ಹೋರಿ ಹಬ್ಬದ ವಿಶೇಷ: ಹೋರಿಗಳು ಮಿಂಚಿನ ಓಟ ಓಡಿದ್ದು ಎಲ್ಲಿ ಗೊತ್ತಾ?
ವಿಶೇಷವಾಗಿ ಈಗ ಬಹುತೇಕ ರೈತರ ಜಮೀನುಗಳಲ್ಲಿ ಕೃಷಿ ಕೆಲಸಗಳು ಇಲ್ಲ. ಹೋರಿಗಳಿಗೂ ಈಗ ಬಿಡುವಿನ ಸಮಯ. ಹೋರಿಗಳಿಗೆ ಉತ್ಸಾಹ ತುಂಬುವುದು ಮತ್ತು ರೈತರು ಖುಷಿ ಖುಷಿಯಿಂದ ಇರಲು ಹೋರಿ ಹಬ್ಬಗಳನ್ನು ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಚಿಕ್ಕೋಣತಿ ಹಬ್ಬದಲ್ಲಿ 200ಕ್ಕೂ ಅಧಿಕ ಹೋರಿಗಳು ಧೂಳೆಬ್ಬಿಸಿಕೊಂಡು ಮಿಂಚಿನ ಓಟ ಓಡಿದವು
ಹಾವೇರಿ: ಹೋರಿ ಹಬ್ಬ ಎಂದರೆ ಹಾವೇರಿ ಜಿಲ್ಲೆಯ ಜನರಿಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ರೈತಾಪಿ ವರ್ಗದ ಜನರು ಮತ್ತು ರೈತಾಪಿ ಕುಟುಂಬದ ಯುವಕರಿಗಂತೂ ಹೋರಿ ಹಬ್ಬ ಎಂದರೆ ಅಚ್ಚುಮೆಚ್ಚು. ಹೋರಿ ಹಬ್ಬ ಈ ಭಾಗದಲ್ಲಿ ಜಾನಪದ ಕ್ರೀಡೆಗಳಲ್ಲೊಂದು ಎನ್ನುವಷ್ಟೇ ಫೇಮಸ್ ಆಗಿದೆ. ಈ ಹಬ್ಬಕ್ಕೆ ಯುವಕರ ದಂಡು ತಂಡ ಕಟ್ಟಿಕೊಂಡು ಚಲನಚಿತ್ರ, ಚಿತ್ರನಟರು, ದೇವರ ಹೆಸರುಗಳನ್ನು ಆ ಹೋರಿಗಳಿಗೆ ಇಟ್ಟು ಹೋರಿ ಹಬ್ಬಕ್ಕೆ ತಯಾರು ಮಾಡಿರುತ್ತಾರೆ. ಈ ಹಬ್ಬವನ್ನು ಕೊಬ್ಬರಿ ಹೋರಿ ಓಟ, ದನ ಬೆದರಿಸುವ ಸ್ಪರ್ಧೆ, ಹಟ್ಟಿ ಹಬ್ಬ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ.
ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಹೋರಿ ಹಬ್ಬ ಈಗ ಗ್ರಾಮೀಣ ಪ್ರದೇಶಗಳಲ್ಲಿ ಮತ್ತೆ ನಡೆಯುತ್ತಿದ್ದು, ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದಲ್ಲಿ ಊರ ದೇವರ ಕಾರ್ತಿಕೋತ್ಸವದ ಪ್ರಯುಕ್ತ ಹೋರಿ ಓಡಿಸಲಾಯಿತು. ಹಾವೇರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಂದ 200ಕ್ಕೂ ಅಧಿಕ ಹೋರಿಗಳು ಇಲ್ಲಿಗೆ ಬಂದಿದ್ದು, ಒಂದಕ್ಕಿಂತ ಒಂದು ಹೋರಿಗಳು ನಾವೇನು ಯಾರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಮಿಂಚಿನ ಓಟ ಓಡಿ ನೋಡುಗರ ಗಮನ ಸೆಳೆದವು. ಹೋರಿ ಹಬ್ಬ ನೋಡಲು ಬಂದಿದ್ದ ಜನರು ಸಹ ಕೇಕೆ, ಸಿಳ್ಳೆಗಳ ಮೂಲಕ ಹೋರಿಗಳನ್ನು ಮತ್ತಷ್ಟು ಹುರುಪಿನಿಂದ ಓಡುವಂತೆ ಮಾಡಿದ್ದರು.
