ಕರಾವಳಿಯಲ್ಲಿ ಜೋರಾಯ್ತು ಕಾಂತಾರ ವರ್ಸಸ್ ದೈವಾರಾಧಕರ ಫೈಟ್: ದೈವದ ನುಡಿ ಬಗ್ಗೆ ಅಪಹಾಸ್ಯ!

ಕಾಂತಾರ: ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ಜನರ ಮೆಚ್ಚುಗೆಯೊಂದಿಗೆ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆ ಕರಾವಳಿಯಲ್ಲಿ ದೈವಾರಾಧನೆ ಕುರಿತು ತೀವ್ರ ವಿವಾದ ಭುಗಿಲೆದ್ದಿದೆ. ದೈವದ ನುಡಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದ್ದು, ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಕಾಂತಾರ ಸಿನಿಮಾಗೆ ದೈವ ಅನುಮತಿ ನೀಡಿತ್ತಾ ಎಂಬ ಹೊಸ ಚರ್ಚೆಗಳು ಸಂಚಲನ ಮೂಡಿಸಿವೆ.

ಕರಾವಳಿಯಲ್ಲಿ ಜೋರಾಯ್ತು ಕಾಂತಾರ ವರ್ಸಸ್ ದೈವಾರಾಧಕರ ಫೈಟ್: ದೈವದ ನುಡಿ ಬಗ್ಗೆ ಅಪಹಾಸ್ಯ!
ದೈವದ ನುಡಿ ಬಗ್ಗೆ ಅಪಹಾಸ್ಯ
Updated By: ಗಂಗಾಧರ​ ಬ. ಸಾಬೋಜಿ

Updated on: Oct 10, 2025 | 5:57 PM

ಬೆಂಗಳೂರು, ಅಕ್ಟೋಬರ್​ 10: ಕಾಂತಾರ: ಚಾಪ್ಟರ್ 1 (Kantara: Chapter-1) ಸಿನಿಮಾ ಬಿಡುಗಡೆ ಬೆನ್ನಲ್ಲೇ ಕರಾವಳಿಯಲ್ಲಿ ಪರ-ವಿರೋಧ ಸಂಘರ್ಷ ತಾರಕಕ್ಕೇರಿದೆ‌. ಕಾಂತಾರದಲ್ಲಿ ದೈವಾರಾಧನೆ ದೃಶ್ಯಗಳ ಅನುಕರಣೆ ಮತ್ತೊಂದು ಹಂತದ ಗಲಾಟೆಗೆ ಕಾರಣವಾಗಿದೆ. ಈ ಮಧ್ಯೆ ತುಳುನಾಡು (Tulu Nadu) ದೈವಗಳ ನುಡಿಗಳ ಬಗ್ಗೆಯೇ ಅಪಹಾಸ್ಯ ಮಾಡಲಾಗುತ್ತಿದ್ದು, ಇದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕಾಂತಾರ ಸಿನಿಮಾಗೆ ದೈವ ಅನುಮತಿ ನೀಡಿತ್ತಾ ಎನ್ನುವ ಹೊಸ ಚರ್ಚೆಗಳು ಸಂಚಲನ ಮೂಡಿಸುತ್ತಿವೆ.

ಕಾಂತಾರ ಸಿನಿಮಾ ಜಾಗತಿಕವಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ಇತಿಹಾಸ ಬರೆದಿದೆ. ಸದ್ಯ ಕಾಂತಾರ: ಚಾಪ್ಟರ್ 1 ಸಿನಿಮಾ ಕೂಡ ಕೋಟ್ಯಂತರ ರೂ. ಗಳಿಕೆಯ ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಈ ನಡುವೆ ಕಾಂತಾರ ಸಿನಿಮಾ ಕರಾವಳಿ ಭಾಗದಲ್ಲಿ ಹೊಸ ವಿವಾದ ಎಬ್ಬಿಸಿದ್ದು, ಪರ-ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿಯಾಗಿದೆ.

ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ? ಸೋಶಿಯಲ್ ಮೀಡಿಯಾದಲ್ಲಿ ಅಪಹಾಸ್ಯ

ನಿನ್ನೆಯಷ್ಟೇ ಕಾಂತಾರ ಸಿನಿಮಾ ಹಾಗೂ ಅವುಗಳ ಅನುಕರಣೆ ವಿರುದ್ದ ದೈವಾರಾಧಕರು ದೈವಕ್ಕೆ ದೂರು ನೀಡಿದ್ದರು‌. ಈ ವೇಳೆ ಪಿಲಿಚಂಡಿ ದೈವ ದೈವಾರಾಧಕರ ಹೋರಾಟಕ್ಕೆ ಅಭಯ ನೀಡಿತ್ತು. ಆದರೆ ಇದೀಗ ಪಿಲಿಚಂಡಿ ದೈವದ ನುಡಿಯ ಬಗ್ಗೆಯೇ ಅಪಹಾಸ್ಯ ಮಾಡಲಾಗುತ್ತಿದೆ. ಕಾಂತಾರ ಸಿನಿಮಾದ ಡೈಲಾಗ್ ಬಳಸಿ ದೈವ ನುಡಿ ವಿರುದ್ದ ವ್ಯಂಗ್ಯ ಮಾಡಲಾಗುತ್ತಿದ್ದು, ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ? ಎಂದು ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯ ಎಸಗಲಾಗಿದೆ.

ಇದನ್ನೂ ಓದಿ: ನನ್ನ ಹೆಸರಿನಲ್ಲಿ ಹಣ ಮಾಡ್ತಿರುವವರನ್ನು ನೋಡ್ತೇನೆ, ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ: ದೈವದ ನುಡಿ

ಸಾಮಾಜಿಕ ತಾಣಗಳಲ್ಲಿ ಕಾಂತಾರ ಫ್ಯಾನ್ಸ್ ವರ್ಸಸ್ ದೈವಾರಾಧಕರ ವಾರ್ ಜೋರಾಗಿದೆ‌‌. ನಿನ್ನೆ ಪ್ರಾರ್ಥನೆ ಸಲ್ಲಿಸಿದ್ದ ದೈವಾರಾಧಕರಿಗೆ ಅಭಯ ನೀಡಿದ್ದ ಬಜಪೆಯ ಪೆರಾರದ ಪಿಲ್ಚಂಡಿ ದೈವ, ‘ಹುಚ್ಚು ಕಟ್ಟಿದವರನ್ನ ಹುಚ್ಚು ಹಿಡಿಸುತ್ತೇನೆ’ ಎಂದು ದೈವ ನುಡಿ ಕೊಟ್ಟಿತ್ತು. ‘ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನ ಆಸ್ಪತ್ರೆಗೆ ಸುರಿಸುತ್ತೇನೆ’ ಎಂದು ಪಿಲ್ಚಂಡಿ ದೈವದ ನುಡಿಯಾಗಿತ್ತು. ಈ ದೈವ ನುಡಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ.

ದೈವ ಕೊಟ್ಟಿದ್ದು ಎಚ್ಚರಿಕೆಯಾ, ಅನುಮತಿಯಾ?

ಇನ್ನು ಕಾಂತಾರ ಹಾಗೂ ರಿಷಬ್ ಶೆಟ್ಟಿ ಪರ ಪೋಸ್ಟ್ ಮಾಡುತ್ತಿರುವ ಹಲವರು, ರಿಷಬ್ ಕೂಡ ದೈವದ ಬಳಿಯೇ ಕೇಳಿ ಸಿನಿಮಾ ಮಾಡಿದ್ದು ಅಂತ ವಾದಿಸಿದ್ದಾರೆ‌‌. ದೈವದ ಒಪ್ಪಿಗೆ ಪಡೆದೇ ರಿಷಬ್ ಸಿನಿಮಾ ಮಾಡಿದ್ದಾರೆ ಎಂದಿದ್ದಾರೆ‌. ಆದರೆ ಕಾಂತಾರ ಭಾಗ ಎರಡಕ್ಕೆ ದೈವ ಕೊಟ್ಟಿದ್ದು ಎಚ್ಚರಿಕೆಯಾ? ಅನುಮತಿಯಾ? ಎಂಬ ಹೊಸ ಚರ್ಚೆ ಸಂಚಲನ ಮೂಡಿಸಿದೆ‌.

