ಕರಾವಳಿಯ ಶಕ್ತಿದೇವತೆ ಕೊರಗಜ್ಜನ ಪರಮ ಭಕ್ತ ಕೇರಳದ ಈ ಮುಸ್ಲಿಂ ವ್ಯಕ್ತಿ; ಮನೆಯ ಬಳಿಯೇ ಗುಡಿ ಕಟ್ಟಿದ್ದಾರೆ..

ಖಾಸಿಂ ಸಾಹಿಬ್​ ಅವರೇ ದೇವಸ್ಥಾನದ ಅರ್ಚಕರಾಗಿದ್ದು, ಯಾರಾದರೂ ಸಮಸ್ಯೆಯನ್ನು ಹೊತ್ತು ಬಂದರೆ ಅದನ್ನು ಆಲಿಸಿ, ಪರಿಹಾರ ಕೊಡುತ್ತಾರೆ. ಕೊರಗಜ್ಜನ ಪ್ರಸಾದವೆಂದು ಗಂಧವನ್ನು ಕೊಟ್ಟುಕೊಳಿಸುತ್ತಾರೆ.

  • TV9 Web Team
  • Published On - 13:18 PM, 4 Apr 2021
ಕರಾವಳಿಯ ಶಕ್ತಿದೇವತೆ ಕೊರಗಜ್ಜನ ಪರಮ ಭಕ್ತ ಕೇರಳದ ಈ ಮುಸ್ಲಿಂ ವ್ಯಕ್ತಿ; ಮನೆಯ ಬಳಿಯೇ ಗುಡಿ ಕಟ್ಟಿದ್ದಾರೆ..
ಕೊರಗಜ್ಜನಿಗೆ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ವ್ಯಕ್ತಿ

ಮಂಗಳೂರು: ಕೊರಗಜ್ಜ ದೈವ ತುಳುನಾಡಿನ ಶಕ್ತಿ ದೇವತೆ. ಅಪಾರ ಶಕ್ತಿಯುಳ್ಳ ದೈವ ಎಂಬುದು ಕರಾವಳಿಯ ಹಿಂದುಗಳ ಬಲವಾದ ನಂಬಿಕೆ. ಈ ಕೊರಗಜ್ಜ ದೈವಕ್ಕೆ ಮುಸ್ಲಿಂ ಭಕ್ತನೊಬ್ಬ ಇದ್ದಾರೆ. ಕಳೆದ 19ವರ್ಷಗಳಿಂದಲೂ ಕೊರಗಜ್ಜನ ಆರಾಧನೆ ಮಾಡುತ್ತ ಬಂದಿರುವ ಇವರ ಹೆಸರು ಪಿ.ಖಾಸಿಂ ಸಾಹೀಬ್​. ಮೂಲತಃ ಕೇರಳದ ಪಲಕ್ಕಡ್​ ಜಿಲ್ಲೆಯ ಚಿತ್ತಲಾಂಚೇರಿ ಗ್ರಾಮದವರು. ಕಳೆದ 35ವರ್ಷಗಳ ಹಿಂದೆ ಉದ್ಯೋಗ ಅರಸಿ, ಇಡೀ ಕುಟುಂಬದ ಸಮೇತ ಮಂಗಳೂರಿನ ಮುಲ್ಕಿ ತಾಲೂಕಿನ ಕವತ್ತಾರು ಗ್ರಾಮಕ್ಕೆ ಬಂದು ನೆಲೆಸಿದ್ದಾರೆ.

35ವರ್ಷದ ಹಿಂದೆಯೇ ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ಕವತ್ತಾರು ಗ್ರಾಮಕ್ಕೆ ಬಂದು ನೆಲೆಸಿದ ಪಿ.ಖಾಸಿಂ ಅವರಿಗೆ 20 ವರ್ಷಗಳ ಹಿಂದೆ ಹಲವು ಸಮಸ್ಯೆಗಳು ಎದುರಾದವಂತೆ. ಕಾಲಿಗೆ ಕೂಡ ಗಂಭೀರವಾಗಿ ಗಾಯವಾಗಿ. ಏನೇ ಮಾಡಿದರೂ ಅದು ವಾಸಿಗಾಲಿಲ್ಲ. ಪರಿಹಾರಕ್ಕಾಗಿ ಏನೇನೋ ಮಾಡಿದ ಬಳಿಕ ಖಾಸಿಂ ಆ ಹಳ್ಳಿಯ ಅರ್ಚಕರ ಬಳಿ ಹೋಗುತ್ತಾರೆ. ಆಗ ಆ ಅರ್ಚಕರು, ಕರಾವಳಿಯ ಶಕ್ತಿ ದೇವತೆಯಾಗಿರುವ ಕೊರಗಜ್ಜನಿಗೆ ಒಂದು ಗುಡಿ ಕಟ್ಟಿ, ಪೂಜಿಸಿ ಎಂಬ ಸಲಹೆಯನ್ನು ನೀಡುತ್ತಾರೆ. ಅವರ ಮಾತಿನಂತೆ ಖಾಸಿಂ ತಮ್ಮ ಮನೆಯ ಬಳಿಯೇ ಕೊರಗಜ್ಜನಿಗೆ ದೇಗುಲ ಕಟ್ಟಿ, ಪೂಜಿಸಲು ಶುರು ಮಾಡಿದರು. 19ವರ್ಷಗಳಿಂದ ನಿರಂತರವಾಗಿ ಕೊರಗಜ್ಜನ ಆರಾಧನೆ ಮಾಡುತ್ತಿರುವ ಇವರಿಗೆ, ಈಗ ಯಾವ ಸಮಸ್ಯೆಗಳೂ ಇಲ್ಲವಂತೆ.

