ಹಾವೇರಿ ಹೋರಿ ಅಭಿಮಾನಿಯ ಚಿತ್ರ ಚಮತ್ಕಾರ: ಗ್ರಾಮದ ಗೋಡೆಗಳ ಮೇಲೆ ಹೋರಿ ಚಿತ್ರಗಳ ಮೆರವಣಿಗೆ!
ಮೊದಮೊದಲು ಬಿಳಿ ಹಾಳೆಗಳ ಮೇಲೆ ಚಿತ್ರ ಬಿಡಿಸುತ್ತಿದ್ದ ಫಕ್ಕಿರೇಶ, ಈಗ ಹೋರಿಯ ಅಭಿಮಾನಿಗಳ ಮನೆಯ ಗೋಡೆಗಳ ಮೇಲೆ ಹೋರಿಯ ಚಿತ್ರ ಬಿಡಿಸುತ್ತಿದ್ದಾರೆ. ಥೇಟ್ ಹೋರಿಯನ್ನೆ ಹೋಲುವಂತಿರುವ ಚಿತ್ರಗಳನ್ನು ಕಂಡು ಆಯಾ ಹೋರಿಗಳ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಹಾವೇರಿ: ಹೋರಿ ಅಂದರೆ ಸಾಕು ಹಾವೇರಿ ಜಿಲ್ಲೆಯ ಯುವಕರಲ್ಲಿ ಏನೋ ಒಂದು ರೀತಿಯ ಹುಮ್ಮಸ್ಸು. ಭರ್ಜರಿಯಾಗಿ ಹೋರಿಗಳನ್ನು ತಯಾರು ಮಾಡಿ ಅಖಾಡದಲ್ಲಿ ಓಡಿಸಿ ಖುಷಿ ಅನುಭವಿಸುವುದರ ಜೊತೆಗೆ ಒಂದೊಂದು ಹೋರಿಗೂ ತನ್ನದೇಯಾದ ಅಭಿಮಾನಿಗಳ ಪಡೆಯಿದೆ.
ಕೆಲವರು ಕೈ ಮತ್ತು ಎದೆಯ ಮೇಲೆ ತಮ್ಮ ನೆಚ್ಚಿನ ಹೋರಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರೆ ಮತ್ತೆ ಕೆಲವರು ನೆಚ್ಚಿನ ಹೋರಿಯ ಹೆಸರನ್ನು ಬಟ್ಟೆಗಳ ಮೇಲೆ ಬರೆಯಿಸಿಕೊಂಡು ಅಭಿಮಾನ ತೋರಿಸುತ್ತಾರೆ. ಆದರೆ ಇದೆಲ್ಲಕ್ಕಿಂತಲೂ ಡಿಫರೆಂಟ್ ಆಗಿರುವ ಅಭಿಮಾನಿಯೊಬ್ಬರು ಸದ್ಯ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿದ್ದಾರೆ.
ಹೆಡಿಗ್ಗೊಂಡ ಗ್ರಾಮದ ಫಕ್ಕಿರೇಶ.ಎಂ.ಪಿ ಎಂಬುವವರೆ ಹೋರಿಯ ಡಿಫರೆಂಟ್ ಅಭಿಮಾನಿ. ಫಕ್ಕಿರೇಶನಿಗೆ ಅಖಾಡದಲ್ಲಿ ಓಡುವ ಹಬ್ಬದ ಹೋರಿಗಳು ಅಂದರೆ ಎಲ್ಲಿಲ್ಲದ ಪ್ರೀತಿ. ಬಾಲ್ಯದಿಂದಲೂ ಹೋರಿ ಮೇಲೆ ಅತಿಯಾದ ಅಭಿಮಾನ ಹೊಂದಿದ್ದ ಫಕ್ಕಿರೇಶ, ದೊಡ್ಡವನಾದ ಮೇಲಂತೂ ಹೋರಿ ಹಬ್ಬ ಇದ್ದಲ್ಲಿಗೆ ತಪ್ಪದೆ ಹಾಜರಾಗುತ್ತಾನೆ.

