳುನಾಡು ರಾಜ್ಯದ ತಿರುಚ್ಚಿ ಜಿಲ್ಲೆಯ ಕಲ್ಲಿಕುಡಿ ನಿವಾಸಿಗಳಾಗಿದ್ದ ರಾಜಾರಾಮ್ ಮತ್ತು ಗೋಪಾಲನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾರಾಮ್ ಡ್ರೈವರ್ ಆಗಿದ್ದರೆ, ಗೋಪಾಲ್, ಕಂಪ್ಯೂಟರ್ ಸರ್ವಿಸ್ ಎಂಜಿನಿಯರ್ ಆಗಿದ್ದ. ಇಬ್ಬರು ಕೂಡಾ ದಿಢೀರನೆ ಶ್ರಿಮಂತರಾಗಬೇಕು ಅಂತ ಸಂಚು ಮಾಡಿದ್ದರು. ಆದ್ರೆ ತಮ್ಮದೇ ರಾಜ್ಯದಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ರೆ ಕಷ್ಟವಾಗುತ್ತದೆ. ಕುಟುಂಬದವರ ಮುಂದೆ ಮರ್ಯಾದೆ ಹೋಗುತ್ತದೆ ಅಂತ ತಿಳಿದು, ಬೇರೆ ಕೆಲಸದ ಮೇಲೆ ಹೊರಗಡೆ ಹೋಗ್ತೀವಿ ಅಂತ ಹೇಳಿ, ನೆರೆಯ ಕರ್ನಾಟಕಕ್ಕೆ ಬರ್ತಿದ್ದರು.
ರಾಜ್ಯದ ಕಲಬುರಗಿ, ರಾಯಚೂರು ಸೇರಿದಂತೆ ಅನೇಕ ನಗರಗಳಿಗೆ ಚೆನ್ನೈನಿಂದ ರೈಲಿನ ಮೂಲಕ ಬರ್ತಿದ್ದ ಕಿಲಾಡಿಗಳು, ಕಲಬುರಗಿ, ರಾಯಚೂರು, ಹುಬ್ಬಳ್ಳಿ ಸೇರಿದಂತೆ ಕೆಲವಡೇ ಇಳಿದು, ಅಮಾಯಕರಂತೆ ಓಡಾಡುತ್ತಿದ್ದರು. ಕಾರ್ ನಲ್ಲಿ ಯಾರಾದರೂ ಬೆಲೆಬಾಳುವ ವಸ್ತುಗಳನ್ನು ಇಟ್ಟು, ಹೋಟೆಲ್, ಮಾಲ್ ಗಳಿಗೆ ಹೋಗಿದ್ರೆ, ಬೇರೆ ಕೆಲಸದ ಮೇಲೆ ಸರ್ಕಾರಿ ಕಚೇರಿಗಳಿಗೆ ಹೋಗಿದ್ರೆ, ಇವರು ಅಮಾಯಕರಂತೆ ಓಡಾಡಿ, ಕಾರ್ ಗ್ಲಾಸ್ ಒಡೆದು ಬೆಲೆ ಬಾಳೋ ವಸ್ತುಗಳನ್ನು ಕಳ್ಳತನ ಮಾಡ್ತಿದ್ದರು. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೊಲೀಸರು ಗೋಪಾಲ್ ಮತ್ತು ರಾಜಾರಾಮ್ ನನ್ನು ಬಂಧಿಸಿದ್ದಾರೆ. ಇನ್ನು ಈ ಗ್ಯಾಂಗ್ ನಲ್ಲಿ ಇನ್ನೂ ಇಬ್ಬರು ಇದ್ದು, ಅವರು ನಾಪತ್ತೆಯಾಗಿದ್ದು, ಅವರಿಗಾಗಿ ಕೂಡಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತಮಿಳನಾಡು ಬಿಟ್ಟು ಕರ್ನಾಟಕಕ್ಕೆ ಬಂದು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ ಇಬ್ಬರ ಮೇಲೆ ರಾಜ್ಯದ ವಿವಿಧ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆಯಂತೆ. ಆದ್ರೆ ಯಾರ ಕೈಗೂ ಸಿಗದೇ ಯಾಮಾರಿಸುತ್ತಿದ್ದ ಖತರ್ನಾಕ್ ಕಿಲಾಡಿಗಳನ್ನು ಕಲಬುರಗಿ ಬ್ರಹ್ಮಪುರ ಪೊಲೀಸರು ಬಂಧಿಸುವುದರ ಜೊತೆಗೆ, ಕಳ್ಳರಿಂದ ಕಳ್ಳತನ ಮಾಡಿದ್ದ ಲ್ಯಾಪಟಾಪ್ ಸೇರಿದಂತೆ ಅನೇಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕಾರ್ ಮಾಲೀಕರು, ಕಾರ್ ಪಾರ್ಕ್ ಮಾಡಿ ಹೋಗುವಾಗ, ತಮ್ಮ ಜೊತೆ ಬೆಲೆಬಾಳೋ ವಸ್ತುಗಳನ್ನು ತಗೆದುಕೊಂಡು ಹೋಗುವುದು ಸೂಕ್ತ. ಇಲ್ಲದಿದ್ದರೆ, ಇಂತಹ ಕಿಲಾಡಿಗಳು ನಿಮ್ಮ ವಸ್ತುಗಳನ್ನು ಯಾಮಾರಿಸ್ತಾರೆ ಎಚ್ಚರ.
ವರದಿ: ಸಂಜಯ್, ಟಿವಿ 9, ಕಲಬುರಗಿ