ಇನ್ನು ಖಾಸಿಂ ಸಾಹಿಬ್​ ಈ ದೇವಸ್ಥಾನದಲ್ಲಿ ಕೊರಗಜ್ಜನೊಂದಿಗೆ, ಕೊರತಿ ದೈವ, ದುರ್ಗಾಪರಮೇಶ್ವರಿ ಮೂರ್ತಿಯನ್ನೂ ಇಟ್ಟು ಪೂಜಿಸುತ್ತಿದ್ದಾರೆ. ಈ ಗುಡಿಗೆ ಪ್ರತಿದಿನ ಸುಮಾರು 50 ಭಕ್ತರು ಬರುತ್ತಾರೆ. ಅಲ್ಲದೆ, ಎರಡು ವರ್ಷಕ್ಕೊಮ್ಮೆ ಕೋಲೋತ್ಸವವನ್ನೂ ಕೂಡ ಆಯೋಜಿಸಲಾಗುತ್ತಿದೆ. ಈ ಗ್ರಾಮದಲ್ಲಿ ಎಲ್ಲ ಧರ್ಮ, ಜಾತಿಯ ಜನರೂ ಇದ್ದು, ಬಹುತೇಕ ಎಲ್ಲರೂ ಈ ಗುಡಿಗೆ ಬರುತ್ತಿದ್ದಾರೆ.

ಖಾಸಿಂ ಸಾಹಿಬ್​ ಅವರೇ ದೇವಸ್ಥಾನದ ಅರ್ಚಕರಾಗಿದ್ದು, ಯಾರಾದರೂ ಸಮಸ್ಯೆಯನ್ನು ಹೊತ್ತು ಬಂದರೆ ಅದನ್ನು ಆಲಿಸಿ, ಪರಿಹಾರ ಕೊಡುತ್ತಾರೆ. ಕೊರಗಜ್ಜನ ಪ್ರಸಾದವೆಂದು ಗಂಧವನ್ನು ಕೊಟ್ಟುಕೊಳಿಸುತ್ತಾರೆ. ಇನ್ನು ಈ ದೇಗುಲ ಕಟ್ಟಿದ ಹಿನ್ನೆಲೆಯನ್ನು ಖಾಸಿಂ ಅವರೇ ವಿವರಿಸುತ್ತಾರೆ. ನಾನಿಲ್ಲಿ ಬಂದು ಕೆಲವು ವರ್ಷಗಳ ಬಳಿಕ ನನಗೆ ತುಂಬ ತೊಂದರೆಗಳು ಶುರುವಾದವು. ನನ್ನ ಮನೆಯ ಬಳಿ ಈ ಮೊದಲು ಕೊರಗಜ್ಜನ್ನು ಪೂಜಿಸಲಾಗುತ್ತಿತ್ತು ಎಂಬುದು ಅರ್ಚಕರನ್ನು ಸಂಪರ್ಕಿಸಿದಾಗಲೇ ಗೊತ್ತಾಯಿತು. ಅದಾದ ಮೇಲೆ ನಾನೇ ಕೊರಗಜ್ಜನನ್ನು ಆರಾಧಿಸಲು ಶುರು ಮಾಡಿದೆ ಎಂದು ತಿಳಿಸಿದ್ದಾರೆ. ದೇಗುಲ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯೇ ನನಗೆ ಭೂಮಿಯನ್ನು ಕೊಟ್ಟಿದೆ ಎಂದು ಹೇಳಿದ್ದಾರೆ.

ಕೊರಗಜ್ಜನ ಆರಾಧನೆ ಶುರುಮಾಡಿದಾಗಿನಿಂದಲೂ ಮಾಂಸಾಹಾರ ಸೇವನೆಯನ್ನು ಖಾಸಿಂ ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದಾರೆ. ಇವರ ಮಕ್ಕಳು ಮಸೀದಿಗೆ ಹೋದರೂ, ಕೊರಗಜ್ಜ ಹಾಗೂ ಇತರ ಹಿಂದೂ ದೇವತೆಗಳನ್ನೂ ನಂಬುತ್ತಾರೆ.

ಇದನ್ನೂ ಓದಿ: ಹೋರಿ ಪುಣ್ಯತಿಥಿ; ಒಂದು ವರ್ಷದ ಹಿಂದೆ ತೀರಿಕೊಂಡ ಹೋರಿಯನ್ನು ನೆನೆದು ಕಣ್ಣೀರಿಟ್ಟ ಕುಟುಂಬಸ್ಥರು

Viral Video: ಹನುಮಂತನ ಬಾಲದಂತಹ ರೈಲನ್ನು ಮೊದಲ ಬಾರಿಗೆ ನೋಡಿದ ಪುಟಾಣಿಯ ಪ್ರತಿಕ್ರಿಯೆ ಹೀಗಿತ್ತು!