ಬೆಂಗಳೂರು: ವರ್ಷದಿಂದ ವರ್ಷಕ್ಕೆ ಕನ್ನಡ ಮಾಧ್ಯಮದಲ್ಲಿ ಕಲಿಯುವವರ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ರಾಷ್ಟ್ರೀಯ ಸಾಧನ ಸಮೀಕ್ಷೆ (National Achievement Survey) ವರದಿಯು ಹೇಳಿದೆ. ಈ ಬಗ್ಗೆ ನೆಟ್ಟಿಗರು ಭಾರೀ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೊಸ ಸಮೀಕ್ಷೆಯ ಬಗ್ಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಸಾಮಾಜಿಕ ಜಾಲತಾಣವಾದ ಕೂನಲ್ಲಿ (Koo App) #ಕನ್ನಡಮಾಧ್ಯಮಕಲಿಕೆ ಎಂಬ ಹ್ಯಾಷ್ ಟ್ಯಾಗ್ ಅಡಿ ತಮ್ಮ ಆತಂಕವನ್ನು ಬಿಚ್ಚಿಟ್ಟಿದ್ದಾರೆ.
‘ಕನ್ನಡ ಮಾಧ್ಯಮದಲ್ಲಿ ಕಲಿತರೆ ಉದ್ಯೋಗ ಪಡೆಯಲು ಕಷ್ಟ ಎಂಬ ಮಿಥ್ಯೆ ಮತ್ತು ಬದಲಾದ ದಿನಗಳಲ್ಲಿ ಆಂಗ್ಲ ಭಾಷೆಗೆ ಸಿಗುತ್ತಿರುವ ಅನಗತ್ಯ ಆದ್ಯತೆಯೇ ನಮ್ಮ ಮಾತೃ ಭಾಷೆಯ ಕಲಿಕೆಗೆ ಅಡ್ಡಿಯಾಗಿದೆ’ ಎಂದಿದ್ದಾರೆ ಗೋಪಾಲ್ ಕೆಂಪೇಗೌಡ.
‘ಕನ್ನಡ ಮಾಧ್ಯಮದಲ್ಲಿ ಕಲಿಸದೇ ಇರಲು ಕಾರಣಗಳಿವೆ. ಅದರಲ್ಲಿ ಬಹುಮುಖ್ಯವಾದದ್ದು ಮಗು ಇನ್ನೂ ಚಡ್ಡಿ ಹಾಕುವಾಗಲೇ ಮುಂದೆ ಕಾಲೇಜಿನಲ್ಲಿ ಇಂಗ್ಲೀಷ್ ಸಮಸ್ಯೆ ಆಗಬಾರದು ಎನ್ನುವ ಗಾಬರಿ! ಎರಡನೆಯದ್ದು ಪ್ರತಿಷ್ಠೆ! ಪ್ರತಿಷ್ಠೆಗಾಗಿ ಇಂಗ್ಲೀಷ್ನಲ್ಲಿ ಅದೇನು ಸಿಗುತ್ತೋ ಗೊತ್ತಿಲ್ಲ. ಆದರೆ ಕನ್ನಡ ಕಲಿಯದೆ ಮಿಕ್ಕೆಲ್ಲಾ ಭಾಷೆ ಅಚ್ಚುಕಟ್ಟಾಗಿ ಬರಲು ಸಾಧ್ಯವೇ ಇಲ್ಲ!’ ಎಂದು ವಾಹಿನಿ ಮಂಜರೇಕರ್ ಹೇಳಿದ್ದಾರೆ.
– Vahini Manjrekar (@HalfMen) 25 June 2022
‘ಕನ್ನಡದ ಅಸ್ಮಿತೆ, ಕನ್ನಡಿಗರೇ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ತಳ್ಳಿ ಕನ್ನಡ ಕಲಿಕೆಯಲ್ಲಿ ಹಿಂದೇಟು ಹಾಕುವಂತೆ ಮಾಡುತ್ತಿದ್ದಾರೆ. ಇತ್ತ ಕನ್ನಡವನ್ನೂ ಸರಿಯಾಗಿ ಕಲಿಯದೆ ಇಂಗ್ಲೀಷ್ ಕಲಿಕೆಗೂ ಒಗ್ಗಲಾರದೆ ಮಕ್ಕಳು ಪರಿತಪಿಸುವುದು ಯಾರಿಗೂ ತಿಳಿಯದ ವಿಷಯವಲ್ಲ’ ಎಂದು ದಿವ್ಯಾ ರಾಮಕೃಷ್ಣ ಎನ್ನುವವರು ಬರೆದುಕೊಂಡಿದ್ದಾರೆ.
‘ಕನ್ನಡ ಕಡ್ಡಾಯವಾಗದಿದ್ದರೆ ಕನ್ನಡಿಗರ ಮಕ್ಕಳು ಕನ್ನಡವನ್ನು ಹೊರತುಪಡಿಸಿ ಮತ್ತೆಲ್ಲ ಭಾಷೆಗಳನ್ನು ಕಲಿತು ಕನ್ನಡವನ್ನೇ ಮರೆಯುವ ಪರಿಸ್ಥತಿ ಎದುರಾಗಲಿದೆ.’ ಎಂದು ಚಂದ್ರಿಕಾ ಹೆಗಡೆ ಅವರು ಭವಿಷ್ಯದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
‘ಸರ್ಕಾರಿ ಶಾಲೆಗಳು ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುವುದರಲ್ಲಿ ಸಫಲರಾಗಿವೆ, ಕಾಲಮಾನದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ವಿಫಲವಾಗಿವೆ. ಪ್ರೈವೇಟ್ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬ್ಯುಸಿನೆಸ್ ಮಾಡಲು ಮುಂದಾಗುತ್ತವಾ? ಮಠ ಮಾನ್ಯಗಳು ಮಾಡಬಹುದು, ಅವುಗಳು ಮಾಡುವುದು ಬ್ಯುಸಿನೆಸ್ ಅಲ್ಲವಲ್ಲ.. ಆ ಕಾರಣಕ್ಕೆ’ ಎಂದು ವೀರೇಶ್ ಕೂ ಮಾಡಿದ್ದಾರೆ.
– Myself Mr.Kannadiga (@VeereshBM) 25 June 2022
‘ಉದ್ಯೋಗದ ಕೊರತೆ, ಕನ್ನಡ ಅನ್ನದ ಭಾಷೆಯಾಗಿಲ್ಲ ಎನ್ನುವ ಕೂಗು. ಕನ್ನಡದಲ್ಲಿ ಅನ್ನ ಉಣ್ಣುವ ಜನರೇ ಇಲ್ಲದಿರುವ ಪ್ರಸಂಗ ಬರುವ ಮುಂಚೆ ಕನ್ನಡದಿಂದ ಹಿಡಿದು ಬಡಿದಾಡಿ ತಿನ್ನಲು ಸಜ್ಜಾಗಿರುವ ಕ್ಷೇತ್ರಕ್ಕೆ ಸರ್ಕಾರ, ಉದ್ಯಮ ನೆರವಾಗಬೇಕು’ ಎಂದು ಸಂಧ್ಯಾ ಎನ್ನುವವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಪ್ರಮಾಣ ಕಡಿಮೆಯಾಗಲು ಕಾರಣವೇನೆಂಬ ಬಗ್ಗೆ ಚರ್ಚೆಗಳು ಮುಂದುವರೆದಿದೆ.
Published On - 2:27 pm, Sat, 25 June 22