ಹೋರಿ ಪುಣ್ಯತಿಥಿ; ಒಂದು ವರ್ಷದ ಹಿಂದೆ ತೀರಿಕೊಂಡ ಹೋರಿಯನ್ನು ನೆನೆದು ಕಣ್ಣೀರಿಟ್ಟ ಕುಟುಂಬಸ್ಥರು
ಕಲ್ಮೇಶ್ವರ 99 ಹೆಸರಿನಲ್ಲಿ ಹೋರಿ ಹಬ್ಬದ ಅಖಾಡದಲ್ಲಿ ತನ್ನದೇಯಾದ ಹೆಸರು ಮಾಡಿದ್ದ ಹೋರಿಗೆ ದೊಡ್ಡ ಅಭಿಮಾನಿಗಳ ಪಡೆಯೇ ಇದೆ. ಕೆಲವರು ಹೋರಿಯ ಹೆಸರನ್ನ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ಮತ್ತೆ ಕೆಲವರು ಟೀ ಶರ್ಟ್, ಬೈಕ್ಗಳ ಮೇಲೆ ಹೋರಿಯ ಹೆಸರು ಹಾಕಿಸಿಕೊಂಡು ಅಭಿಮಾನ ಪ್ರದರ್ಶಿಸಿದ್ದಾರೆ.
ಹಾವೇರಿ: ಒಂದು ವರ್ಷದ ಹಿಂದೆ ತೀರಿಕೊಂಡಿದ್ದ ಹೋರಿಯನ್ನು ನೆನೆದು ಕಣ್ಣಿರು ಹಾಕಿದ ಹಾವೇರಿ ಜಿಲ್ಲೆಯ ಗ್ರಾಮಸ್ಥರು ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿ ಪೂಜೆ ಸಲ್ಲಿಸಿ ಹೋರಿಗೆ ತಿಥಿ ನಡೆಸಿದ ಅಪರೂಪದ ಘಟನೆ ಹಾವೇರಿಯಲ್ಲಿ ಜರುಗಿದೆ. ಜಿಲ್ಲೆಯ ದೇವಗಿರಿಯಲ್ಲಾಪುರ ಗ್ರಾಮದ ರೈತ ಶಿವನಗೌಡ್ರು ಮನೆಯಲ್ಲಿ ಸುಮಾರು ಹದಿನೈದು ವರ್ಷಗಳಿಂದ ಹೋರಿಯೊಂದನ್ನ ಸಾಕಿದ್ದರು. ಅದಕ್ಕೆ ಗ್ರಾಮದ ಕಲ್ಮೇಶ್ವರ ದೇವರ ಹೆಸರನ್ನಿಟ್ಟಿದ್ದರು. ಹಾವೇರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಎಲ್ಲಿಯೇ ಹೋರಿ ಓಡಿಸುವ ಸ್ಪರ್ಧೆ ನಡೆದರೂ ಅಲ್ಲಿ ಕಲ್ಮೇಶ್ವರ ಹಾಜರ್ ಇರತ್ತಿತ್ತು.
ಅಷ್ಟೇ ಅಲ್ಲ ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲ ಶರವೇಗದಲ್ಲಿ ಓಡಿ ಪ್ರಶಸ್ತಿ ಪಡೆದುಕೊಂಡು ಬರ್ತಿತ್ತು. ಬೈಕ್ಗಳು, ಚಿನ್ನದ ಆಭರಣ, ಗೃಹೋಪಯೋಗಿ ವಸ್ತುಗಳು, ಚಕ್ಕಡಿ ಹೀಗೆ ಸಾಕಷ್ಟು ಬಹುಮಾನಗಳನ್ನ ಈ ಹೋರಿ ತಂದಿತ್ತು. ಆದರೆ ಕಳೆದೊಂದು ವರ್ಷದ ಹಿಂದೆ ಅನಾರೋಗ್ಯದಿಂದ ಕಲ್ಮೇಶ್ವರ ಹೋರಿ ಮೃತಪಟ್ಟಿತ್ತು. ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಬಳಿಯಲ್ಲಿ ಹೋರಿಯ ಅಂತ್ಯಕ್ರಿಯೆ ಮಾಡಲಾಗಿತ್ತು. ಹೋರಿಯನ್ನ ಶಿವನಗೌಡ್ರು ಥೇಟ್ ತಮ್ಮ ಮನೆಯ ಮಗನಂತೆಯೇ ಬೆಳೆಸಿದ್ದ ಕಾರಣ ತಮ್ಮ ಕುಟುಂಬದವರನ್ನು ಕಳೆದುಕೊಂಡಂತೆಯೇ ದುಃಖಿಸಿದ್ದರು. ಇದೀಗ ಮನೆ ಮಗನಂತಿದ್ದ ಹೋರಿಗೆ ಮೃತಪಟ್ಟ ಮನೆಯವರ ನೆನಪಿಗೆ ಮಾಡುವಂತೆಯೇ ಪುಣ್ಯತಿಥಿ ಮಾಡಿ, ನೆನೆದು ಕಣ್ಣೀರು ಹಾಕಿದ್ದಾರೆ.
