AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಸ್ವತ ಲೋಕದ ಬಸವರಾಜಮರಿ ಖ್ಯಾತಿಯ ಡಾ.ಬಸವರಾಜಯ್ಯ ಇನಿಲ್ಲ

ಹೆಸರಾಂತ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ಡಾ.ಎಮ್.ಎಸ್.ಬಸವರಾಜಯ್ಯ (97) ಮೈಸೂರಿನಲ್ಲಿ ಬುಧವಾರ ಸಂಜೆ ನಿಧನರಾಗಿದ್ದಾರೆ. ಮೈಸೂರಿನ ಗುರುರಾಜ ಬಡಾವಣೆಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾರಸ್ವತ ಲೋಕದಲ್ಲಿ ‘ಬಸವರಾಜಮರಿ’ ಎಂದೇ ಖ್ಯಾತರಾಗಿದ್ದ ಶ್ರೀ ಯುತರು ಕನ್ನಡ ಮತ್ತು ಸಂಸ್ಕೃತದಲ್ಲಿ ಒಟ್ಟು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ 1981 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ‘ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿತ್ತು. 2014 ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ […]

ಸಾರಸ್ವತ ಲೋಕದ ಬಸವರಾಜಮರಿ ಖ್ಯಾತಿಯ ಡಾ.ಬಸವರಾಜಯ್ಯ ಇನಿಲ್ಲ
ಆಯೇಷಾ ಬಾನು
|

Updated on: Oct 08, 2020 | 6:48 AM

Share

ಹೆಸರಾಂತ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ಡಾ.ಎಮ್.ಎಸ್.ಬಸವರಾಜಯ್ಯ (97) ಮೈಸೂರಿನಲ್ಲಿ ಬುಧವಾರ ಸಂಜೆ ನಿಧನರಾಗಿದ್ದಾರೆ. ಮೈಸೂರಿನ ಗುರುರಾಜ ಬಡಾವಣೆಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾರಸ್ವತ ಲೋಕದಲ್ಲಿ ‘ಬಸವರಾಜಮರಿ’ ಎಂದೇ ಖ್ಯಾತರಾಗಿದ್ದ ಶ್ರೀ ಯುತರು ಕನ್ನಡ ಮತ್ತು ಸಂಸ್ಕೃತದಲ್ಲಿ ಒಟ್ಟು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಇವರ ಸೇವೆಯನ್ನು ಗುರುತಿಸಿ 1981 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ‘ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿತ್ತು. 2014 ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಮೂರೂವರೆ ದಶಕಗಳ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿದ್ದ ಶ್ರೀ ಯುತರು ಅಪಾರ ಶಿಷ್ಯ ವರ್ಗವನ್ನು ಸಂಪಾದಿಸಿದ್ದರು. ವೈದಿಕ, ಆಗಮಿಕ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಸಂಶೋಧಕರೆಂದು ಖ್ಯಾತಿ ಪಡೆದಿದ್ದರು.

ಮಹಾಕವಿ ಷಡಕ್ಷರದೇವನ ‘ಕವಿ ಕರ್ಣ ರಸಾಯನ’ ಮಹಾ ಕಾವ್ಯವನ್ನು ಸಂಪಾದನೆ ಮಾಡಿದ್ದರು. ವೀರಮಹೇಶ್ವರಾಚಾರ ಸಂಗ್ರಹ, ಸರ್ಪಭೂಷಣ ಶಿವಯೋಗಿಗಳ ‘ಭುಜಂಗಮಾಲಾ ಸಂಕೀರ್ತನಂ’ ಸ್ತೋತ್ರ ಕೃತಿಯನ್ನು ಕನ್ನಡ ಭಾವಾನುವಾದ ಸಹಿತ ಸಂಪಾದಿಸಿ ಪ್ರಕಟಿಸಿದ್ದರು. ಡಾ.ಬಸವರಾಜಯ್ಯನವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮಲಗೊಂಡನಹಳ್ಳಿಯವರು. ಇವರ ತಂದೆ ಶರಣ ದಿವಂಗತ ಸಿದ್ಧಬಸವಯ್ಯ, ತಾಯಿ ಶರಣೆ ದಿವಂಗತ ಚನ್ನವ್ವ. ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ. ದಿವಂಗತರ ಪತ್ನಿ ಶ್ರೀಮತಿ ಗೌರಮ್ಮನವರು 2014 ರಲ್ಲಿ ತೀರಿಕೊಂಡಿದ್ದರು.

ವಿದ್ವಾನ್ ದಿವಂಗತ ಎಂ.ಎಸ್.ಬಸವರಾಜಯ್ಯನವರ ಅಂತ್ಯಕ್ರಿಯೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಪುರಲೆಹಳ್ಳಿಯಲ್ಲಿ ಇಂದು ಸಂಜೆ ನಡೆಯಲಿದೆ. ಡಾ.ಬಸವರಾಜಯ್ಯನವರ ನಿಧನಕ್ಕೆ ಸುತ್ತೂರುಶ್ರೀಗಳು, ನೊಣವಿನಕೆರೆ ಮಠದ ಕರಿವೃಷಭೇಂದ್ರ ಸ್ವಾಮೀಜಿ, ವಿವಿಧ ಮಠಾಧೀಶರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.