ಕಾರಣಿಕ ದೈವ ಕೊರಗಜ್ಜನಿಗೆ ಖಾಸಿಂ ಸಾಹೇಬರ ಪೂಜೆ; 19 ವರ್ಷಗಳಿಂದ ಧಾರ್ಮಿಕ ಸಾಮರಸ್ಯ ಮೆರೆದ ಕೇರಳ ಮೂಲದ ವ್ಯಕ್ತಿ

| Updated By: guruganesh bhat

Updated on: Apr 09, 2021 | 1:04 PM

Koragajja: ಕೇರಳದ ಪಾಲಕ್ಕಾಡ್‌ ಜಿಲ್ಲೆಯವರಾದ ಖಾಸಿಂ ಇಲ್ಲಿಗೆ 35 ವರ್ಷದ ಹಿಂದೆ ಬಂದಿದ್ದು, ಕಳೆದ 19 ವರ್ಷಗಳ ಹಿಂದಿನಿಂದಲೂ ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜೆ ಮಾಡಿಕೊಂಡು ಬಂದಿದ್ದಾರೆ.

ಕಾರಣಿಕ ದೈವ ಕೊರಗಜ್ಜನಿಗೆ ಖಾಸಿಂ ಸಾಹೇಬರ ಪೂಜೆ; 19 ವರ್ಷಗಳಿಂದ ಧಾರ್ಮಿಕ ಸಾಮರಸ್ಯ ಮೆರೆದ ಕೇರಳ ಮೂಲದ ವ್ಯಕ್ತಿ
ಕಾರಣಿಕ ದೈವ ಕೊರಗಜ್ಜ
Follow us on

ದಕ್ಷಿಣ ಕನ್ನಡ: ಸ್ವಾಮಿ ಕೊರಗಜ್ಜ ತುಳುನಾಡಿನ ಆರಾಧ್ಯ ಹಾಗೂ ಕಾರಣಿಕ ದೈವವೆಂದೇ ಪ್ರಸಿದ್ಧಿ. ದೈವ ದೇವರಿಗೆ ಜಾತಿ ಧರ್ಮದ ಬೇಧ ಇಲ್ಲದಿದ್ದರೂ ಹಿಂದಿನಿಂದಲೂ ಕೆಲವು ನಿಯಮಗಳನ್ನು ಪಾಲಿಸಲಾಗುತ್ತಿದೆ. ಇತ್ತೀಚೆಗಷ್ಟೇ ಕಡಲನಗರಿ ಮಂಗಳೂರಿನಲ್ಲಿ ದೈವಸ್ಥಾನಗಳನ್ನು ಅನ್ಯ ಧರ್ಮೀಯ ದುಷ್ಕರ್ಮಿಗಳು ಅಪವಿತ್ರಗೊಳಿಸಿದ ಘಟನೆ ನಡೆದಿತ್ತು. ಆದರೆ ಇಲ್ಲೊಬ್ಬರು ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವರು ಇದಕ್ಕೆ ತದ್ವಿರುದ್ಧ ಎನ್ನುವಂತೆ ದೈವಗಳನ್ನು ಪೂಜಿಸಿಕೊಂಡು ಧಾರ್ಮಿಕ ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ.

ಮಂಗಳೂರು ಹೊರವಲಯದ ಮುಲ್ಕಿಯ ಬಳ್ಕುಂಜೆ ಗ್ರಾಮದ ಕವತ್ತಾರು ಎಂಬಲ್ಲಿ ಸುಮಾರು 19 ವರ್ಷಗಳಿಂದ 65ರ ಹರೆಯದ ಪಿ.ಖಾಸಿಂ ಸಾಹೇಬ್‌ ಎಂಬುವವರು ಕೊರಗಜ್ಜ ಹಾಗೂ ಪರಿವಾರ ದೈವಗಳನ್ನು ಸದ್ದಿಲ್ಲದೆ ಪೂಜಿಸಿಕೊಂಡು ಬರುತ್ತಿದ್ದಾರೆ. ಕೇರಳದ ಪಾಲಕ್ಕಾಡ್‌ ಜಿಲ್ಲೆಯವರಾದ ಖಾಸಿಂ ಅವರು ಇಲ್ಲಿಗೆ 35 ವರ್ಷದ ಹಿಂದೆ ಬಂದಿದ್ದು, ಕಳೆದ 19 ವರ್ಷಗಳ ಹಿಂದಿನಿಂದಲೂ ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜೆ ಮಾಡಿಕೊಂಡು ಬಂದಿದ್ದಾರೆ.