ಭರ್ಜರಿ ಅಲಂಕಾರ: ಹೋರಿ ಹಬ್ಬ ಎಂದರೆ ಸಾಕು ಹೋರಿ ಅಭಿಮಾನಿಗಳು ತಮ್ಮ ತಮ್ಮ ಹೋರಿಗಳನ್ನು ಭರ್ಜರಿಯಾಗಿ ಅಲಂಕಾರ ಮಾಡಿರುತ್ತಾರೆ. ಚಿಕ್ಕೋಣತಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲೂ ಒಂದಕ್ಕಿಂತ ಒಂದು ಹೋರಿ ಸುಂದರವಾಗಿ ಅಲಂಕಾರಗೊಂಡಿದ್ದವು. ಕೆಲವರು ಹೋರಿಗಳ ಕೊರಳು ಮತ್ತು ಬೆನ್ನಿನ ಮೇಲೆ ಕೆ.ಜಿ. ಗಟ್ಟಲೆ ಒಣಕೊಬ್ಬರಿಯಿಂದ ತಯಾರಿಸಿದ ಮಾಲೆಗಳನ್ನು ಹಾಕಿ ಅಲಂಕಾರ ಮಾಡಿದ್ದು, ಕೆಲವರು ಹೋರಿಗಳಿಗೆ ಜೂಲಾ ಹಾಕಿ, ರಿಬ್ಬನ್ ಕಟ್ಟಿದ್ದರೆ, ಕೆಲವರಂತೂ ಆಕಾಶದೆತ್ತರಕ್ಕೆ ಕಾಣುವಂತೆ ಕೊಡುಗಳಿಗೆ ಬಲೂನ್ಗಳನ್ನು ಕಟ್ಟಿದ್ದರು. ಇನ್ನು ಹೊರಿಗಳಿಗೆ ಹುರುಳಿ, ನುಚ್ಚು ಮತ್ತಿತರೆ ಪೌಷ್ಠಿಕಾಂಶಭರಿತ ಪದಾರ್ಥಗಳನ್ನು ತಿನ್ನಿಸಿ ತಯಾರು ಮಾಡಿ ಅಖಾಡಕ್ಕೆ ತಂದಿದ್ದರು.
ಬಿಡುವಿನ ಸಮಯ: ವಿಶೇಷವಾಗಿ ಈಗ ಬಹುತೇಕ ರೈತರ ಜಮೀನುಗಳಲ್ಲಿ ಕೃಷಿ ಕೆಲಸಗಳು ಇಲ್ಲ. ಹೋರಿಗಳಿಗೂ ಈಗ ಬಿಡುವಿನ ಸಮಯ. ಹೋರಿಗಳಿಗೆ ಉತ್ಸಾಹ ತುಂಬುವುದು ಮತ್ತು ರೈತರು ಖುಷಿ ಖುಷಿಯಿಂದ ಇರಲು ಹೋರಿ ಹಬ್ಬಗಳನ್ನು ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಚಿಕ್ಕೋಣತಿ ಹಬ್ಬದಲ್ಲಿ 200ಕ್ಕೂ ಅಧಿಕ ಹೋರಿಗಳು ಧೂಳೆಬ್ಬಿಸಿಕೊಂಡು ಮಿಂಚಿನ ಓಟ ಓಡಿದವು. ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿ ಹೋರಿಗಳನ್ನು ಓಡಿಸಲಾಗುತ್ತದೆ. ಪೈಲ್ವಾನ್ ರು ಹೋರಿಗಳನ್ನು ಹಿಡಿಯಲು ಕಸರತ್ತು ಮಾಡಿದರು. ಆದರೆ ಬಹುತೇಕ ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಯಾರ ಕೈಗೂ ಸಿಗದಂತೆ ಮಿಂಚಿನ ಓಟ ಓಡಿದವು. ಹೋರಿಗಳ ಮಾಲೀಕರು ಹಾಗೂ ಆಯಾ ಹೋರಿಗಳ ಅಭಿಮಾನಿಗಳು ತಮ್ಮ ತಮ್ಮ ಹೋರಿಗಳ ಮಿಂಚಿನ ಓಟ ನೋಡಿ ಖುಷಿಪಟ್ಟರು.
