Karnataka 2nd PUC Exam 2022: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದೀರಾ?; ಈ ನಿಯಮಗಳನ್ನು ಮರೆಯಬೇಡಿ

| Updated By: ಸುಷ್ಮಾ ಚಕ್ರೆ

Updated on: Apr 22, 2022 | 10:02 AM

Karnataka Second PUC Exam Guidelines: ಕರ್ನಾಕಟದ 1,076 ಕೇಂದ್ರಗಳಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ 2022 ಪರೀಕ್ಷೆಗಳು ಲಾಜಿಕ್ ಮತ್ತು ಬಿಸಿನೆಸ್ ಸ್ಟಡೀಸ್ ಪೇಪರ್‌ಗಳೊಂದಿಗೆ ಪ್ರಾರಂಭವಾಗುತ್ತವೆ. ಇಂದಿನಿಂದ ಮೇ 18ರವರೆಗೆ ಪರೀಕ್ಷೆಗಳು ನಡೆಯಲಿವೆ.

Karnataka 2nd PUC Exam 2022: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದೀರಾ?; ಈ ನಿಯಮಗಳನ್ನು ಮರೆಯಬೇಡಿ
ಪಿಯುಸಿ ವಿದ್ಯಾರ್ಥಿಗಳು
Follow us on

ಬೆಂಗಳೂರು: ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇಂದಿನಿಂದ (ಏಪ್ರಿಲ್ 22) ದ್ವಿತೀಯ ಪಿಯುಸಿ (Second PUC) ಪರೀಕ್ಷೆಯನ್ನು ನಡೆಸಲು ಸಿದ್ಧವಾಗಿದೆ. ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ 6,84,255 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ (Second PUC Exam) ಇಂದು ಬೆಳಿಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ. ಸೆಕೆಂಡ್ ಪಿಯುಸಿ ಪರೀಕ್ಷೆಗಳಿಗೆ (Karnataka 2nd PUC Exam) ಹಾಜರಾಗುವ ವಿದ್ಯಾರ್ಥಿಗಳು ತಮ್ಮೊಂದಿಗೆ ಪಿಯುಸಿ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನು ಕೊಂಡೊಯ್ಯಬೇಕಾಗುತ್ತದೆ. ಉಳಿದಂತೆ ಯಾವೆಲ್ಲ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ.

ರಾಜ್ಯಾದ್ಯಂತ 1,076 ಕೇಂದ್ರಗಳಲ್ಲಿ ನಡೆಯಲಿರುವ ಕರ್ನಾಟಕ ದ್ವಿತೀಯ ಪಿಯುಸಿ 2022 ಪರೀಕ್ಷೆಗಳು ಲಾಜಿಕ್ ಮತ್ತು ಬಿಸಿನೆಸ್ ಸ್ಟಡೀಸ್ ಪೇಪರ್‌ಗಳೊಂದಿಗೆ ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳು ಹೆಚ್ಚುವರಿಯಾಗಿ 15 ನಿಮಿಷಗಳ ಕಾಲ ಪ್ರಶ್ನೆ ಪತ್ರಿಕೆಯನ್ನು ಓದುವ ಸಮಯವನ್ನು ಸಹ ಪಡೆಯುತ್ತಾರೆ. ಇಂದಿನಿಂದ ಮೇ 18ರವರೆಗೆ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ರಾಜ್ಯದ ಒಟ್ಟು 1,076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟಾರೆ 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

ಸಂಪೂರ್ಣ ಪಿಯು ಪರೀಕ್ಷೆಯ ಪ್ರಕ್ರಿಯೆಯು ಪೊಲೀಸರ ಕಣ್ಗಾವಲಿನಲ್ಲಿ ನಡೆಯಲಿದೆ. 24 ಗಂಟೆಗಳ ಮೇಲ್ವಿಚಾರಣೆಗಾಗಿ ಸಿಸಿಟಿವಿ ಕ್ಯಾಮೆರಾಗಳು ಇರುತ್ತವೆ ಎಂದು ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯ ಅಕ್ರಮಗಳನ್ನು ಪರಿಶೀಲಿಸಲು ಸರ್ಕಾರವು ಸ್ಕ್ವಾಡ್‌ಗಳನ್ನು ಸಹ ಸ್ಥಾಪಿಸಿದೆ. ಹಿಂದಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರಗಳು ವರದಿಯಾದ ಕರ್ನಾಟಕ ಪಿಯುಸಿ 2ನೇ ವರ್ಷದ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುವುದು.

ಕರ್ನಾಟಕ 2ನೇ ಪಿಯುಸಿ ಪರೀಕ್ಷೆಯ ಮಾರ್ಗಸೂಚಿಗಳು ಹೀಗಿವೆ…

– ವಿದ್ಯಾರ್ಥಿಗಳು ಪರೀಕ್ಷಾ ಸಮಯಕ್ಕೆ ಕನಿಷ್ಠ 30 ನಿಮಿಷಗಳ ಮೊದಲು ಪರೀಕ್ಷಾ ಕೊಠಡಿಯನ್ನು ತಲುಪಬೇಕು.

– ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವ ಹಾಗಿಲ್ಲ.

– ಪರೀಕ್ಷಾ ಹಾಲ್ ಒಳಗೆ ಕ್ಯಾಲ್ಕುಲೇಟರ್ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ.