ಅರ್ಜುನ ಹೋರಿಯ ಚಿತ್ರದ ಜೊತೆ ಫಕ್ಕಿರೇಶ
ಎಂಜಿನಿಯರಿಂಗ್ ಓದಿರುವ ಫಕ್ಕಿರೇಶನಿಗೆ ಕುಂಚ ಹಿಡಿದು ಚಿತ್ರಗಳನ್ನು ಬಿಡಿಸುವುದು ಎಂದರೆ ಅರಳು ಹುರಿದಷ್ಟೆ ಸರಳ. ಕುಂಚ ಕೈಗೆತ್ತಿಕೊಂಡರೆ ಮುಗೀತು ನೋಡ ನೋಡುತ್ತಿದ್ದಂತೆ ಹೋರಿ ಚಿತ್ರವನ್ನು ಫಟಾಫಟ್ ಎಂದು ಬಿಡಿಸುತ್ತಾರೆ. ಮೊದಮೊದಲು ಬಿಳಿ ಹಾಳೆಗಳ ಮೇಲೆ ಚಿತ್ರಗಳನ್ನು ಬಿಡಿಸುತ್ತಿದ್ದ ಫಕ್ಕಿರೇಶ ಈಗ ಗೋಡೆಗಳ ಮೇಲೆ ಹೋರಿಗಳ ಚಿತ್ರ ಬರೆಯುತ್ತಿದ್ದಾರೆ.
ಗೋಡೆಗಳ ಮೇಲೆ ಅರಳುತ್ತಿವೆ ಹೋರಿ ಚಿತ್ರಗಳು : ಫಕ್ಕಿರೇಶಗೆ ಗ್ರಾಮದ ಅವಿನಾಶ ಹತ್ತಿಮತ್ತೂರ ಎಂಬುವರ ಅರ್ಜುನ 155 ಹೆಸರಿನ ಹೋರಿ ಅಂದರೆ ಎಲ್ಲಿಲ್ಲದ ಪ್ರೀತಿ. ಎಂಜಿನಿಯರಿಂಗ್ ಓದು ಮುಗಿಸಿದ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಫಕ್ಕಿರೇಶ, ಮರಳಿ ಬೆಂಗಳೂರಿನತ್ತ ಹೋಗುವ ಮನಸ್ಸು ಮಾಡಿಲ್ಲ. ತನ್ನದೇಯಾದ ಈಗಲ್ ಆರ್ಟ್ಸ್ Eagle Arts ಎಂಬ ಹೆಸರಿನಲ್ಲಿ ಚಿತ್ರ ಬಿಡಿಸುತ್ತಿದ್ದು, ಗ್ರಾಮದಲ್ಲಿನ ಅರ್ಜುನ 155 ಹೋರಿಯ ಅಭಿಮಾನಿಗಳ ಮನೆಯ ಗೋಡೆಗಳ ಮೇಲೆ ಥೇಟ್ ಹೋರಿಯನ್ನೆ ಹೋಲುವಂತೆ ಚಿತ್ರ ಬಿಡಿಸಿದ್ದಾರೆ.

ಗ್ರಾಮದ ಗೋಡೆಗಳ ಮೇಲೆ ಹೋರಿ ಅಭಿಮಾನಿಯ ಚಿತ್ರಗಳು
ಫಕ್ಕಿರೇಶ ಕೇವಲ ಅರ್ಜುನ ಹೆಸರಿನ ಹೋರಿ ಮಾತ್ರವಲ್ಲ ಶಿಕಾರಿಪುರದ ಡಾನ್, ಕೆಡಿಎಂ ಕಿಂಗ್, ರಾಕದ ಸ್ಟಾರ್ ಹೀಗೆ ಹಲವು ಹೋರಿಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಗ್ರಾಮದ ಜನರು ಗ್ರಾಮದ ಬೀದಿಗಳಲ್ಲಿ ಓಡಾಡುವಾಗ ಗೋಡೆಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕು ಸಾಕ್ಷಾತ್ ಆಯಾ ಹೆಸರಿನ ಹೋರಿಗಳೆ ಕಣ್ಣೆದುರಿಗೆ ಬಂದು ನಿಲ್ಲುವಂತೆ ಆಕರ್ಷಕವಾಗಿ ಹೋರಿ ಚಿತ್ರಗಳನ್ನು ಬಿಡಿಸಿದ್ದಾರೆ. ಒಂದು ಹೋರಿ ಚಿತ್ರವನ್ನು ಬಿಡಿಸಲು ಸುಮಾರು 2 ಗಂಟೆಗಳ ಸಮಯ ತೆಗೆದುಕೊಳ್ಳುತ್ತಾರೆ ಎನ್ನುವುದು ಆಶ್ಚರ್ಯದಾಯಕವಾಗಿದೆ.