ಅನಾಹುತಗಳು ಸಂಭವಿಸದಂತೆ ಕ್ರಮ: ಊರ ದೇವರ ಕಾರ್ತಿಕೋತ್ಸವದಂದು ನಡೆದ ಹೋರಿ ಹಬ್ಬದ ವೇಳೆ ಯಾವುದೇ ರೀತಿಯ ಅನಾಹುತಗಳು ನಡೆಯದಂತೆ ಸಂಘಟನಾಕಾರರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಕೆಲವೊಂದು ಬಾರಿ ಹೋರಿಗಳು ನೋಡುಗರಿಗೆ ಮತ್ತು ಹೋರಿ ಹಿಡಿಯಲು ಕಸರತ್ತು ಮಡೆಸುವ ಪೈಲ್ವಾನ್ರಿಗೆ ತಿವಿದು ಅನಾಹುತಗಳು ಸಂಭವಿಸಿದ ಉದಾಹರಣೆಗಳಿವೆ. ಇದರಿಂದ ಹೋರಿ ಹಬ್ಬದ ಮೇಲೆ ಕರಿನೆರಳು ಬೀಳುತ್ತಿದೆ. ಹೀಗಾಗಿ ಗ್ರಾಮದ ಸಂಘಟನಾಕಾರರು ಯಾವುದೇ ಅನಾಹುತಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಹೋರಿ ಹಬ್ಬ ನೋಡುವುದು ಎಂದರೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಇದೊಂದು ರೈತರ ಹಬ್ಬ. ರೈತರು ಭರ್ಜರಿಯಾಗಿ ರೆಡಿ ಮಾಡಿದ ಹೋರಿಗಳನ್ನು ಅಖಾಡದಲ್ಲಿ ಓಡಿಸುತ್ತಾರೆ. ಒಂದೊಂದು ಹೋರಿಗಳು ಒಂದೊಂದು ರೀತಿಯಲ್ಲಿ ಓಡುತ್ತವೆ. ಹೀಗಾಗಿ ಹೋರಿ ಓಟವನ್ನು ನೋಡಿ ಖುಷಿಪಟ್ಟೆವು ಎಂದು ಹೋರಿ ಹಬ್ಬದ ಅಭಿಮಾನಿ ವಸಂತ ಹೇಳಿದರು.
ಹೋರಿ ಹಬ್ಬ ಎಂಬುದು ರೈತರಿಗೆ ಖುಷಿ ನೀಡುವ ಹಬ್ಬಗಳಲ್ಲಿ ಒಂದು. ಆದರೆ ಇತ್ತೀಚಿಗೆ ಹೋರಿ ಹಬ್ಬಕ್ಕೆ ನಿರ್ಬಂಧ ಹೇರುವ ಕೆಲಸಗಳು ಆಗುತ್ತಿವೆ. ತಮಿಳುನಾಡಿನಲ್ಲಿ ಅನಾಹುತಕಾರಿ ಜಲ್ಲಿಕಟ್ಟುವಿಗೆ ಅನುಮತಿ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಜಾನಪದ ಕ್ರೀಡೆಯಾದ ಹೋರಿ ಹಬ್ಬಕ್ಕೆ ನಿಷೇಧ ಹೇರುವುದು ಸರಿಯಲ್ಲ. ಸರಕಾರ ರೈತರಿಗೆ ಖುಷಿ ಕೊಡುವ ಹೋರಿ ಹಬ್ಬಕ್ಕೆ ಅನುಮತಿ ನೀಡಬೇಕು ಎಂದು ಬಸವರಾಜ ಹೇಳಿದರು.
ಒಟ್ಟಿನಲ್ಲಿ ಬೆಳಿಗ್ಗೆಯಿಂದ ಆರಂಭವಾದ ಹೋರಿ ಹಬ್ಬ ಸಂಜೆಯವರೆಗೂ ನಡೆದಿದ್ದು, ಒಂದೊಂದು ಹೋರಿಗಳು ಭರ್ಜರಿಯಾಗಿ ಮಿಂಚಿನ ಓಟ ಓಡಿ ನೋಡುಗರ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ ಉಂಟು ಮಾಡಿದವು.