– ವಿದ್ಯಾರ್ಥಿಗಳು ಸಮವಸ್ತ್ರ ಅಥವಾ ಯಾವುದೇ ಧರ್ಮ ಸೂಚಕವಲ್ಲದ ಉಡುಗೆಯನ್ನು ಧರಿಸಬೇಕು.

– ವಿದ್ಯಾರ್ಥಿಗಳು ತಮ್ಮದೇ ಆದ ಪೆನ್, ರೂಲರ್‌ಗಳು ಸೇರಿದಂತೆ ಎಲ್ಲಾ ಲೇಖನ ಸಾಮಗ್ರಿಗಳನ್ನು ಕೊಂಡೊಯ್ಯಬೇಕಾಗುತ್ತದೆ.

– ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಓದಲು ಹೆಚ್ಚುವರಿಯಾಗಿ 15 ನಿಮಿಷಗಳ ಕಾಲಾವಕಾಶ ನೀಡಲಾಗುವುದು.

– ಪಿಯುಸಿ ಪರೀಕ್ಷೆಯ ವಿದ್ಯಾರ್ಥಿಗಳು PUE ಮತ್ತು ಅವರ ಸಂಸ್ಥೆಗಳು ಸೂಚಿಸಿದಂತೆ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು.

ಎಸ್ಎಸ್ಎಲ್​ಸಿ ಪರೀಕ್ಷೆಯಂತೆ ಪಿಯುಸಿ ಪರೀಕ್ಷೆಗೂ ಯಾವುದೇ ಧರ್ಮ ಸೂಚಕ ಉಡುಪು ಧರಿಸುವುದನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ. ಹೀಗಾಗಿ, ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ನಿಗದಿಪಡಿಸಿದ ಸಮವಸ್ತ್ರವನ್ನು ಧರಿಸಿ ಪರೀಕ್ಷೆ ಬರೆಯಬೇಕು. ಸಮವಸ್ತ್ರ ಇಲ್ಲದಿದ್ದಲ್ಲಿ ಯಾವುದೇ ಧರ್ಮ ಸೂಚಕವಲ್ಲದ ಉಡುಪು ಧರಿಸಿ ಹಾಜರಾಗಲು ಅವಕಾಶ ನೀಡಲಾಗಿದೆ.

ಈ ಬಾರಿ 3,46,936 ವಿದ್ಯಾರ್ಥಿಗಳು, 3,37,319 ವಿದ್ಯಾರ್ಥಿನಿಯರು, 6,00,519 ರೆಗ್ಯುಲರ್ ವಿದ್ಯಾರ್ಥಿಗಳು, 61,808 ಪುನರಾವರ್ತಿತರು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. 21,928 ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 2,28,167 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 2,45,519 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಲಿದ್ದಾರೆ. ಒಟ್ಟು 5,241 ಕಾಲೇಜುಗಳಿಂದ ದ್ವಿತೀಯ ಪಿಯು ಪರೀಕ್ಷೆಗೆ ನೋಂದಣಿ ಮಾಡಕೊಳ್ಳಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಪರೀಕ್ಷಾ ಕೇಂದ್ರದ ಬಳಿಯ ಜೆರಾಕ್ಸ್ ಅಂಗಡಿ ಮುಚ್ಚುವಂತೆ ಆದೇಶಿಸಲಾಗಿದೆ. ಪರೀಕ್ಷೆ ಪ್ರವೇಶ ಪತ್ರ ತೋರಿಸಿ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು.

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ:
ಏಪ್ರಿಲ್ 22- ವ್ಯವಹಾರ ಅಧ್ಯಯನ ಪರೀಕ್ಷೆ
ಏಪ್ರಿಲ್ 23- ಗಣಿತ ಪರೀಕ್ಷೆ,
ಏಪ್ರಿಲ್ 25- ಅರ್ಥಶಾಸ್ತ್ರ
ಏಪ್ರಿಲ್ 26- ಮನಃಶಾಸ್ತ್ರ, ರಾಸಾಯನ ಶಾಸ್ತ್ರ ಪರೀಕ್ಷೆ
ಏಪ್ರಿಲ್ 27- ತಮಿಳು, ತೆಲುಗು, ಮಲಯಾಳಂ, ಮರಾಠಿ
ಏಪ್ರಿಲ್ 27- ಉರ್ದು, ಸಂಸ್ಕೃತ, ಫ್ರೆಂಚ್
ಏಪ್ರಿಲ್ 28- ಕನ್ನಡ, ಅರೇಬಿಕ್ ಭಾಷಾ ಪರೀಕ್ಷೆ
ಮೇ 2- ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ
ಮೇ 5- ಇಂಗ್ಲಿಷ್ ಭಾಷಾ ಪರೀಕ್ಷೆ
ಮೇ 10- ಇತಿಹಾಸ, ಭೌತಶಾಸ್ತ್ರ ಪರೀಕ್ಷೆ
ಮೇ 12 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ
ಮೇ 14 – ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮೇ 17 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ
ಮೇ 17 – ಹೋಮ್ ಸೈನ್ಸ್,
ಮೇ 18 – ಹಿಂದಿ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: Karnataka Second PU Exams: ಸೆಕೆಂಡ್ ಪಿಯುಸಿ ಪರೀಕ್ಷೆಗೆ ಕೌಂಟ್ಡೌನ್, ಪರೀಕ್ಷೆಗೆ ಹಿಜಾಬ್ ಧರಿಸಿದ್ರೆ ನೋ ಎಂಟ್ರಿ

ಏಪ್ರಿಲ್ 22ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ; ಪಿಯುಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ

Published On - 9:58 am, Fri, 22 April 22