ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೋರಿಯ ಮಾಲೀಕನಿಗೆ ಆರ್ಥಿಕ ನೆರವು ನೀಡಿದ ಶಾಸಕ ರೇಣುಕಾಚಾರ್ಯ
ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ನಂತರ ಭಾಗವಹಿಸಿದ್ದ ಹೋರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಹೋರಿಯ ಮಾಲೀಕನಿಗೆ ಆರ್ಥಿಕ ನೆರವು ನೀಡಿ ಶಾಸಕ ರೇಣುಕಾಚಾರ್ಯ ಸ್ಪಂದಿಸಿದ್ದಾರೆ.
ದಾವಣಗೆರೆ: ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಬಾರಿಯೂ ಬಿಜೆಪಿ ಶಾಸಕ ರೇಣುಕಾಚಾರ್ಯ ಪಾಲ್ಗೊಂಡಿದ್ದಾರೆ. ಸ್ಪರ್ಧೆಯನ್ನು ಮುಗಿಸಿ ಹಿಂತಿರುಗುತ್ತಿದ್ದ ‘ಭ್ರಾತೇಶ್’ ಹೆಸರಿನ ಹೋರಿ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದು, ಮೃತಪಟ್ಟ ಹೋರಿಯ ಮಾಲೀಕನ ಕಣ್ಣೀರಿಗೆ ಮಿಡಿದ ಶಾಸಕ ರೇಣುಕಾಚಾರ್ಯ ಆರ್ಥಿಕ ನೆರವು ನೀಡಿದ್ದಾರೆ.
ಕಳೆದ ವರ್ಷವೂ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಹೋರಿಯಿಂದ ತಿವಿತಕ್ಕೊಳಗಾಗಿದ್ದರು. ಈ ಬಾರಿಯೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಗ್ರಾಮಸ್ಥರು ಶಾಸಕ ರೇಣುಕಾಚಾರ್ಯರನ್ನು ಹೆಗಲಲ್ಲಿ ಹೊತ್ತು ಮೆರವಣಿಗೆ ಮಾಡಿದ್ದಾರೆ.
ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ‘ಭ್ರಾತೇಶ್’ ಹೆಸರಿನ ಹೋರಿ ಸಾವಿಗೀಡಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರೈತನಿಗೆ ಸೇರಿದ ಹೋರಿ ಎಂದು ತಿಳಿದು ಬಂದಿದ್ದು, ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಮೃತಪಟ್ಟ ಹೋರಿ ಮಾಲೀಕನ ಕಣ್ಣೀರಿಗೆ ಶಾಸಕ ರೇಣುಕಾಚಾರ್ಯ ಮತ್ತು ಸ್ಥಳೀಯರು ಸ್ಪಂದಿಸಿ ಆರ್ಥಿನ ನೆರವು ನೀಡಿದ್ದಾರೆ.
ಇದನ್ನೂ ಓದಿ: ಹೋರಿ ಹಬ್ಬದ ವಿಶೇಷ: ಹೋರಿಗಳು ಮಿಂಚಿನ ಓಟ ಓಡಿದ್ದು ಎಲ್ಲಿ ಗೊತ್ತಾ?
ಇದನ್ನೂ ಓದಿ: ತೇಗೂರಿನಲ್ಲಿ ಜೋಡೆತ್ತುಗಳ ಭರ್ಜರಿ ಓಟ, ಜಿದ್ದಿಗೆ ಬಿದ್ದು ಸ್ಪರ್ಧೆಗಿಳಿದ ಹೋರಿಗಳು