ಕೋಲಾರ/ಕೊಪ್ಪಳ, ಆಗಸ್ಟ್ 30: ಕಳೆದ ಮೂರು ತಿಂಗಳಿಂದ ಗೌರವ ಧನ ಬಾರದೆ ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಹಾಗೂ ಸಹಾಯಕರು ಪರದಾಡುತ್ತಿದ್ದಾರೆ. ಕೋಲಾರ, ಕೊಪ್ಪಳ ಸೇರಿದಂತೆ ರಾಜ್ಯದ ಬಹುತೇಕ ಅಂಗನವಾಡಿ (Anganwadi) ಕಾರ್ಯಕರ್ತೆಯರು ಮತ್ತು ಸಹಾಯಕರ ಖಾತೆಗಳಿಗೆ ಗೌರವ ಧನ ಜಮೆಯಾಗಿಲ್ಲ. ಕೋಲಾರ (Kolar) ಜಿಲ್ಲೆಯೊಂದರಲ್ಲೇ ಸುಮಾರು 4 ಸಾವಿರ ಕ್ಕೂ ಹೆಚ್ಚು ಅಂಗನಾಡಿ ಕಾರ್ಯಕರ್ತೆಯರಿದ್ದಾರೆ. ಇನ್ನು ಕೊಪ್ಪಳ (Koppal) ಜಿಲ್ಲೆಯಲ್ಲಿ 3,500 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿದ್ದಾರೆ.
ಕಳೆದ ಮೂರು ತಿಂಗಳಿಂದ ಗೌರವ ಧನ ನೀಡಿಲ್ಲ. ಅಂಗನವಾಡಿ ಮಕ್ಕಳಿಗೆ ನೀಡುವ ತರಕಾರಿ, ಮೊಟ್ಟೆ, ಸೇರಿದಂತೆ ಅಂಗನವಾಡಿ ನಿರ್ವಹಣೆಗೂ ಹಣವಿಲ್ಲ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳ ಬಾಡಿಗೆ ಹಣವೂ ಬಾಕಿ ಇದೆ. ಗೌರವಧನ ನೀಡಿದ ಹಿನ್ನೆಲೆಯಲ್ಲಿ ಪರದಾಡುತ್ತಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.
ಗೌರವ ಧನ ಸಿಗದೆ ನಮ್ಮ ಮಕ್ಕಳ ಪಾಲನೆ, ಪೋಷಣೆ ಸಂಕಷ್ಟವಾಗಿದೆ. ಹೀಗೆ ಮುಂದುವರೆದರೆ ನಮ್ಮ ಮಕ್ಕಳ ಪಾಲನೆ-ಪೋಷಣೆ ಹೇಗೆ ಮಾಡುವುದು? ಮನೆ ಬಾಡಿಗೆ, ಶಾಲೆ ಪೀಸ್, ದಿನಸಿ ಖರೀದಿ ಮಾಡುವುದು ಹೇಗೆ? ಎಂದು ಅಂಗನವಾಡಿ ಕಾರ್ಯಕರ್ತೆಯರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಅಂಗನವಾಡಿಗೆ ನುಗ್ಗಿ ಕಾರ್ಯಕರ್ತೆಯ 42 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಕಳ್ಳ
ಯಾವ ತಿಂಗಳು ಕೂಡ ನಮಗೆ ಗೌರವ ಧನ ಸರಿಯಾಗಿ ಬರುತ್ತಿಲ್ಲ. ಕೆಲಸ ಮಾಡಿ ಗೌರವ ಧನಕ್ಕಾಗಿ ನಾವು ತಿಂಗಳುಗಟ್ಟಲೇ ಕಾಯಬೇಕು. ನಮ್ಮ ಸಣ್ಣ ತಪ್ಪಿಗೆ ಶಿಕ್ಷೆ ನೀಡುವ ಅಧಿಕಾರಿಗಳು, ನಮ್ಮ ಸಮಸ್ಯೆ ಮಾತ್ರ ಕೇಳುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ದುರಸ್ಥಿಗೆ ಪ್ರತಿವರ್ಷ ಹಣ ನೀಡಲಾಗುತ್ತಿತ್ತು. ರೆಜಿಸ್ಟರ್ಗಳ ಖರೀದಿಗೆ ಈ ಮೊದಲು ಪ್ರತಿವರ್ಷ ಅನುದಾನ ನೀಡಲಾಗುತ್ತಿತ್ತು. ಕಳೆದ ಒಂದು ವರ್ಷದಿಂದ ಸಣ್ಣ ಕೆಲಸಕ್ಕೂ ಕೂಡ ಅನುದಾನ ನೀಡಿಲ್ಲ. ಅನುದಾನ ಇಲ್ಲ ಅಂತ ಹೇಳಿ ಮೇಲಾಧಿಕಾರಿಗಳು ಸುಮ್ಮನಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದಿಂದ ಪ್ರತಿವರ್ಷ ಅಂಗನವಾಡಿ ದುರಸ್ತಿಗೆ ಹಣ ಬರುತ್ತಿತ್ತು. ಆದರೆ, ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂದ ಅನುದಾನ ಕೂಡ ನೀಡಿಲ್ಲ. ಹೀಗಾಗಿ ತರಕಾರಿ, ಮೊಟ್ಟೆ, ಸೇರಿದಂತೆ ಅಂಗನವಾಡಿ ನಿರ್ವಹಣೆ ಮತ್ತು ಗೌರವ ಧನ ನೀಡಲು ಹಣವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Fri, 30 August 24