ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ಅಪಚಾರ; ಕೃತ್ಯ ಎಸಗಿದವರಿಗೆ ಎದುರಾಯಿತು ಸಂಕಷ್ಟ
ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್ ಹಾಗೂ ಇವರ ಸ್ನೇಹಿತ ನವಾಝ್ ಸೇರಿ ಮಂಗಳೂರಿನ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಅಪಚಾರ ಎಸಗುತ್ತಿದ್ದರು. ಈ ಬಗ್ಗೆ ಮಂಗಳೂರಿನ ಉಳ್ಳಾಲ, ಪಾಂಡೇಶ್ವರ, ಕದ್ರಿ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿತ್ತು.
ದಕ್ಷಿಣ ಕನ್ನಡ: ಕರಾವಳಿ ಜಿಲ್ಲೆ ಎಂದರೆ ಭೂತರಾಧನೆಯ ತವರು ಎನ್ನುವಷ್ಟರಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಜನ ದೇವರನ್ನು ಭಕ್ತಿಯಿಂದ ಪೂಜೆ ಮಾಡುತ್ತಾರೆ ಮತ್ತು ದೈವಗಳ ಆರಾಧನೆಯನ್ನು ಭಯ ಭಕ್ತಿಯಿಂದ ಮಾಡುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಮಂಗಳೂರು ನಗರ ಭಾಗದಲ್ಲೇ ಕೆಲ ಸಮಯದಿಂದ ದುಷ್ಕರ್ಮಿಗಳು ದೈವಸ್ಥಾನಕ್ಕೆ ಅಪಚಾರ ಎಸಗುತ್ತಿದ್ದರು. ದೈವಸ್ಥಾನಗಳ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹಗಳ ಚೀಟಿ ಹಾಕಿ ಅಪವಿತ್ರಗೊಳಿಸುತ್ತಿದ್ದರು. ಈ ರೀತಿ ದುಷ್ಕೃತ್ಯ ಎಸಗಿದ ತಂಡ ಇದೀಗ ಸಂಕಷ್ಟಕ್ಕೆ ಒಳಗಾಗಿ ದೈವಗಳಿಗೆ ಶರಣಾಗಿದೆ. ತಂಡದ ಓರ್ವ ವ್ಯಕ್ತಿ ರಕ್ತಕಾರಿ ಸಾವನ್ನಪ್ಪಿದ ಬಳಿಕ ದೈವಗಳಿಗೆ ತಪ್ಪು ಕಾಣಿಕೆ ಹಾಕಲು ಬಂದು ಪೊಲೀಸ್ ಬಲೆಗೆ ಬಿದ್ದಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹೇಳಿದ್ದಾರೆ.
ಸದ್ಯ ಇಬ್ಬರು ಪೊಲೀಸ್ ಬಲೆಗೆ ಬಿದ್ದಿದ್ದು, ಬಂಧಿತರನ್ನು ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಸಹ ಮಂಗಳೂರು ಹೊರವಲಯದ ಜೋಕಟ್ಟೆ ನಿವಾಸಿಗಳು. ಇವರಿಬ್ಬರು ಹಾಗೂ ಇವರ ಸ್ನೇಹಿತ ನವಾಝ್ ಸೇರಿ ಮಂಗಳೂರಿನ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಅಪಚಾರ ಎಸಗುತ್ತಿದ್ದರು. ಈ ಬಗ್ಗೆ ಮಂಗಳೂರಿನ ಉಳ್ಳಾಲ, ಪಾಂಡೇಶ್ವರ, ಕದ್ರಿ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ನಡೆಸಿದ ನಮಗೆ ಆರೋಪಿಗಳ ಯಾವುದೇ ಸುಳಿವು ಸಿಕ್ಕಿರಲಿಲ್ಲ ಎಂದು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ದುಬೈಯಿಂದ ಆಗಮಿಸಿದ ನವಾಝ್ ತನ್ನನ್ನು ಮಂತ್ರವಾದಿ ಎಂಬಂತೆ ಬಿಂಬಿಸಿಕೊಂಡಿದ್ದ. ಆದರೆ ಈ ಕೃತ್ಯ ಎಸಗಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದು, ರಕ್ತವಾಂತಿ, ಭೇದಿಯಿಂದ ಕಂಗೆಟ್ಟಿದ್ದ. ಈ ಸಂದರ್ಭ ತಾನು ಕಾರಣಿಕ ದೈವ ಕೊರಗಜ್ಜನ ಶಾಪಕ್ಕೆ ಗುರಿಯಾಗಿರುವುದಾಗಿ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್ರಲ್ಲಿ ಹೇಳಿಕೊಂಡಿದ್ದ. ಇದಾದ ಕೆಲ ತಿಂಗಳ ಹಿಂದಷ್ಟೇ ರಕ್ತಕಾರಿ ನವಾಝ್ ಸಾವನ್ನಪ್ಪಿದ್ದಾನೆ ಎಂದು ತನಿಖೆ ಬಳಿಕ ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹೇಳಿದ್ದಾರೆ.