ಜೋಪಡಿ ಕಟ್ಟಿಕೊಂಡು ಪತ್ನಿ ಹಾಗೂ ಐವರು ಮಕ್ಕಳ ಜತೆ ಸಂಸಾರ ಆರಂಭಿಸಿದ್ದೆ. ಸ್ವಲ್ಪ ಸಮಯದ ನಂತರ ಕುಟುಂಬದಲ್ಲಿ ಸಮಸ್ಯೆಗಳು ಎದುರಾದವು. ಕೇರಳಕ್ಕೆ ಹೋಗಿ ಸಮಸ್ಯೆ ಹೇಳಿದಾಗ, ಜಾಗದಲ್ಲಿ ಸಮಸ್ಯೆ ಇದೆ ಎಂದು ಗೊತ್ತಾಯಿತು. ಇಲ್ಲಿಗೆ ಬಂದಾಗ ಅದು ಕೊರಗಜ್ಜನ ನೆಲೆ. ಒಂದೋ ಕೊರಗಜ್ಜನನ್ನು ನಂಬಬೇಕು, ಇಲ್ಲವೇ ಜಾಗ ಖಾಲಿ ಮಾಡಬೇಕು ಎಂದು ದರ್ಶನ ಪಾತ್ರಿ ಹೇಳಿದ್ದರು. ಹೀಗಾಗಿ ಕೊರಗಜ್ಜನನ್ನು ನಂಬಲು ಆರಂಭಿಸಿದೆ ಎಂದು ಖಾಸಿಂ ಸಾಹೇಬ್‌ ಅವರು ಹೇಳುತ್ತಾರೆ.

ಕಾರಣಿಕ ದೈವ ಕೊರಗಜ್ಜನಿಗೆ ಕಾಸಿಂ ಸಾಹೇಬರಿಂದ ಪೂಜೆ

ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತಾರೆ. ನಿತ್ಯ ದೀಪ ಸೇವೆ, ಸಂಕ್ರಾಂತಿಯಂದು ಸಲ್ಲಿಸುವ ಪೂಜೆ, 2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆಯನ್ನು ಕೂಡ ಖಾಸಿಂ ಸಾಹೇಬರು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.

ಈ ಕೊರಗಜ್ಜನ ಸನ್ನಿಧಾನಕ್ಕೆ ಯಾವುದೇ ಧರ್ಮ ಭೇದವಿಲ್ಲದೆ ಭಕ್ತರು ಆಗಮಿಸಿ ಹರಕೆ ಸಲ್ಲಿಸುತ್ತಾರೆ. ಪ್ರಾರಂಭದಲ್ಲಿ ಖಾಸಿಂ ಸಾಹೇಬರ ಈ ಆರಾಧನೆಗೆ ಒಂದಷ್ಟು ಮಂದಿ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಖಾಸಿಂ ಸಾಹೇಬ್‌ ಪೂಜೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಒಟ್ಟಿನಲ್ಲಿ ಕೋಮು ಸೌಹಾರ್ದತೆ ಕರಾವಳಿಯಲ್ಲಿ ಇನ್ನೂ ಜೀವಂತವಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ.

ಇದನ್ನೂ ಓದಿ: 

ಕರಾವಳಿಯ ಶಕ್ತಿದೇವತೆ ಕೊರಗಜ್ಜನ ಪರಮ ಭಕ್ತ ಕೇರಳದ ಈ ಮುಸ್ಲಿಂ ವ್ಯಕ್ತಿ; ಮನೆಯ ಬಳಿಯೇ ಗುಡಿ ಕಟ್ಟಿದ್ದಾರೆ..

ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್​ ಹಾಕಿ ಅಪಚಾರ; ಕೃತ್ಯ ಎಸಗಿದವರಿಗೆ ಎದುರಾಯಿತು ಸಂಕಷ್ಟ

( Karanika Koragajja worshiped by A Muslim Khasim Saheb in Mulki Of Mangalore since last 19 years )