Fact Check: ಚಿಕ್ಕೋಡಿಯಲ್ಲಿ ಬೀದಿ ದೀಪಗಳಿಗೆ ಪಾಕಿಸ್ತಾನ ಧ್ವಜ ಅಳವಡಿಸಿದ್ದು ನಿಜವೇ?: ಇಲ್ಲಿದೆ ಸತ್ಯಾಂಶ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ರಸ್ತೆ ವಿಭಜಕದಲ್ಲಿನ ಲೈಟ್ ಕಂಬದ ಮೇಲೆ ಪಾಕಿಸ್ತಾನ ಧ್ವಜವನ್ನು ಅಳವಡಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸುದ್ದಿ ನಿಜವೇ?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬೀದಿ ದೀಪಗಳಿಗೆ ಕೆಲವು ಧ್ವಜಗಳನ್ನು ಅಳವಡಿಸಿರುವುದನ್ನು ಕಾಣಬಹುದು. ಕರ್ನಾಟಕದ ಚಿಕ್ಕೋಡಿಯಲ್ಲಿನ ಬೀದಿ ದೀಪಗಳಲ್ಲಿ ಪಾಕಿಸ್ತಾನದ ಧ್ವಜಗಳನ್ನು ಅಳವಡಿಸಲಾಗಿದೆ ಎಂದು ವಿಡಿಯೋಕ್ಕೆ ಶೀರ್ಷಿಕೆ ನೋಡಿ ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ ಎಂದು ಟಿವಿ9 ಕನ್ನಡ ನಡೆಸಿದ ತನಿಖೆಯಲ್ಲಿ ಕಂಡುಕೊಂಡಿದೆ. ಈ ಧ್ವಜಗಳು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿವೆ, ಇದನ್ನು ಪಾಕಿಸ್ತಾನಿ ಧ್ವಜದ ಹೆಸರಿನಲ್ಲಿ ವೈರಲ್ ಮಾಡಲಾಗುತ್ತಿದೆ.
ವೈರಲ್ ಆಗುತ್ತಿರುವುದು ಏನು?
ಎಸ್ಎನ್ ಶರ್ಮಾ ಎಂಬ ಹೆಸರಿನ ಫೇಸ್‌ಬುಕ್ ಬಳಕೆದಾರರು ಸೆಪ್ಟೆಂಬರ್ 21 ರಂದು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ‘‘ಕರ್ನಾಟಕದ ಚಿಕ್ಕೋಡಿಯ ನೋಟ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಸರ್ಕಾರ ಎಲ್ಲಿದ್ದರೂ ಇದೇ ರೀತಿಯ ದೃಶ್ಯಗಳು ಕಂಡುಬರುತ್ತವೆ. ಈಗ ನಾವು ಏನು ಮಾಡಬೇಕು ಎಂಬುದು ಮುಖ್ಯ. ಇಡೀ ನಗರದಲ್ಲಿ ಪಾಕಿಸ್ತಾನದ ಧ್ವಜವು ಬಹಿರಂಗವಾಗಿ ಹಾಕಿದ್ದಾರೆ ಆದರೆ ಯಾರೂ ಮಾತನಾಡುತ್ತಿಲ್ಲ. ಸ್ವತಃ ಪಾಕಿಸ್ತಾನವು ಬೆಂಬಲಿತ ಪಕ್ಷವಾಗಿದೆ,’’ ಎಂದು ಬರೆದುಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
चिक्कोडी, कर्नाटक का नज़ारा जो भी #हिन्दू कांग्रेस को वोट देते हैं उनके लिए पाकिस्तानी और ISIS के झंडे की सलामी 🫡 अपने घर की बहू-बेटियों, बहनो और प्रॉपर्टी तैयार रखिएगा, जल्द ही मुस्लिम देश बना देगी ये पाकिस्तान परस्त कांग्रेस! खुलेआम सड़कों पर पाकिस्तानी झंडे फहराना और पुलिस, pic.twitter.com/jrFAt6XQ3R
