ಬೆಂಗಳೂರು, ಡಿಸೆಂಬರ್ 17: ಒಂಬತ್ತು ತಿಂಗಳುಗಳಿಂದ ಹೈನುಗಾರರಿಗೆ ಕರ್ನಾಟ ಸರ್ಕಾರ ಪ್ರೋತ್ಸಾಹಧನ ನೀಡಿಲ್ಲ. ಇದಕ್ಕೆ ‘ಹಣವಿಲ್ಲ’ ಎಂಬ ಕಾರಣ ನೀಡಲಾಗಿದೆ ಎಂದು ವರದಿಯಾಗಿದೆ. ಕ್ಷೀರಧಾರೆ ಯೋಜನೆಯಡಿ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ ಸರ್ಕಾರ 5 ರೂ. ಪ್ರೋತ್ಸಾಹಧನ ನೀಡಬೇಕಿದೆ.
ಈ ಬಗ್ಗೆ ಪ್ರಸ್ತಾವನೆ ಹಣಕಾಸು ಇಲಾಖೆ ಮುಂದೆ ಬಾಕಿಯಿರುವುದರಿಂದ ರೈತರಿಗೆ ಪ್ರೋತ್ಸಾಹಧನ ಪಾವತಿಯಾಗಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಒಪ್ಪಿಕೊಂಡಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ರಾಜ್ಯದಲ್ಲಿ 16 ಹಾಲು ಒಕ್ಕೂಟಗಳಿವೆ. ಸರಾಸರಿಯಾಗಿ, ಅವರು ಪ್ರತಿದಿನ ಒಂದು ಕೋಟಿ ಲೀಟರ್ ಹಾಲನ್ನು ಸಂಗ್ರಹಿಸುತ್ತಾರೆ. ಹೈನುಗಾರಿಕೆಯಲ್ಲಿ ಕರ್ನಾಟಕವನ್ನು ಅಗ್ರ ರಾಜ್ಯವನ್ನಾಗಿ ಮಾಡುತ್ತಾರೆ. ಪ್ರತಿ ಲೀಟರ್‌ಗೆ 2 ರೂ.ನಂತೆ ಹೈನುಗಾರರಿಗೆ ಪ್ರೋತ್ಸಾಹಧನ ನೀಡುವ ಯೋಜನೆ 2008ರಲ್ಲಿ ಆರಂಭಿಸಲಾಗಿತ್ತು. 2013ರಲ್ಲಿ ಲೀಟರ್‌ಗೆ 4 ರೂ.ಗೆ ಏರಿಕೆಯಾಗಿದ್ದು, 2016ರಲ್ಲಿ 5 ರೂ.ಗೆ ಹೆಚ್ಚಿಸಲಾಗಿತ್ತು.
ಹಾಲಿನ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಹೆಚ್ಚಿಸಲು ಕಾಂಗ್ರೆಸ್ ಒಲವು ಹೊಂದಿದ್ದರೂ ಜಾರಿಗೆ ಬರಲಿಲ್ಲ. 2023ರ ವಿಧಾನಸಭೆ ಚುನಾವಣೆಗೂ ಮುನ್ನ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ 6 ರೂ.ಗೆ ಹೆಚ್ಚಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು.
2024ರ ಜೂನ್‌ನಿಂದ 2024ರ ಅಕ್ಟೋಬರ್‌ವರೆಗೆ ಪ್ರೋತ್ಸಾಹ ಧನ ಪಾವತಿ ಮಾಡಿಲ್ಲ. ರೈತರಿಗೆ ಪಾವತಿಸಬೇಕಾದ ಮೊತ್ತ 606.69 ಕೋಟಿ ರೂ. ಬಾಕಿ ಇದೆ ಎಂದು ವೆಂಕಟೇಶ್ ಅವರು ವಿಧಾನಸಭೆಗೆ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯದ ಹೈನುಗಾರರಿಗೆ ಅಕ್ಟೋಬರ್ ತಿಂಗಳಿಗೆ 6.85 ಕೋಟಿ ರೂ. ಪಾವತಿಸಬೇಕಿದ್ದರೆ, ಎಸ್‌ಟಿ ರೈತರಿಗೆ 2024ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಇನ್ನೂ 9 ಕೋಟಿ ರೂ. ಪಾವತಿಯಾಗಬೇಕಿದೆ. ಬಾಕಿ ಹಣವನ್ನು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸುದೀರ್ಘ 15 ಗಂಟೆ ವಿಧಾನಸಭೆ ಕಲಾಪ, ರಾತ್ರಿ 1 ಗಂಟೆವರೆಗೂ ನಡೆದ ಅಧಿವೇಶನ: ದಶಕದ ಬಳಿಕ ದಾಖಲೆ
ರೈತರಿಗೆ ಪ್ರೋತ್ಸಾಹಧನ ನೀಡದಿರುವುದರಿಂದ ಸದ್ಯ ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಕಡಿಮೆ ನೀಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 38 ಲಕ್ಷ ಹೈನುಗಾರರಿದ್ದು, ಅವರಲ್ಲಿ ಶೇ 90ಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ. ರಾಜ್ಯ ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತದೆ, ಆದರೆ ಅವರಿಗೆ ಪ್ರೋತ್ಸಾಹಧನ ನೀಡುವಲ್ಲಿ ಮೌನವಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಟೀಕಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 am, Tue, 17 December 24