ಗೋಡೆಗಳ ಮೇಲಿನ ಚಿತ್ರಗಳಿಗೆ ಫಿದಾ ಆಗಿರುವ ಅಭಿಮಾನಿಗಳು: ಮೊದಮೊದಲು ಬಿಳಿ ಹಾಳೆಗಳ ಮೇಲೆ ಚಿತ್ರ ಬಿಡಿಸುತ್ತಿದ್ದ ಫಕ್ಕಿರೇಶ, ಈಗ ಹೋರಿಯ ಅಭಿಮಾನಿಗಳ ಮನೆಯ ಗೋಡೆಗಳ ಮೇಲೆ ಹೋರಿಯ ಚಿತ್ರ ಬಿಡಿಸುತ್ತಿದ್ದಾರೆ. ಥೇಟ್ ಹೋರಿಯನ್ನೆ ಹೋಲುವಂತಿರುವ ಚಿತ್ರಗಳನ್ನು ಕಂಡು ಆಯಾ ಹೋರಿಗಳ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಕೆಲವರಂತೂ ತಮ್ಮ ನೆಚ್ಚಿನ ಹೋರಿಗಳ ಚಿತ್ರಗಳನ್ನು ಮನೆಯ ಗೋಡೆಗಳ ಮೇಲೆ ಬಿಡಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ಫಕ್ಕಿರೇಶ ಬಿಡಿಸಿದ ಹೋರಿ ಚಿತ್ರ
ನಾನೊಬ್ಬ ಹೋರಿ ಹಬ್ಬದ ಅಪ್ಪಟ ಅಭಿಮಾನಿ. ಅದರಲ್ಲೂ ಅರ್ಜುನ ಹೋರಿ ಅಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಹೋರಿ ಹಬ್ಬದ ಅಭಿಮಾನಿಯಾದ ಮೇಲೆ ಹೋರಿಗಳ ಚಿತ್ರಗಳನ್ನು ಹಾಳೆಗಳ ಮೇಲೆ ಬಿಡಿಸುತ್ತಿದ್ದೆ. ಈಗ ಗೋಡೆಗಳ ಮೇಲೆ ಹೋರಿಗಳ ಚಿತ್ರಗಳನ್ನು ಬರೆಯುತ್ತಿದ್ದೇನೆ. ಹೋರಿಯ ಅಭಿಮಾನಿಗಳಂತೂ ಗೋಡೆಗಳ ಮೇಲಿನ ಚಿತ್ರ ಕಂಡು ಖುಷಿ ಆಗುತ್ತಿದ್ದಾರೆ. ನನಗೂ ಹೋರಿಗಳ ಚಿತ್ರ ಬರೆಯುತ್ತಿರುವುದಕ್ಕೆ ಖುಷಿ ಆಗುತ್ತದೆ ಎಂದು ಫಕ್ಕಿರೇಶ.ಎಂ.ಪಿ ಹೇಳಿದ್ದಾರೆ. hedigonda artist fakkiresha mp a bull fighting fan sketches bulls on walls in haveri

ಹೋರಿ ಅಭಿಮಾನಿ ಫಕ್ಕಿರೇಶ
ಎಂಜಿನಿಯರಿಂಗ್ ಓದಿರುವ ಫಕ್ಕಿರೇಶ ಮೊದಲಿನಿಂದಲೂ ಹೋರಿಯ ಅಭಿಮಾನಿ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಫಕ್ಕಿರೇಶ, ಲಾಕ್ ಡೌನ್ ನಂತರದಲ್ಲಿ ಊರಿಗೆ ಮರಳಿದ್ದಾನೆ. ಕಲೆ ಫಕ್ಕಿರೇಶನಲ್ಲಿ ಕರಗತ ಆಗಿರುವುದರಿಂದ ಈಗಲ್ ಆರ್ಟ್ಸ್ ಹೆಸರಿನಲ್ಲಿ ಗೋಡೆಗಳ ಮೇಲೆ ಹೋರಿಗಳ ಚಿತ್ರಗಳನ್ನು ಬರೆಯುತ್ತಿದ್ದಾನೆ. ಚಿತ್ರಗಳನ್ನು ನೋಡಿದರೆ ಹೋರಿಗಳು ಕಣ್ಣು ಮುಂದೆ ಬಂದು ನಿಲ್ಲುವಷ್ಟು ಆಕರ್ಷಕವಾಗಿ ಫಕ್ಕಿರೇಶ ಹೋರಿಯ ಚಿತ್ರಗಳನ್ನು ಬಿಡಿಸುತ್ತಾನೆ. ಅರ್ಜುನ ಹೋರಿಯ ಅಭಿಮಾನಿ ಆಗಿದ್ದರಿಂದ ಫಕ್ಕಿರೇಶ ಗೋಡೆ ಮೇಲೆ ಸ್ವಂತ ಖರ್ಚಿನಲ್ಲಿ ಹೋರಿಯ ಚಿತ್ರ ಬಿಡಿಸಿದ್ದಾನೆ. ಚಿತ್ರ ಎಲ್ಲರಿಗೂ ಖುಷಿ ಕೊಡುತ್ತಿದೆ. -ಅರ್ಜುನ ಹೋರಿಯ ಅಭಿಮಾನಿ ಚಂದ್ರು