ಉಡುಪಿ, ಜುಲೈ.25: ಕಾರ್ಕಳದಲ್ಲಿ ಪರಶುರಾಮ್ ಥೀಮ್ ಪಾರ್ಕ್ (Parashuram Theme Park) ಹಗರಣ ಪ್ರಕರಣಕ್ಕೆ ಸಂಬಂಧಿಸಿ ನಕಲಿ ಪರಶುರಾಮನ ಮೂರ್ತಿ ಸ್ಥಾಪನೆಯಲ್ಲಿ ಮೊದಲ ತಲೆದಂಡ ಬಿದ್ದಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ಕುಮಾರ್ ಅವರನ್ನು ಸಸ್ಪೆಂಡ್ ಮಾಡಿ ಡಿಸಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಕಾರ್ಕಳದ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಿಸಲಾಗಿದ್ದ ಪರಶುರಾಮ್ ಥೀಮ್ ಪಾರ್ಕ್ನಲ್ಲಿ ನಕಲಿ ಪ್ರತಿಮೆಯನ್ನು ನಿರ್ಮಿಸಿದ್ದ ಆರೋಪ ಕೇಳಿ ಬಂದಿತ್ತು. ನಿರ್ಮಾಣದ ಗುಣಮಟ್ಟದ ಜೊತೆಗೆ ಧಾರ್ಮಿಕ ಭಾವನೆಗೆ ಅಪಚಾರ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ ಸಿಐಡಿ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಅಡ್ಡಿ ಉಂಟು ಮಾಡುವ ಮತ್ತು ಹಸ್ತಕ್ಷೇಪ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅಮಾನತು ಮಾಡಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕಾಲೇಜಿನ ಹಾಸ್ಟೆಲ್ನಲ್ಲಿ ಕಿರಿಯ ವಿದ್ಯಾರ್ಥಿಗಳನ್ನು ದೊಣ್ಣೆಯಿಂದ ಥಳಿಸಿದ ಸೀನಿಯರ್ಸ್, ವಿಡಿಯೋ ವೈರಲ್
ಕಳೆದ ಬಿಜೆಪಿ ಸರಕಾರದ ಅಧಿಕಾರದ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮನ ಥೀಂ ಪಾರ್ಕ್ ನಿರ್ಮಿಸಲಾಗಿತ್ತು. ಚುನಾವಣಾ ಪೂರ್ವದಲ್ಲಿ ಅಂದಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ನೂತನ ಥೀಂ ಪಾರ್ಕ್ ಮತ್ತು ಪರಶುರಾಮನ ಭವ್ಯ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದರು. ಬಳಿಕ ದಿನಗಳಲ್ಲಿ ಕಾಮಗಾರಿ ಬಾಕಿ ಇದೆ ಎನ್ನುವ ಕಾರಣಕ್ಕೆ ಥೀಂ ಪಾರ್ಕ್‌ಗೆ ಪ್ರವಾಸಿಗರ ನಿಷೇಧ ಹೇರಲಾಗಿತ್ತು.
ಇದು ಜನರಿಗೆ ಅನುಮಾನ ಬರುವಂತೆ ಮಾಡಿತ್ತು. ಈ ಪರಿಣಾಮ ತನಿಖೆ ನಡೆಸಿದಾಗ ಮೂರ್ತಿ ಅಸಲಿಯತ್ತು ಹೊರಬಿದ್ದಿತ್ತು. ಹಿತ್ತಾಳೆ ಮೂರ್ತಿಯ ಬದಲು ಫೈಬರ್ ಮೂರ್ತಿ ಸ್ಥಾಪನೆ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಇದಾದ ನಂತರ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿದ್ದ ಪರಶುರಾಮನ ಮೂರ್ತಿ ಏಕಾಏಕಿ ಕಾಣೆಯಾಗಿತ್ತು. ಈ ಕುರಿತು ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:56 pm, Thu, 25 July 24