2022ರಲ್ಲೇ ಕಾಂತಾರ ಮತ್ತೊಂದು ಸಿನಿಮಾ ಮಾಡಲು ದೈವದ ಅನುಮತಿ ಕೇಳಿದ್ದ ರಿಷಬ್, ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟು ಅಣ್ಣಪ್ಪ ಪಂಜುರ್ಲಿ ದೈವದ ನರ್ತನ ಸೇವೆಗೆ ಬಂದಿದ್ದರು‌. ಈ ವೇಳೆ ಎಚ್ಚರಿಕೆ ಮಾದರಿಯಲ್ಲಿ ಮಾರ್ಮಿಕವಾಗಿ ನುಡಿದಿದ್ದ ದೈವ ಕಾಂತಾರ 2 ಮಾಡುವ ಮೊದಲು ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಲು ಸೂಚಿಸಿತ್ತು. ‌ಕಾಂತಾರ ಮೊದಲ ಭಾಗದ ಹರಕೆ ನೇಮ ಸಲ್ಲಿಸಲು ಬಂದಿದ್ದ ವೇಳೆ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ: ಅಪವಾದ, ಅವಘಡ: ರಿಷಬ್​ಗೆ ಮೊದಲೇ ಎಚ್ಚರಿಸಿದ್ದ ದೈವ

ಬಹಳ ಆಲೋಚನೆಯಲ್ಲಿ ಮುಂದಿನ ಸಿನಿಮಾ ಮಾಡಿ ಅಂತ ದೈವದ ಸೂಚನೆ ನೀಡಿದ್ದ ದೈವ, ಮೊದಲ ಚಿತ್ರದಲ್ಲಿ ಒಳ್ಳೆಯದು ಆಗಿದೆ, ಅಪವಾದವೂ ಬಂದಿದೆ. ಹತ್ತು ಹೆಜ್ಜೆ ಇಟ್ಟು ಆ ಸಿನಿಮಾ ‌ಮಾಡಿದ್ದೀರಿ, ಇದಕ್ಕೆ ನೂರು ಹೆಜ್ಜೆ ಇಡಿ ಅಂತ ದೈವ ನುಡಿದಿತ್ತು. ಆಚಾರ ವಿಚಾರದಲ್ಲಿ ಹೋಗಲು ದೈವದ ನುಡಿ ಕೊಡಲಾಗಿತ್ತು. ಆ ಬಳಿಕ ಕಾಂತಾರ 2 ಮಾಡುವ ಮುನ್ನ ವೀರೇಂದ್ರ ಹೆಗ್ಗಡೆ ಭೇಟಿಯಾಗಿದ್ದ ನಟ ರಿಷಬ್ ಶೆಟ್ಟಿ ಬಳಿಕ ಕಾಂತಾರ ಭಾಗ ಎರಡು ಆರಂಭಿಸಿದ್ದರು.‌ ಎರಡನೇ ಭಾಗದ ಚಿತ್ರೀಕರಣ ವೇಳೆ ಸಹ ಕಲಾವಿದರ ಸಾವು, ಅಪಘಾತ ಹಾಗೂ ಸೆಟ್​​ನಲ್ಲಿ ಅವಘಡದಂತ ಘಟನೆಗಳು ಕೂಡ ನಡೆದಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.