— सच के साथ (@SacchekaBolbala) September 23, 2024
Fact Check:
ಈ ಹೇಳಿಕೆಯ ನಿಜಾಂಶವನ್ನು ತಿಳಿಯಲು ನಾವು ಮೊದಲು ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಜೂಮ್ ಮಾಡಿ ಸೂಕ್ಷ್ಮವಾಗಿ ಗಮನಿಸಿದ್ದೇವೆ. ಆಗ ಈ ಧ್ವಜ ಪಾಕಿಸ್ತಾನದ್ದಲ್ಲ ಬದಲಾಗಿ ಇದು ಇಸ್ಲಾಮಿಕ್ ಧ್ವಜ ಎಂಬುದು ತಿಳಿದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವ ಧ್ವಜವನ್ನು ಪಾಕಿಸ್ತಾನದ ರಾಷ್ಟ್ರಧ್ವಜದೊಂದಿಗೆ ಹೋಲಿಸಿದಾಗ, ಅದು ಪಾಕಿಸ್ತಾನದ ಧ್ವಜಕ್ಕಿಂತ ಸಾಕಷ್ಟು ಭಿನ್ನವಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಇಸ್ಲಾಮಿಕ್ ಧ್ವಜಕ್ಕೂ ಪಾಕಿಸ್ತಾನದ ಧ್ವಜಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಸ್ಲಾಮಿಕ್ ಧ್ವಜದ ಹಸಿರು ಮೇಲ್ಮೈಯಲ್ಲಿ ಚಂದ್ರ ಮತ್ತು ನಕ್ಷತ್ರವನ್ನು ಹೊಂದಿದ್ದರೆ, ಪಾಕಿಸ್ತಾನದ ಧ್ವಜವು ಚಂದ್ರ ಮತ್ತು ನಕ್ಷತ್ರದೊಂದಿಗೆ ಎಡಭಾಗದಲ್ಲಿ ಬಿಳಿ ಪಟ್ಟಿಯನ್ನು ಹೊಂದಿದೆ. ನೀವು ಪಾಕಿಸ್ತಾನದ ಧ್ವಜ ಮತ್ತು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಧ್ವಜಗಳನ್ನು ಕೆಳಗೆ ನೋಡಬಹುದು.
ಹೆಚ್ಚಿನ ದೃಢೀಕರಣಕ್ಕಾಗಿ ನಾವು ಬೆಳಗಾವಿ ರಿಪೋರ್ಟರ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ಹೇಳಿರುವ ಪ್ರಜಾರ ಚಿಕ್ಕೋಡಿಯಲ್ಲಿ ಪಾಕಿಸ್ತಾನ ಧ್ವಜ ಅಳವಡಿಸಿರುವ ಯಾವುದೇ ಘಟನೆ ನಡೆದಿಲ್ಲ. ಕೆಲವು ದಿನಗಳ ಹಿಂದೆ ಈದ್-ಮಿಲಾದ್ ಹಬ್ಬದ ಸಂದರ್ಭ ಪೊಲೀಸರ ಅನುಮತಿ ಪಡೆದು ಚಿಕ್ಕೋಡಿಯಲ್ಲಿ ಇಸ್ಲಾಮಿಕ್ ಧಾರ್ಮಿಕ ಧ್ವಜಗಳನ್ನು ಅಳವಡಿಸಲಾಗಿತ್ತು. ಇದು ಇಸ್ಲಾಮಿಕ್ ಧ್ವಜ, ಪಾಕಿಸ್ತಾನದ ಧ್ವಜ ಅಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಚಿಕ್ಕೋಡಿಯಲ್ಲಿ ಬೀದಿ ದೀಪಗಳಿಗೆ ಅಳವಡಿಸಿದ್ದು ಪಾಕಿಸ್ತಾನ ಧ್ವಜ ಅಲ್ಲ, ಅದು ಇಸ್ಲಾಮಿಕ್ ಧ್ವಜ ಎಂದು ನಾವು ಖಚಿತವಾಗಿ ಹೇಳಿತ್ತೇವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