ಗ್ರಾಮ ಪಂಚಾಯಿತಿ ಚುನಾವಣಾ ಬಹಿಷ್ಕಾರ.. ಎಲ್ಲೆಲ್ಲಿ?
ಗ್ರಾಮದಲ್ಲಿ ಕೆಲವು ಕಡೆ ಗ್ರಾಮ ಪಂಚಾಯಿತಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಯಾವ ಯಾವ ಗ್ರಾಮದಲ್ಲಿ ಮತದಾನ ಸ್ಥಗಿತಗೊಂಡಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಚಿಕ್ಕತಿಮ್ಮಸಂದ್ರ ಗ್ರಾಮದಲ್ಲಿ ಒಟ್ಟು 210 ಮತಗಳ ಸಂಖ್ಯೆ ಇದೆ. ಈ ಪೈಕಿ 30 ಮತಗಳನ್ನು ಯವರೆ ಗ್ರಾಮ ಪಂಚಾಯಿತಿಯ ಬಿ.ಹೊಸಹಳ್ಳಿ ಗ್ರಾಮಕ್ಕೆ ಶಿಫ್ಟ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದು, ತಹಶೀಲ್ದಾರರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಚಾಮರಾಜನಗರ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮತದಾನ ಸ್ಥಗಿತ:
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇರುವ ಪಡಸಲನತ್ತದಲ್ಲಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹಳ್ಳಕ್ಕೆ ಬಿದ್ದು ಹಲಗ ತಂಬಡಿ(65) ಎಂಬವರು ನಿನ್ನೆ(ಡಿ.26) ಮರಣ ಹೊಂದಿದ್ದಾರೆ. ಈ ಕಾರಣದಿಂದ ಪಡಸಲನತ್ತ ಗ್ರಾಮದ ಮತಗಟ್ಟೆ ಸಂಖ್ಯೆ 3ರಲ್ಲಿ ಮತದಾನ ಸ್ಥಗಿತಗೊಂಡಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತಹಾಕಲು ಗ್ರಾಮಸ್ಥರು ಮುಂದಾಗಲಿಲ್ಲ. ಚುನಾವಣೆ ಸ್ಥಗಿತಗೊಳಿಸುವಂತೆ ಮತಗಟ್ಟೆ ಅಧಿಕಾರಿಯಿಂದ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿದೆ.
ಬಾಗಲಕೋಟೆಯ ಕಲಾದಗಿ ಗ್ರಾಮದಲ್ಲಿ ಕೆಲಕಾಲ ಮತದಾನ ಸ್ಥಗಿತ:
ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು ಬದಲಾದ ಹಿನ್ನೆಲೆಯಲ್ಲಿ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಮತಗಟ್ಟೆ ಸಂಖ್ಯೆ 51 ರಲ್ಲಿ ತಾತ್ಕಾಲಿಕವಾಗಿ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಅಭ್ಯರ್ಥಿಗಳಾದ ಹಸನ್ ಅಹ್ಮದ್ ರೋಣದ ಹಾಗೂ ಶಹನಾಜ ಬೇಗಂ ಅವರ ಚಿಹ್ನೆಗಳು ಬದಲಾಗಿದ್ದವು. ಇದರಿಂದ ಕೆಲಕಾಲ ಮತದಾನ ಸ್ಥಗಿತಗೊಂಡಿದ್ದರೂ, ಹೊಸ ಮತಪತ್ರದೊಂದಿಗೆ ಬೆಳಗ್ಗೆ 11 ಗಂಟೆಗೆ ಮತ್ತೆ ಮತದಾನ ಆರಂಭಿಸಲು ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.
ಮೈಸೂರಿನ ಇಮ್ಮಾವು ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರ:
ಏಷಿಯನ್ ಪೈಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ಭರವಸೆ ಈಡೇರಿಸದ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ ವರುಣ ಕ್ಷೇತ್ರದ ಇಮ್ಮಾವು ಮತದಾನ ಬಹಿಷ್ಕರಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮತಗಟ್ಟೆ ನಡೆಯ ಬೇಕಿದ್ದ ಸರ್ಕಾರಿ ಶಾಲೆಯಲ್ಲಿ ಬೀಗವನ್ನು ತೆಗೆಯದೆ ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದಾರೆ.
ಗ್ರಾ.ಪಂ ಚುನಾವಣೆ: ಗ್ರಾಮ ಪಂಚಾಯಿತಿ RO ವಿರುದ್ಧ ನಿಯಮ ಉಲ್ಲಂಘನೆ ಆರೋಪ