ಇಲ್ಲಿನ ಕೊರಗಜ್ಜ ದೇವಾಲಯಕ್ಕೆ ಜಾತಿ ಧರ್ಮ ಬಿಟ್ಟು ಬಹಳಷ್ಟು ವರ್ಷಗಳಿಂದ ಈ ಭಾಗದ ಜನ ಆರಾಧನೆ ನಡೆಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಈ ಕೊರಗಜ್ಜ ದೇವರ ಹುಂಡಿಯನ್ನು ತೆಗೆದು ನೋಡಿದಾಗ ಅಹಿತಕರ ವಸ್ತುಗಳು ಅಂದರೆ ಕಾಂಡೋಮ್ ಮತ್ತು ಕೆಲವು ಬರವಣಿಗೆ ಪತ್ತೆಯಾಗಿದೆ. ಈ ಸಂಬಂಧ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಬುಧವಾರ ಎಮ್ಮೆಕೆರೆ ಕ್ಷೇತ್ರದಲ್ಲಿ ಇಬ್ಬರೂ ವ್ಯಕ್ತಿ ತಪ್ಪು ಒಪ್ಪಿಗೆಗೆ ಬಂದಿರುವ ವಿಚಾರ ತಿಳಿದಿದೆ. ಈ ಸಂದರ್ಭದಲ್ಲಿ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್ ಬಂಧಿಸಲಾಗಿದೆ. ಇಬ್ಬರೂ ವಿಚಾರಣೆ ವೇಳೆ ಈ ಕೃತ್ಯವನ್ನು ತಾವೇ ಮಾಡಿರುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹೇಳಿದ್ದಾರೆ.
ಕೊರಗಜ್ಜನ ಕೋಲದ ವೇಳೆ ಬುಧವಾರ ತಪ್ಪು ಕಾಣಿಕೆ ಹಾಕಲು ಇಬ್ಬರು ಬಂದಿದ್ದರು. ಆಗ ಅವರ ಅಸಭ್ಯ ವರ್ತನೆ ಬೆಳಕಿಗೆ ಬಂದಿದೆ. ಈ ಮುಂಚೆ ದೇವರ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾದಾಗ ನಾವು ತಾಳ್ಮೆಯಿಂದ ಪೊಲೀಸರ ಮೇಲೆ ನಂಬಿಕೆ ಇಟ್ಟು ದೇವರ ಮೊರೆ ಹೋದೆವು. ಈಗ ಇಬ್ಬರೂ ಪೊಲೀಸರ ವಶದಲ್ಲಿ ಇದ್ದಾರೆ ಎಂದು ಎಮ್ಮೆಕೆರೆ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಅರ್ಚಕರು ನಾಗರಾಜ್ ಆಚಾರ್ಯ ತಿಳಿಸಿದ್ದಾರೆ.
ನವಾಝ್ ಸಾವನ್ನಪ್ಪಿದ ಬಳಿಕ ತೌಫಿಕ್‌ಗೂ ಇದೇ ರೀತಿ ಅನಾರೋಗ್ಯ ಕಾಡಿತ್ತು. ಇದರಿಂದ ಕಂಗೆಟ್ಟ ತೌಫಿಕ್ ಮತ್ತು ರಹೀಂ ಚಾಮುಂಡಿ ದೈವದಲ್ಲಿ ಪ್ರಶ್ನೆ ಕೇಳಿದ್ದರು. ಈ ಸಂದರ್ಭ ಎಮ್ಮೆಕೆರೆ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವಂತೆ ತಿಳಿಸಲಾಗಿತ್ತು. ಅದರಂತೆ ಇಬ್ಬರೂ ಕೃತ್ಯ ಎಸಗಿದ್ದ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಬಂದು ಕೊರಗಜ್ಜನ ಮುಂದೆಯೇ ತಪ್ಪು ಕಾಣಿಕೆ ಹಾಕಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹೇಳಿದ್ದಾರೆ.
ಸದ್ಯ ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನವಾಝ್ ನಮ್ಮನ್ನು ಈ ಕೃತ್ಯ ಮಾಡಲು ಕರೆದುಕೊಂಡು ಹೋಗುತ್ತಿದ್ದ ಎಂಬುದನ್ನು ಇಬ್ಬರು ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಟಿವಿ9 ಡಿಜಿಟಲ್ಗೆ ಮಾಹಿತಿ ನೀಡಿದ್ದಾರೆ.
(ವರದಿ: ಪೃಥ್ವಿರಾಜ್ ಬೊಮ್ಮನಕೆರೆ- 9980914133)
ಇದನ್ನೂ ಓದಿ: ಲುಂಗಿ ಡ್ಯಾನ್ಸ್ ಹಾಡಿಗೆ ಸ್ಟೆಪ್ ಹಾಕಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್; ವಿಡಿಯೋ ವೈರಲ್
(Mangalore police arrested two who put condoms in temple hundi )