ಕಲ್ಮೇಶ್ವರ 99 ಎಂಬ ಹೆಸರಿನಲ್ಲಿ ಹೋರಿ ಹಬ್ಬದ ಅಖಾಡದಲ್ಲಿ ತನ್ನದೇ ಛಾಪು ಮೂಡಿಸಿತ್ತು. ಈ ಹೋರಿಗೆ ದೊಡ್ಡ ಅಭಿಮಾನಿಗಳ ಪಡೆಯೇ ಇದೆ. ವಿಶೇಷ ಎಂದರೆ ಕೆಲವರು ಹೋರಿಯ ಹೆಸರನ್ನ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ಮತ್ತೆ ಕೆಲವರು ಟೀ ಶರ್ಟ್, ಬೈಕ್ಗಳ ಮೇಲೆ ಹೋರಿಯ ಹೆಸರು ಹಾಕಿಸಿಕೊಂಡು ಅಭಿಮಾನ ಪ್ರದರ್ಶಿಸಿದ್ದಾರೆ. ಹೋರಿ ಹಬ್ಬದ ಅಖಾಡದಲ್ಲೇ ಆಕಾಶದೆತ್ತರಕ್ಕೆ ಬಲೂನ್ಗಳನ್ನ ಕಟ್ಟೋ ಪೀಪಿ ಹೋರಿ ಅಂದ್ರೆ ಅದು ಕಲ್ಮೇಶ್ವರ99 ಎನ್ನುವ ಹೋರಿ ಎಂದು ಹೆಸರು ಮಾಡಿತ್ತು.
ಅಖಾಡಕ್ಕೆ ಬರೋವರೆಗೂ ಯಾರಿಗೂ ಏನೂ ಮಾಡದಂತೆ ಸುಮ್ನೆ ಬರ್ತಿದ್ದ ಹೋರಿ, ಗೇಟ್ ತೆರೆದು ಅಖಾಡಕ್ಕೆ ಬಿಟ್ರೆ ಮಿಂಚಿನ ಓಟ ತೋರಿಸುತ್ತಿತ್ತು. ಒಂದೆರಡು ಬಾರಿ ಮಾತ್ರ ಹೋರಿ ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಕ್ಕಿದ್ದು, ಬಿಟ್ಟರೆ ಉಳಿದಂತೆ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಧೂಳೆಬ್ಬಿಸಿಕೊಂಡು ಓಡಿ ಭರ್ಜರಿ ಹೆಸರು ಮಾಡಿತ್ತು. ಹೀಗಾಗಿ ಹೋರಿಯ ಅಭಿಮಾನಿಗಳು ಇವತ್ತು ಹೋರಿಯ ಪುಣ್ಯತಿಥಿಗೆ ಆಗಮಿಸಿ, ಹೋರಿಯನ್ನ ದಫನ್ ಮಾಡಲಾದ ಸ್ಥಳಕ್ಕೆ ಪೂಜೆ ಸಲ್ಲಿಸಿ, ಹೋರಿಯನ್ನ ನೆನಪಿಸಿಕೊಂಡರು.
ಹೋರಿ ಹಬ್ಬದ ಅಖಾಡದಲ್ಲಿ ದೊಡ್ಡ ಹೆಸರು ಮಾಡಿದ್ದ ಕಲ್ಮೇಶ್ವರ99 ಹೆಸರಿನ ಹೋರಿ ಮೃತಪಟ್ಟು ಇಂದಿಗೆ ಒಂದು ವರ್ಷವಾಯ್ತು. ಹೀಗಾಗಿ ಹೋರಿ ಮನೆಯವರು ಪುಣ್ಯತಿಥಿ ಮಾಡಿದರು. ಹೋರಿ ಮನೆಯವರ ಸಂಬಂಧಿಕರು ಮಾತ್ರವಲ್ಲದೇ ಬೇರೆ ಬೇರೆ ಊರುಗಳಲ್ಲಿರುವ ಹೋರಿ ಅಭಿಮಾನಿಗಳು ಹೋರಿಯ ಪುಣ್ಯತಿಥಿಗೆ ಬಂದು ಹೋರಿಯ ನೆನಪು ಮಾಡಿಕೊಂಡರು. ಹೋರಿಯ ಪುಣ್ಯತಿಥಿಗೆ ಬಂದ ಜನರಿಗೆ ಹೋರಿ ಮನೆಯವರು ಹುಗ್ಗಿ ಮತ್ತು ಪಲಾವ್ ವ್ಯವಸ್ಥೆ ಮಾಡಿದ್ದರು. ಒಟ್ಟಿನಲ್ಲಿ ಮನುಷ್ಯರಂತೆಯೇ ಪ್ರೀತಿಯಿಂದ ಸಾಕಿದ್ದ ಹೋರಿ ಮೃತಪಟ್ಟ ಒಂದು ವರ್ಷದ ನಂತರ ಮನೆಯವರು ಮೃತ ಹೋರಿಯ ಪುಣ್ಯತಿಥಿ ಮಾಡಿ ಹೋರಿಯ ನೆನಪು ಮಾಡಿಕೊಂಡಿದ್ದು ವಿಶೇಷವಾಗಿತ್ತು.
(ವರದಿ: ಪ್ರಭುಗೌಡ.ಎನ್.ಪಾಟೀಲ – 9980914107)
ಇದನ್ನೂ ಓದಿ:
ಹಾವೇರಿ ಹೋರಿ ಅಭಿಮಾನಿಯ ಚಿತ್ರ ಚಮತ್ಕಾರ: ಗ್ರಾಮದ ಗೋಡೆಗಳ ಮೇಲೆ ಹೋರಿ ಚಿತ್ರಗಳ ಮೆರವಣಿಗೆ!
( Family performed rituals for a bull that died a year ago in Haveri)